ಅಚ್ಛೇದಿನ ಎಲ್ಲೋಯ್ತು? ಖಾತೆಗೆ 15 ಲಕ್ಷ ಬಂತಾ? ಕುಮಾರಸ್ವಾಮಿಯನ್ನು ಕೇಳಿ: ಡಿಕೆಶಿ

ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯದ ಏಳು ಕ್ಷೇತ್ರಗಳು ಅಷ್ಟೇ ಮುಖ್ಯ. ಮದ್ದೂರಿನ ಶಾಸಕ ಉದಯ್ ಅವರ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.;

Update: 2025-07-28 15:03 GMT

ಡಿಸಿಎಂ ಡಿ.ಕೆ. ಶಿವಕುಮಾರ್‌

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅಚ್ಛೇದಿನ ಬರುತ್ತದೆ ಎಂದಿದ್ದರು. ಅವರು ಹೇಳಿದ್ದ ಅಚ್ಛೇದಿನ್​ , ಖಾತೆಗೆ 15 ಲಕ್ಷ ರೂಪಾಯಿ ವಿಚಾರ ಏನಾಯ್ತು ಎಂದು ನೀವೆಲ್ಲರೂ ಬಿಜೆಪಿ ಹಾಗೂ ಹೆಚ್‌.ಡಿ. ಕುಮಾರಸ್ವಾಮಿ ಅವರನ್ನು ಕೇಳಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. 

ಮದ್ದೂರಿನಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯದ ಏಳು ಕ್ಷೇತ್ರಗಳು ಅಷ್ಟೇ ಮುಖ್ಯ. ಮದ್ದೂರಿನ ಶಾಸಕ ಉದಯ್ ಅವರ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಕ್ಷೇತ್ರದ ಜನರ ಋಣ ತೀರಿಸಲು 1,146 ಕೋಟಿ ರೂ.  ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

 "ನಾವು ನಿಮ್ಮಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಉದಯ್ ಅವರನ್ನು ಗೆಲ್ಲಿಸಿ ಜಿಲ್ಲೆಯ ಏಳು ಸ್ಥಾನಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದೀರಿ. ಆ ಮೂಲಕ ರಾಜ್ಯದಲ್ಲಿ 136 ಸಂಖ್ಯಾಬಲದ ಬಲಿಷ್ಠ ಸರ್ಕಾರ ರಚನೆಗೆ ಸಹಕಾರ ನೀಡಿರುವ ನಿಮ್ಮ ಋಣ ತೀರಿಸಲು ನಾವಿಲ್ಲಿಗೆ ಬಂದಿದ್ದೇವೆ” ಎಂದು ತಿಳಿಸಿದರು.

ಮಳವಳ್ಳಿವರೆಗೂ ನೀರು ಹರಿಸಿ, ಮದ್ದೂರಿನ ಕಾಲುವೆಗಳ ಅಭಿವೃದ್ಧಿ ದೃಷ್ಟಿಯಿಂದ ಸುಮಾರು 500 ಕೋಟಿ ರೂ. ಗೂ ಹೆಚ್ಚು ಮೊತ್ತದ ಹಣವನ್ನು ನೀಡಿದ್ದೇವೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ರೈತರ ಮಕ್ಕಳಿಗಾಗಿ ಕೃಷಿ ವಿವಿ ತರಲು ಮುಂದಾಗಿದ್ದಾರೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜನಕಲ್ಯಾಣಕ್ಕಾಗಿ ಒಂದು ಲಕ್ಷ ಕೋಟಿ ಅನುದಾನ

“ಸಿಎಂ ಸಿದ್ದರಾಮಯ್ಯ ಅವರು 4.08 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ 19 ಸಾವಿರ ಕೋಟಿ ರೂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ 25 ಸಾವಿರ ಕೋಟಿ ರೂ.  ಹಣವನ್ನು ಜನರಿಗೆ ನೀಡಿದ್ದೇವೆ. 10,900 ಕೋಟಿ ರೂ. ಹಣವನ್ನು ಪಿಂಚಣಿಗಾಗಿ ನೀಡುತ್ತಿದ್ದೇವೆ. ಆ ಮೂಲಕ ಬಜೆಟ್‌ನ ಒಂದು ಲಕ್ಷ ಕೋಟಿ ರೂ. ಹಣವನ್ನು ಜನರಿಗಾಗಿ ನೀಡುತ್ತಿದ್ದೇವೆ” ಎಂದು ವಿವರಿಸಿದರು.

“ಅಧಿಕಾರದಲ್ಲಿದ್ದಾಗ ಇಂತಹ ಯಾವುದಾದರೂ ಯೋಜನೆಯನ್ನು ಜಾರಿಗೆ ತಂದಿದ್ದೀರಾ ಎಂದು ನೀವೆಲ್ಲರೂ ಪ್ರತಿಪಕ್ಷ ಬಿಜೆಪಿಯವರನ್ನು ಕೇಳಬೇಕು. ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿಲ್ಲ. ಹೀಗಾಗಿ ಅವರು ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಜನರ ಬದುಕನ್ನು ಬದಲಿಸುತ್ತಿದೆ” ಎಂದು ಹೇಳಿದರು.


Tags:    

Similar News