Mysore MUDA Case | ಮುಡಾ ಪ್ರಕರಣದ ಸ್ವತಂತ್ರ ಲೋಕಾಯುಕ್ತ ತನಿಖೆ: ಕಾನೂನು ತಜ್ಞರು ಹೇಳುವುದೇನು?
ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ?, ವಾಸ್ತವವಾಗಿ ಕರ್ನಾಟಕ ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿದೆಯೇ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ನಿವೃತ್ತ ಲೋಕಾಯುಕ್ತರು ಮತ್ತು ಕಾನೂನು ತಜ್ಞರನ್ನು ಮಾತನಾಡಿಸಿದಾಗ...;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ ಲೋಕಾಯುಕ್ತ ತನಿಖೆಯ ವಿಶ್ವಾಸಾರ್ಹತೆ ಕುರಿತ ಚರ್ಚೆಗಳು ಕಾವೇರಿವೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ?, ವಾಸ್ತವವಾಗಿ ಕರ್ನಾಟಕ ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಲೋಕಾಯುಕ್ತ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ, ಪ್ರಕರಣ ಏನಾಗಲಿದೆ ಎಂಬ ಚರ್ಚೆಗಳು ಕೂಡ ಆರಂಭವಾಗಿವೆ. ಮಾಜಿ ಲೋಕಾಯುಕ್ತರು, ಕಾನೂನು ತಜ್ಞರು ಈ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಕೂಡ ಸಾರ್ವಜನಿಕ ವಲಯದಲ್ಲಿದೆ. ಆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಮಾಜಿ ಲೋಕಾಯುಕ್ತರು ಹಾಗೂ ಕಾನೂನು ತಜ್ಞರನ್ನು ಮಾತನಾಡಿಸಿದ್ದು, ಅವರ ಅಭಿಪ್ರಾಯಗಳನ್ನು ಒಳಗೊಂಡ ವರದಿ ಇಲ್ಲಿದೆ;
“ಮುಡಾ ಪ್ರಕರಣದಲ್ಲಿ ನ್ಯಾಯಾಲಯವೇ ಲೋಕಾಯುಕ್ತ ತನಿಖೆಯ ಮೇಲುಸ್ತುವಾರಿ ವಹಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸಾಧ್ಯವಿಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯ ಮೇಲೆ ಸಂಶಯ ಇರುವಂತೆ ಕೇಂದ್ರದಲ್ಲಿ ಸಿಬಿಐ ಮೇಲೂ ಸಂಶಯಗಳಿವೆ. ಸಂಶಯಪಡುತ್ತಾ ಹೋದರೆ ಸಮಾಜದಲ್ಲಿ ಶಾಂತಿ ನೆಲೆಸಲು ಆಗುವುದಿಲ್ಲ” ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಶ್ ಹೆಗ್ಡೆ 'ದ ಫೆಡರಲ್ ಕರ್ನಾಟಕ'ಕ್ಕೆ ಅಭಿಪ್ರಾಯಪಟ್ಟರು.
“ಖಾಸಗಿ ದೂರಿನ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್ ತನಿಖೆಯ ಮೇಲ್ವಿಚಾರಣೆ ಮಾಡುತ್ತಿವೆ. ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ, ಲೋಕಾಯುಕ್ತ ಸಂಸ್ಥೆ ಎಷ್ಟರ ಮಟ್ಟಿಗೆ ಸ್ವತಂತ್ರ ಎಂದು ಹೇಳುವುದು ಕಷ್ಟ” ಎಂದು ಹೇಳಿದರು.
“ಮುಡಾ ಪ್ರಕರಣದ ದೂರಿನಲ್ಲಿ ಮೇಲ್ನೋಟಕ್ಕೆ ತಪ್ಪು ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹೈಕೋರ್ಟ್ ತನಿಖೆಗೆ ಸೂಚಿಸಿದೆ. ಈಗ ಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವೇ ಪರಿಶೀಲಿಸಲಿದೆ. ಹೀಗಿರುವಾಗ ಪ್ರಕರಣ ಏನಾಗಲಿದೆ ಎಂದು ಹೇಳಲು ಆಗುವುದಿಲ್ಲ" ಎಂದ ಅವರು, "ಸ್ವತಂತ್ರ ತನಿಖಾ ಸಂಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ನಡತೆ, ಹಿನ್ನೆಲೆ ಪರಿಗಣಿಸಬೇಕು. ನೇಮಕ ಮಾಡುವವರು ಯಾರು ಎಂಬುದು ಸ್ಪಷ್ಟವಾಗಬೇಕು. ಭ್ರಷಾಚಾರ ಪ್ರಕರಣಗಳ ತನಿಖೆಗೆ ಗಟ್ಟಿಯಾದ ತನಿಖಾ ಸಂಸ್ಥೆ ಅತ್ಯಂತ ಜರೂರಾಗಿದೆ” ಎಂದರು.
"ಲೋಕಾಯುಕ್ತಕ್ಕೆ ನೇಮಕವಾಗಿರುವ ಪೊಲೀಸ್ ಅಧಿಕಾರಿಗಳ ಹುದ್ದೆಗಳು ತಾತ್ಕಾಲಿಕ. ಜೊತೆಗೆ ಲೋಕಾಯುಕ್ತಕ್ಕೆ ಬರುವ ಪೊಲೀಸರು ಎಷ್ಟು ಪ್ರಾಮಾಣಿಕರು ಎಂಬುದು ಚರ್ಚಾಸ್ಪದ ವಿಷಯ. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ಸ್ವತಂತ್ರ ತನಿಖಾ ಸಂಸ್ಥೆ ಕಟ್ಟುವುದು ಹೆಚ್ಚು ಅಗತ್ಯವಾಗಿದೆ. ತನಿಖಾ ಸಂಸ್ಥೆಗಳು ಯಾವುದೇ ಸರ್ಕಾರದ ಅಧೀನದಲ್ಲಿರಬಾರದು” ಎಂದು ಅವರು ಹೇಳಿದರು.
ಸರ್ಕಾರದಿಂದಲೇ ಕಡೆಗಣನೆ
ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬಬೇಕಾದ ರಾಜ್ಯ ಸರ್ಕಾರವೇ ಕಡೆಗಣಿಸುತ್ತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ.
ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿದ ಸಾಕಷ್ಟು ಪ್ರಕರಣಗಳಲ್ಲಿ ಇಂದಿಗೂ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಚುನಾವಣೆ ಬಳಿಕ ಶಾಸಕರ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಿದರೂ ಈವರೆಗೂ ಬಹುತೇಕರು ಆಸ್ತಿವಿವರ ನೀಡದಿರುವ ಸಂಗತಿಗಳಿಂದಾಗಿ ಲೋಕಾಯುಕ್ತ ಸಂಸ್ಥೆಯ ಸಮರ್ಥ ತನಿಖೆಗೆ ಹಿನ್ನೆಡೆಯಾಗಿದೆ ಎಂಬ ಅಭಿಪ್ರಾಯಗಳೂ ಇವೆ.
ಆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ, ಹೈಕೋರ್ಟ್ ವಕೀಲ ಎಸ್.ಉಮಾಪತಿ, “2024 ಡಿಸೆಂಬರ್ ಅಂಕಿ- ಅಂಶಗಳ ಪ್ರಕಾರ ಇಂದಿಗೂ ಲೋಕಾಯುಕ್ತದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ 1228 ಪ್ರಕರಣಗಳು ಬಾಕಿ ಇರುವುದರಿಂದ ಸಂಸ್ಥೆಯ ಮೇಲೆ ಸಾರ್ವಜನಿಕ ವಿಶ್ವಾಸ ಉಳಿದಿಲ್ಲ. ಲೋಕಾಯುಕ್ತ ಸಂಸ್ಥೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಲ್ಲ. ಇದರಿಂದ ಪ್ರಕರಣಗಳ ವಿಲೇವಾರಿ ಸಾಕಷ್ಟು ವಿಳಂಬವಾಗುತ್ತಿದೆ” ಎಂದರು.
"ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿದೆ ಎಂದಷ್ಟೇ ನ್ಯಾಯಾಲಯ ಹೇಳಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸ್ವತಂತ್ರವಾಗಿದೆ ಎಂಬುದನ್ನು ಗಮನಿಸಬೇಕು. ಲೋಕಾಯುಕ್ತ ಪೊಲೀಸ್ ವಿಭಾಗ ಪರಿಣಾಮಕಾರಿಯಾಗಿಲ್ಲ. ಪೊಲೀಸರ ಕುರಿತಾಗಿಯೇ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಬಗ್ಗೆ ವಿಶ್ವಾಸ ಉಳಿದಿಲ್ಲ. ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಸಂಸ್ಥೆಯ ಮೇಲೆ ಒತ್ತಡ ಹೆಚ್ಚಿದೆ" ಎಂದು ಹೇಳಿದರು.
ಹೈ-ಪ್ರೊಪೈಲ್ ಪ್ರಕರಣ ತನಿಖೆ ಕಷ್ಟ
"ಲೋಕಾಯುಕ್ತ ಸಂಸ್ಥೆ ಪಕ್ಷಪಾತವಾಗಿದೆ, ಸ್ವತಂತ್ರ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ಮುಡಾ ಪ್ರಕರಣದ ದೂರುದಾರರ ಆರೋಪ. ಈ ಹಿಂದೆ ಹೈಪ್ರೊಫೈಲ್ ದೂರುಗಳನ್ನು ಸಿಬಿಐ ತನಿಖೆಗೆ ವಹಿಸಿ, ಶಿಕ್ಷೆಯೂ ಆಗಿದೆ. ಸಿಬಿಐ ತನಿಖೆಗೆ ವಹಿಸಿದರೆ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತದೆ. ದೂರುದಾರರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಯಾವ ತಿರುವು ಪಡೆಯಲಿದೆ ಎಂಬುದನ್ನು ಕುತೂಹಲ ಮೂಡಿಸಿದೆ" ಎಂದರು.
ಮುಡಾ ಪ್ರಕರಣದ ದೂರು ಸಾಗಿಬಂದ ಹಾದಿ
ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರು ಅಕ್ರಮವಾಗಿ 14ನಿವೇಶನ ಪಡೆದಿರುವ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 17 ಎ ಅಡಿ ಆರೋಪ ಹೊರಿಸಿರುವುದರಿಂದ ಸಿಎಂ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರ ಅನುಮತಿ ಬೇಕು ಎಂದು ನ್ಯಾಯಾಲಯ ಹೇಳಿತ್ತು. ಅದರಂತೆ ದೂರುದಾರರಾದ ಸ್ನೇಹಮಯಿ ಕೃಷ್ಣ ಹಾಗೂ ಟಿ.ಎ. ಅಬ್ರಾಹಾಂ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಕಳೆದ ವರ್ಷದ ಸೆ.24 ರಂದು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರು.
ರಾಜ್ಯಪಾಲರು ಪಕ್ಷಪಾತದ ತೀರ್ಮಾನ ಕೈಗೊಂಡಿದ್ದಾರೆ ಎಂದು ಆರೋಪಿಸಿ ಪ್ರಾಸಿಕ್ಯೂಷನ್ ರದ್ದು ಮಾಡುವಂತೆ ಸಿಎಂ ಹೈಕೋರ್ಟ್ ಮೊರೆ ಹೋಗಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಸರಿಯಾಗಿದೆ ಎಂದು ಹೇಳಿತ್ತು. ಅದಾದ ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯ ದೂರು ದಾಖಲಿಸಿಕೊಂಡು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ದೂರುದಾರ ಕೃಷ್ಣ ಅವರೇ ಲೋಕಾಯುಕ್ತ ಅಥವಾ ಸಿಬಿಐನಂತಹ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಕೋರಿದ್ದರು.
ಸೆ.27ರಂದು ಮೈಸೂರು ಲೋಕಾಯುಕ್ತರು ಸಿಎಂ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದರು. ಇದಾದ ಒಂದು ಗಂಟೆಯಲ್ಲೇ ಸೇಹಮಯಿ ಕೃಷ್ಣ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಲೋಕಾಯುಕ್ತ ತನಿಖೆಗೆ ಆದೇಶಿಸಿದ ಹೊರತಾಗಿಯೂ ಸಿಬಿಐ ತನಿಖೆ ಕೋರಿದ್ದದ ದೂರುದಾರರ ಉದ್ದೇಶವನ್ನು ಸಿಎಂ ಪ್ರಶ್ನಿಸಿ, ಅರ್ಜಿ ವಜಾಗೊಳಿಸುವಂತೆ ಕೋರಿದ್ದರು.
ಲೋಕಾಯುಕ್ತಕ್ಕೆ ಜೀವ ತುಂಬಿದ್ದ ಕೋರ್ಟ್
2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಲೋಕಾಯುಕ್ತ ಸಂಸ್ಥೆಗೆ ನೀಡಿದ್ದ ಪೊಲೀಸ್ ಸ್ಥಾನಮಾನವನ್ನು ರದ್ದು ಮಾಡಿ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರಚಿಸಲಾಗಿತ್ತು.
ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಹಾಗೂ ಬೆಂಗಳೂರು ವಕೀಲರ ಸಂಘ ಸೇರಿದಂತೆ ಹಲವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.
2022 ಆಗಸ್ಟ್ 11ರಂದು ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ ಮತ್ತೆ ಲೋಕಾಯುಕ್ತಕ್ಕೆ ಅಧಿಕಾರ ನೀಡಿತ್ತು. ಆಗ ಎಸಿಬಿ ನಡೆಸಿದ ಎಲ್ಲಾ ಪ್ರಕರಣಗಳ ದಾಖಲೆಗಳು ಹಾಗೂ ಬಾಕಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು.