ಸಕ್ಕರೆ ನಾಡಿನ ಕನ್ನಡ ನುಡಿ ಹಬ್ಬಕ್ಕೆ ಸರ್ವಾಧ್ಯಕ್ಷರು ಯಾರು?

ಸಕ್ಕರೆ ನಾಡಿನಲ್ಲಿ ಡಿಸೆಂಬರ್‌ 20ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ಸಾಧಕರನ್ನು ಪರಿಗಣಿಸಬೇಕೆಂಬ ಒಂದು ರೀತಿಯ ಹಕ್ಕೋತ್ತಾಯ ಆರಂಭವಾಗಿದೆ. ಈ ಹಕ್ಕೊತ್ತಾಯದ ಹಿಂದಿನ ಆಶಯವೇನು? ಈ ಪ್ರಶ್ನೆಯನ್ನು ಯಾವ ಸ್ತರದಲ್ಲಿ ಕಾಣಬೇಕು ಎಂಬ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿದೆ.

Update: 2024-09-05 08:32 GMT
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ಕನ್ನಡಿಗ ಸಾಧಕರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಒತ್ತಡ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಹೆಚ್ಚುತ್ತಿರುವಂತೆ ಕಾಣುತ್ತದೆ.
Click the Play button to listen to article

ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಇದೇ ರೀತಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 86 ವರ್ಷದ ಇತಿಹಾಸವಿದೆ. ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್‌ ಕಾಲಾಂತರದಲ್ಲಿ ತನ್ನ ನಿಲುವುಗಳಲ್ಲಿ ಮತ್ತು ಕನ್ನಡ ನಾಡು-ನುಡಿಯನ್ನು ಸಂಭ್ರಮಿಸುವಲ್ಲಿ ಹಲವು ರೂಪಾಂತರಗಳನ್ನು ಕಂಡಿದೆ. ಯಾವುದೇ ಭಾಷೆಯ ಜನರನ್ನು ಒಂದೇ ಸೂತ್ರದಲ್ಲಿ ಬೆಸೆಯುವ ಸಾಮರ್ಥ್ಯ ಆ ನೆಲದ ಸಾಹಿತ್ಯಕ್ಕಿರುತ್ತದೆ ಎಂಬುದು ಸಾರ್ವತ್ರಿಕ ಸತ್ಯ. ಹಾಗೆಯೇ ಕನ್ನಡ ಸಾಹಿತ್ಯದ ಮೂಲಕ ಕನ್ನಡಿಗರನ್ನು ಭೂತ, ಭವಿಷ್ಯ, ವರ್ತಮಾನದೊಡನೆ ಬೆಸೆಯುವಂತೆ ಮಾಡುವ ಹಾಗೆಯೇ ಭಾಷೆಯ ಕಾರಣಕ್ಕೆ ಎಲ್ಲ ಕನ್ನಡದ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಕೆಲಸ ಮಾಡುವುದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.


ಹಾಗೆಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಮಾನದಂಡಗಳು ಕೂಡ ಬದಲಾಗುವ ಹಂತ ತಲುಪಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆ ಏಳಲು ಕಾರಣವಿಷ್ಟೆ. ಕನ್ನಡ ಸಾಹಿತ್ಯ ಪರಿಷತ್‌ ಕೇವಲ ಸಾಹಿತಿಗಳ ಪರಿಷತ್‌ ಅಲ್ಲ. ಅದು ಕನ್ನಡಿಗರ ಪರಿಷತ್. ಹೀಗಾಗಿ ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್‌ 20ರಿಂದ 23ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ಕನ್ನಡಿಗ ಸಾಧಕರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಹೊಸ ಪರಂಪರೆಯನ್ನು ಹುಟ್ಟುಹಾಕಬೇಕು ಎಂಬ ಒತ್ತಡ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಹೆಚ್ಚುತ್ತಿರುವಂತೆ ಕಾಣುತ್ತದೆ.

ಈ ನುಡಿ ಜಾತ್ರೆಗೆ ಸಾಹಿತ್ಯೇತರ ಸಾಧಕರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೇ? ಬೇಡವೇ? ಎಂಬ ಗಾಢವಾದ ಚರ್ಚೆ ಆರಂಭವಾದಂತೆ ಕಾಣುತ್ತಿದೆ. ಹಾಗಾಗಿ ಸರ್ವಾಧ್ಯಕ್ಷರ ಪಟ್ಟಕ್ಕಾಗಿ ಕನ್ನಡ ಪುಸ್ತಕ ಬರೆಯುವ ಮಠಾಧೀಶರು, ಚಲನಚಿತ್ರ ಸಾಹಿತ್ಯ, ಗೀತೆ, ಹಿನ್ನೆಲೆ ಸಂಗೀತ ನೀಡುತ್ತಿರುವ ಪ್ರತಿಭಾವಂತರು, ಕನ್ನಡದ ಅಭಿವೃದ್ಧಿಯಲ್ಲಿ ಕೈ ಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರು ಈ ಬಾರಿ ತಮ್ಮ ಸರದಿ ಬರಬಹುದೇ ಎಂದು ಆಶಾಭಾವದಿಂದ ಕಾಯುತ್ತಿರುವಂತೆ ಭಾಸವಾಗುತ್ತಿದೆ.

ಕನ್ನಡ ಭಾಷೆ, ಕನ್ನಡ ನಾಡು ಕೇವಲ ಸಾಹಿತಿಗಳಿಂದ ಮಾತ್ರ ಮುನ್ನಡೆಯುತ್ತಿಲ್ಲ. ಕನ್ನಡಕ್ಕಾಗಿ ಹೋರಾಡಿದ ಬಹಳ ಮಂದಿಯಿಂದಾಗಿ ಕನ್ನಡ ನಾಡಿಗೆ ಹೋರ ರಾಜ್ಯಗಳಿಂದ ವಲಸೆ ಬರುತ್ತಿರುವ ಸಂಖ್ಯೆಗೆ ಕಡಿವಾಣ ಬಿದ್ದಿದೆ. ಆದ್ದರಿಂದ ಕನ್ನಡ ನುಡಿ, ನೆಲ, ಜಲಕ್ಕಾಗಿ ಹೋರಾಡುತ್ತಲೇ ಜೀವನ ಸವೆಸಿದವರನ್ನು ಈ ಬಾರಿ ಕನ್ನಡ ಸಾಹಿತ್ಯದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಅಪಸ್ವರದ ಆಲಾಪನೆ

ಆದರೆ, ಈ ಹೊಸ ಪರಂಪರೆಯನ್ನು ಹುಟ್ಟುಹಾಕುವ ಹೊಸ ಆಲೋಚನೆಗೆ ಅಪಸ್ವರದ ಆಲಾಪನೆಯೂ ಕೇಳಿ ಬರುತ್ತಿದೆ. ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್‌ರಂಥ ಹಲವರು “ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹೊರತು ಪಡಿಸಿ, ಬೇರೆ ಬೇರೆ ಕ್ಷೇತ್ರಗಳವರು, ಆಯಾ ಕ್ಷೇತ್ರದ ವಾರ್ಷಿಕ ಸಮ್ಮೇಳನ ಮಾಡಿಕೊಂಡು, ಆಯಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ” ಎಂದು ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ.

ಸಾಹಿತಿಗಳೇ ಏಕೆ?

ಸಾಹಿತಿಗಳ ಆಲೋಚನಾ ಸರಣಿಯನ್ನು ತಪ್ಪೆಂದು ಹೇಳಲಾಗುವುದಿಲ್ಲ. ಸಾಹಿತಿಗಳು ಶ್ರೇಷ್ಠರಲ್ಲ ಎನ್ನು ವಾದವೂ ಅಲ್ಲ. ಸಾಹಿತಿಗಳು, ಕವಿಗಳು ಕನ್ನಡ ಬದುಕಿನ ಎಲ್ಲ ಸಂಗತಿಗಳ ಬಗ್ಗೆ ಆಲೋಚನೆ ಮಾಡುತ್ತಾರೆ. ಅವರ ಚಿಂತನೆ ಅಕ್ಷರ ರೂಪ ಪಡೆದುಕೊಳ್ಳುತ್ತದೆ. ಎನ್ನುವ ಕಾರಣಕ್ಕಾಗಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಸರ್ವಾಧ್ಯಕ್ಷರಾಗಬೇಕೆಂಬ ವಾದ ತನ್ನ ಅರ್ಥವನ್ನು ಪಡೆದುಕೊಳ್ಳುತ್ತದೆ. ಬದುಕಿನ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಕೂಡ ಸಮ್ಮೇಳನದಲ್ಲಿ ಚರ್ಚೆ ಜಿಜ್ಞಾಸೆ ನಡೆಯಬೇಕೆಂಬ ಕಾರಣಕ್ಕೆ ವಿವಿಧ ಕ್ಷೇತ್ರಗಳ ಬಗ್ಗೆ ಗೋಷ್ಠಿಗಳು ನಡೆಯುತ್ತವೆ. ಆದರೆ ಸಾಹಿತಿ ಒಂದರ್ಥದಲ್ಲಿ ಕನ್ನಡದ ಸಾಂಸ್ಕೃತಿಕ ಮನಸ್ಸಿನ ಪ್ರತಿನಿಧಿಯಂತೆ. ಎಲ್ಲ ರಂಗಗಳನ್ನು ಅಂತರಂಗೀಕರಿಸಿಕೊಂಡು, ಅದಕ್ಕೆ ಅಕ್ಷರ ರೂಪ ಕೊಡುವುದರಿಂದ ಸಾಹಿತಿಗೆ ಅಕ್ಷರ ಹಬ್ಬದಲ್ಲಿ ಪ್ರಾಮುಖ್ಯತೆ ನೀಡಬೇಕೆಂಬ ಮಾತಿನಲ್ಲಿ ಅರ್ಥವಿದೆ ಎಂದೆ ಬಹುಜನರ ಅಭಿಪ್ರಾಯ.

ಸಾಮಾನ್ಯವಾಗಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಕನ್ನಡದ ನಾಡು, ನುಡಿ, ಸಂಸ್ಕೃತಿ ಮತ್ತು ಕನ್ನಡ ನೆಲದ ಮೌಲ್ಯಗಳನ್ನು ಮತ್ತಷ್ಟು ಉನ್ನತೀಕರಿಸಿದ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪರಂಪರೆಯನ್ನು ಮುಂದುವರೆಸಿ, ಅದರ ಪರಂಪರಾಗತ ಗೌರವವನ್ನು ಕಾಪಾಡಬೇಕೆಂದು ಇನ್ನು ಕೆಲವು ಸಾಹಿತ್ಯ ವಲಯದ ಪ್ರತಿನಿಧಿಗಳು ಆಭಿಪ್ರಾಯ ಪಡುತ್ತಿದ್ದಾರೆ.

ಇನ್ನೂ ಚರ್ಚೆಯ ಹಂತ

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮಹೇಶ್‌ ಜೋಶಿ ಅವರನ್ನು ಮಾತನಾಡಿಸಿದರೆ, ನುಡಿ ಜಾತ್ರೆಗೆ ಸಾಹಿತ್ಯೇತರ ಸಾಧಕರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಬೇಡಿಕೆ ಇರುವುದು ನಿಜ. ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬೇರೆ ಬೇರೆ ಸಾಧಕರನ್ನು ಪರಿಗಣಿಸಬೇಕೆಂಬ ಸಲಹೆಗಳು ಹಲವು ಕ್ಷೇತ್ರಗಳಿಂದ ವ್ಯಕ್ತವಾಗುತ್ತಿವೆ. ಅಂಥವರು ಕನ್ನಡ ಭಾಷೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ತಂದು ಕೊಟ್ಟಿರಬೇಕು. ಅಂಥವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರನ್ನಾಗಿಸಬೇಕು ಎಂಬ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪರಿಷತ್ತಿನ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲು ಇನ್ನೂ ಸಾಕಷ್ಟು ಕಾಲಾವಕಾವಿದೆ. ನವೆಂಬರ್‌ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಡಿಸೆಂಬರ್‌ ತಿಂಗಳ ಮೊದಲ ವಾರದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡು ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಪರಿಷತ್ತಿನ ನಿಲುವಿನ ಬಗ್ಗೆ ವಿವರಣೆ ನೀಡುತ್ತಾರೆ.

ಮಹಿಳಾ ಪ್ರಾತಿನಿಧ್ಯ?

ಈ ನಡುವೆ ಕನ್ನಡ ನುಡಿ ಜಾತ್ರೆಯ ಸರ್ವಾಧ್ಯಕ್ಷರನ್ನಾಗಿ ಮಹಿಳೆಯರನ್ನು ಈ ಬಾರಿ ಆಯ್ಕೆ ಮಾಡಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಕಳೆದ 86 ವರ್ಷಗಳಲ್ಲಿ ಕೇವಲ ನಾಲ್ಕು ಮಂದಿ ಮಹಿಳೆಯರನ್ನು ಮಾತ್ರ ಈ ಅಗ್ರಸ್ಥಾನಕ್ಕೆ ಆಯ್ಕೆ ಮಾಡಿ ಕನ್ನಡದ ತೇರಿನಲ್ಲಿ ಕುಳ್ಳಿರಿಸಲಾಗಿದೆ. ಅಷ್ಟೆ. ಪ್ರತಿ ಸಮ್ಮೇಳನದಲ್ಲಿಯೂ ಪುರುಷರಿಗೆ ಪ್ರಾಧಾನ್ಯ ಸಿಕ್ಕುತ್ತಿದೆ. ಕನ್ನಡದ ಪ್ರತಿಭಾನ್ವಿತ ಲೇಖಕಿಯರು, ಕವಿಯತ್ರಿಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹಾಗಾಗಿ ಈ ಬಾರಿ ನಮ್ಮ ಬಾರಿಯಾಗಲಿ ಎಂದು ಹಲವು ಮಹಿಳಾ ಸಾಹಿತಿಗಳೂ ಒತ್ತಾಯಿಸುತ್ತಿದ್ದಾರೆ.

ಇಷ್ಟೊಂದು ಮಂದಿ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ಸಜ್ಜಾಗಿರುವಾಗ. ಯಾರ ಯಾರ ಹೆಸರುಗಳು ಪ್ರಸ್ತಾಪವಾಗುತ್ತಿದೆ ಎಂದು ಹುಡುಕಾಟ ನಡೆಸಿದರೆ, ಕಾಣಬರುವ ಖ್ಯಾತರ ಪಟ್ಟಿ ಈ ರೀತಿ ಬೆಳೆಯುತ್ತದೆ.

ಯಾರು ಹಿತವರು ಇಷ್ಟು ಮಂದಿಯೊಳಗೆ?

ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುವ ಮೂಲಕ, ರಂಗಭೂಮಿಯನ್ನು ಕಟ್ಟುವುದರ ಮೂಲಕ ಕನ್ನಡ ನಾಡಿಗೆ ಕೊಡುಗೆ ನೀಡಿರುವ ಸಾಣೆಹಳ್ಳಿ ಸ್ವಾಮೀಜಿ, ಭಾಲ್ಕಿ ಮಠದ ಗುರುಗಳಾದ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನ್ಯಾಯಾಗ ಕ್ಷೇತ್ರದಲ್ಲಿ ಕನ್ನಡದಲ್ಲಿ ತೀರ್ಪು ಪ್ರಕಟಿಸುವ ಮೂಲಕ ಮಾತೃ ಭಾಷೆಗೆ ಗೌರವ ತಂದುಕೊಟ್ಟ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ ದಾಸ್‌, ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌, ಹಾಗೂ ನ್ಯಾಯಮೂರ್ತಿ ಗೋಪಾಲಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಹಾಗೆಯೇ ಕನ್ನಡ ಚಲನಚಿತ್ರ ರಂಗದ ದೃಷ್ಟಿಯಿಂದ ಗಮನಿಸಿದರೆ, ಹಲವು ಕನ್ನಡ ಚಿತ್ರಗಳಿಗೆ, ಕಥೆ, ಚಿತ್ರಕಥೆ, ಸಂಗೀತ, ಸಾಹಿತ್ಯ ಸಂಭಾಷಣೆ ಒದಗಿಸಿದ ʻಗುರು ಸಮಾನʼರೆಂದೇ ಭಾವಿಸಲಾದ ಹಂಸಲೇಖಾ ಅವರ ಹೆಸರೂ ಕೇಳಿಬರುತ್ತಿದೆ. ಕ್ರೀಡಾ ಕ್ಷೇತ್ರದಿಂದ ರಾಹುಲ್‌ ದ್ರಾವಿಡ್‌, ಗುಂಡಪ್ಪ ವಿಶ್ವನಾಥ್‌ ಹೆಸರು ಪ್ರಸ್ತಾಪವಾಗುತ್ತಿದೆ. ವಿಜ್ಞಾನ ಕ್ಷೇತ್ರದಿಂದ ವಿಜ್ಞಾನಿ ಸಿ ಎನ್‌ ಆರ್‌ ರಾವ್‌ ಅವರ ಹೆಸರನ್ನೂ ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಈ ನಡುವೆ ಕೆಲವು ಹಿರಿಯ ಸಾಹಿತಿಗಳ ಪರವಾಗಿ, ಹಲವು ಕಿರಿಯ ಸಾಹಿತಿಗಳು ಲಾಬಿ ನಡೆಸುತ್ತಿದ್ದಾರೆ ಎಂದೂ, ಗುಟ್ಟಾಗಿ ಕೆಲವರು ಹೇಳುತ್ತಾರೆ.

ಈ ಬೆಳವಣಿಗೆಯ ನಡುವೆ, ಹೊಸ ಆಲೋಚನೆಯೊಂದು ಮೂಡಿರುವುದರಿಂದ ಅದರ ಬಗ್ಗೆ ವಿಸ್ತೃತ ಚರ್ಚೆಗಳು ನಡೆದು ವಿವೇಕ, ವಿವೇಚನೆ ಮತ್ತು ಸಮಚಿತ್ತದಿಂದ ತೀರ್ಮಾನಕ್ಕೆ ಬರುವುದು ಉತ್ತಮ ಎಂಬ ಮಾತು ಕೇಳಿಬರುತ್ತಿದೆ.

“ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನಿನಮ್ಮಗೆ ಕಲ್ಪತರು….” ಎಂಬ ಕುವೆಂಪು ಅವರ ಕಾವ್ಯದ ಭಾವದಂತೆ ಯಾರಾದರೂ ಸರಿ ಕನ್ನಡತನವನ್ನು ಕಾಪಾಡುವವರು ಸರ್ವಾಧ್ಯಕ್ಷರಾಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಕನ್ನಡತನದ ಕನ್ನಡಿಗರು ಯಾರು? ಅಂತಿಮವಾಗಿ ಯಾರಿಗೆ ಸರ್ವಾಧ್ಯಕ್ಷರಾಗಿ ಕನ್ನಡದ ತೇರಿನಲ್ಲಿ ಕುಳಿತು, ಕನ್ನಡಿಗರಿಂದ ತೇರನ್ನು ಎಳೆಸಿಕೊಳ್ಳುವ ಭಾಗ್ಯ ಸಿಕ್ಕುತ್ತದೆ ಎಂಬುದು ಈಗ ಸದ್ಯಕ್ಕೆ ಯಕ್ಷ ಪ್ರಶ್ನೆ.

Tags:    

Similar News