ಮಹಿಳೆಯ ಧೈರ್ಯ, ನಿಷ್ಪಕ್ಷಪಾತ ತನಿಖೆಯೇ ಯಶಸ್ಸಿಗೆ ಕಾರಣ': ಎಸ್​​ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್‌

ಸಂತ್ರಸ್ತೆಯು ಪೊಲೀಸರ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಪ್ರಕರಣ ದಾಖಲಾದ ದಿನದಿಂದಲೂ ತೀರ್ಪು ಬರುವವರೆಗೆ ಸಂತ್ರಸ್ತೆಯು ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ.;

Update: 2025-08-02 14:16 GMT

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಒತ್ತಡ ಬಂದಿರಲಿಲ್ಲ ಮತ್ತು ತಂಡವು ನಿರ್ಭೀತಿಯಿಂದ ತನಿಖೆ ನಡೆಸಲಾಗಿದೆ ಎಂದು ಐಎಸ್‌ಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ಹೇಳಿದ್ದಾರೆ. 

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆಯು ಪೊಲೀಸರ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಪ್ರಕರಣ ದಾಖಲಾದ ದಿನದಿಂದಲೂ ತೀರ್ಪು ಬರುವವರೆಗೆ ಸಂತ್ರಸ್ತೆಯು ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ. ಇದು ತನಿಖೆಗೆ ಸಹಕಾರಿಯಾಯಿತು. ತನಿಖೆ ನಡೆಸಿದ ಮಹಿಳಾ ಪೊಲೀಸ್‌ ಅಧಿಕಾರಿಗಳು ಸಹ ಮುಕ್ತವಾಗಿ ತನಿಖೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾವುದೇ ಒತ್ತಡ ಯಾರಿಂದಲೂ ಯಾರಿಗೂ ಬಂದಿರಲಿಲ್ಲ ಎಂದು ತಿಳಿಸಿದರು. 

ಫಲಿಸದ ವಿಳಂಬ ತಂತ್ರ 

ಪ್ರಕರಣದ ವಿಚಾರಣೆ ವೇಳೆ ಅಪರಾಧಿಯು ಮಾಡಿದ ಎಲ್ಲಾ ವಿಳಂಬ ತಂತ್ರಗಳು ಮತ್ತು ಆರೋಪಗಳು ಹೊರತಾಗಿಯೂ ಎಸ್‌ಐಟಿ ತಂಡವು ಪಾರದರ್ಶಕವಾಗಿ ತನಿಖೆ ಕೈಗೊಂಡಿತು. ಒಂದು ವರ್ಷ ಮೂರುತಿಂಗಳ ಅವಧಿಯಲ್ಲಿ ತನಿಖೆ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು. ದೂರುದಾರರಿಗೆ ನ್ಯಾಯ ಒದಗಿಸಿಕೊಡುವಲ್ಲಿ ತಂಡವು ಶ್ರಮಿಸಿದೆ. ಅಪರಾಧಿಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲ ಕುಟುಂಬಕ್ಕೆ ಸೇರಿದವರಾಗಿದ್ದರು. ಇನ್ನು ದೂರುದಾರರು ಸಾಮಾಜಿಕ ಸ್ತರದಲ್ಲಿ ದುರ್ಬಲರಾಗಿದ್ದರಿಂದ ಪ್ರಕರಣ ವಿಶೇಷವಾಗಿತ್ತು. ಅಪರಾಧಿಯ ವಿರುದ್ಧ ನಿಲ್ಲುವ ಸಂತ್ರಸ್ತೆಯ ಧೈರ್ಯ ಮತ್ತು ದೃಢಸಂಕಲ್ಪವು ಮಹಿಳೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. 

ಎಸ್‌ಐಟಿ ತಂಡವು ದೂರುದಾರರ ಹೇಳಿಕೆಯನ್ನು ದೃಢೀಕರಿಸಲು ತಾಂತ್ರಿಕ, ಡಿಜಿಟಲ್‌, ಮೊಬೈಲ್‌ ಮತ್ತು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವ ಮೂಲಕ ತನಿಖೆಯನ್ನು ಕೈಗೊಂಡಿತು. ಬೆಂಗಳೂರಿನ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯವು ಈ ಪುರಾವೆಗಳನ್ನು ಪರಿಶೀಲಿಸಿ ನೀಡಿದ ವರದಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ನಡುವೆ, ವಿಡಿಯೋ ವೈರಲ್‌ ಆದ ನಂತರ ದೇಶದಿಂದ ಪಲಾಯನ ಮಾಡಿದ್ದ ಆರೋಪಿಯನ್ನು ಭಾರತಕ್ಕೆ ಕರೆತರಲು ಪ್ರಯತ್ನಗಳು ನಡೆದವು. ಆರೋಪಿ ವಿದೇಶಕ್ಕೆ ಪ್ರಯಾಣಿಸಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಲು ವಿದೇಶಾಂಗ ಸಚಿವಾಲಯದ ಕಾನ್ಸುಲರ್‌ ಪಾಸ್‌ಪೋರ್ಟ್‌ ಮತ್ತು ವೀಸಾ ವಿಭಾಗದೊಂದಿಗೆ ಪತ್ರ ವ್ಯವಹಾರಗಳನ್ನು ನಡೆಸಲಾಯಿತು ಎಂದು ಮಾಹಿತಿ ನೀಡಿದರು. 

ಆರೋಪಿಯನ್ನು ವಿದೇಶದಿಂದ ಬರುವಂತೆ ಕ್ರಮ ಕೈಗೊಂಡು ದೇಶಕ್ಕೆ ಬಂದ ಬಳಿಕ ಬಂಧಿಸಲಾಯಿತು. ವಿಚಾರಣೆ ಸಮಯದಲ್ಲಿ ಒಟ್ಟು ೨೬ ಸಾಕ್ಷಿಗಳು, ೯ ವಸ್ತು ರೂಪದ ಸಾಕ್ಷಿಗಳನ್ನು ಪರಿಶೀಲಿಸಲಾಯಿತು. ೧೮೦ ದಾಖಲೆ ಸಾಕ್ಷ್ಯಗಳನ್ನು ಗುರುತಿಸಲಾಯಿತು. ಸುಧೀರ್ಘ ವಿಚಾರಣೆ ಬಳಿಕ ನ್ಯಾಯಾಲಯದಲ್ಲಿ  ಆರೋಪಿಯ ಆರೋಪವು ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ನ್ಯಾಯಾಲಯದ ತೀರ್ಪಿನಿಂದ ದೂರುದಾರರಿಗೆ ನ್ಯಾಯ ಒದಗಿಸುವಂತಾಗಿದ್ದು, ಇದರಲ್ಲಿ ವಕೀಲರ, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಪ್ರಕರಣದಲ್ಲಿ ಹೋರಾಟ ನಡೆಸಿದವರ ಶ್ರಮ ಇದೆ ಎಂದು ಹೇಳಿದರು. 



Tags:    

Similar News