ಒಳಮೀಸಲಾತಿ ವಿಚಾರದಲ್ಲಿ ದಲಿತ ಸಚಿವರ, ಶಾಸಕರ ಒಗ್ಗಟ್ಟಿನ ಮಂತ್ರ ಜಪ

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ದಲಿತ ಸಚಿವರು, ಶಾಸಕರ ಜತೆ ಸಭೆ ನಡೆಯಿತು. ಸಭೆಯಲ್ಲಿ ಒಳಮೀಸಲಾತಿ ಕುರಿತು ನಡೆದ ಸಮೀಕ್ಷೆ ಕುರಿತು ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.;

Update: 2025-08-02 14:41 GMT

ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ದಲಿತ ಸಚಿವರು, ಶಾಸಕರ ಜತೆ ಸಭೆ ನಡೆಯಿತು. ಸಭೆಯಲ್ಲಿ ಒಳಮೀಸಲಾತಿ ಕುರಿತು ನಡೆದ ಸಮೀಕ್ಷೆ ಕುರಿತು ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಮುಂದಿನ ದಿನದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ವರದಿ ಬಂದ ಬಳಿಕ ಯಾವ ನಿಲುವು ಹೊಂದಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. 

ಪರಮೇಶ್ವರ್‌ ನಿವಾಸದಲ್ಲಿ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ನ್ಯಾ.ನಾಗಮೋಹನ್‌ ದಾಸ್‌ ವರದಿ ಬಂದ ಬಳಿಕ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ವರದಿಯಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಾಗಿ ಹೋಗುವ ಬಗ್ಗೆ ತೀರ್ಮಾನಿಸಲಾಯಿತು. 

ಸಭೆ ಬಳಿಕ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಬಹಳ ವರ್ಷಗಳಿಂದ ಒಳ ಮೀಸಲಾತಿ ಕುರಿತು ಚರ್ಚೆಯಾಗುತ್ತಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗವು ಸದ್ಯದಲ್ಲೇ ಸರ್ಕಾರಕ್ಕೆ ವರದಿ ನೀಡಲಿದೆ. ಆ ವರದಿ ಸಲ್ಲಿಕೆ ವೇಳೆ ನಾವು ವಿವಿಧ ಸಮುದಾಯಗಳು ಪರಿಶಿಷ್ಟ ಜಾತಿಯ ಒಳಪಂಗಡದ ನಾಯಕರೆಲ್ಲಒಟ್ಟಾಗಿ ಹೋಗಬೇಕು ಎಂಬುದಾಗಿ ಚರ್ಚ ಮಾಡಿದ್ದೇವೆ ಎಂದರು. 

ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಏನೇ ವ್ಯತ್ಯಾಸಗಳು ಬಂದರೂ ಅದನ್ನ ಸರಿದೂಗಿಸಿಕೊಂಡು ಹೋಗಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಇಲ್ಲದಿದ್ದರೆ ಮತ್ತೆ ಒಳ ಮೀಸಲಾತಿ ಜಾರಿ ವಿಳಂಬವಾಗುತ್ತದೆ. ಅಲ್ಲದೇ, ಒಳ ಮೀಸಲಾತಿಯ ಸಮಸ್ಯೆ ಇನ್ನಷ್ಟು ವರ್ಷ ಮುಂದಕ್ಕೆ ಹೋಗುತ್ತದೆ. ಅದಕ್ಕೆ ಆಸ್ಪದ ನೀಡದೆ ಒಕ್ಕೊರಲ ದನಿಯಾಗಿ ಹೋಗಬೇಕು ಎಂಬ ಕಾರಣಕ್ಕಾಗಿ ಸಭೆ ಸೇರಿ ನಿರ್ಧರಿಸಿದ್ದೇವೆ ಎಂದು ತಿಳಿಸಿದರು. 

ವರದಿ ಬಂದ ಬಳಿಕ ಸ್ವಾಭಾವಿಕವಾಗಿ ಸಚಿವ ಸಂಪುಟಕ್ಕೆ ಹೋಗಿ ಚರ್ಚೆ ನಡೆಯುತ್ತದೆ. ಸಂಪುಟದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿರುತ್ತದೆ. ಆದರೆ ನಮ್ಮ ಸಮುದಾಯದಲ್ಲಿ 101 ಒಳಜಾತಿಗಳಿವೆ. ಅವರೆಲ್ಲರಿಗೂ ಕೂಡ ನ್ಯಾಯ ಸಿಗಬೇಕು. ಸಾಮಾಜಿಕವಾಗಿ ನ್ಯಾಯ ಸಿಗಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ. ಎಲ್ಲಾ ಶಾಸಕರು, ಸಚಿವರು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವರದಿ ಬಂದ ಮೇಲೆ ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ ಎಂದರು. 

ಅಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲವಾಗಬಾರದು. ಪ್ರತಿಯೊಬ್ಬರು ಅನುಸರಿಸಿಕೊಂಡು ಹೋಗಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ. ವರದಿ ಬಂದ ನಂತರ ಮತ್ತೆ ಸೇರಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. 


Tags:    

Similar News