Cinema Awards | ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ತಿರಸ್ಕರಿಸಲು ಕಾರಣವೇನು?

ಈ ಮೊದಲು ‘ಸೈಮಾ ಅವಾರ್ಡ್​’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಸುದೀಪ್‌ ಅವಾರ್ಡ್ ಸ್ವೀಕರಿಸಿಲ್ಲ.;

Update: 2025-01-24 05:39 GMT
ಕಿಚ್ಚ ಸುದೀಪ್‌

'ಪೈಲ್ವಾನ್' ಚಿತ್ರದ ಅತ್ಯುತ್ತಮ ನಟನೆಗಾಗಿ ರಾಜ್ಯ ಸರ್ಕಾರ ಘೋಷಿಸಿದ್ದ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದು, ಈ ಪ್ರಶಸ್ತಿ ನಿರಾಕರಣೆಯ ಹಿಂದೆ ಒಂದು ನೋವಿನ ಸಂಗತಿ ಇದೆ ಎನ್ನಲಾಗಿದೆ. 

ನಟ ಸುದೀಪ್‌ ಕೆಲ ವರ್ಷಗಳಿಂದ ತಮಗೆ ಬರುವ ಪ್ರಶಸ್ತಿಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಅವರ ಜೀವನದಲ್ಲಿ ನಡೆದ ಎರಡು ಘಟನೆಗಳಿಂದ ಅವರಿಗೆ ಬೇಸರ ಆಗಿದೆ ಎನ್ನಲಾಗಿದೆ.

‘ರಂಗ ಎಸ್ಎಸ್ಎಲ್​ಸಿ’ (2004) ಮತ್ತು ‘ಮುಸ್ಸಂಜೆ ಮಾತು’ (2008) ಸಿನಿಮಾ ಮಾಡಿದ ಸಂದರ್ಭದಲ್ಲಿ ಪ್ರಶಸ್ತಿ ಕಮಿಟಿಯಲ್ಲಿದ್ದವರೇ ಸುದೀಪ್‌ಗೆ ಕರೆ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರು ಎನ್ನಲಾಗಿದೆ. ಅವರ ಮಾತನ್ನು ಕೇಳಿ ಸುದೀಪ್ ಸಂಭ್ರಮಿಸಿದ್ದರಂತೆ. ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಮಾತ್ರ ಅಲ್ಲಿ ಅದು ಬೇರೆ ನಟರ ಪಾಲಾಗಿತ್ತು. ಈ ಎರಡು ಘಟನೆಯಿಂದಾಗಿ ಅವರು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ. ಈ ಮೊದಲು ‘ಸೈಮಾ ಅವಾರ್ಡ್​’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಅವರು ಅವಾರ್ಡ್ ಸ್ವೀಕರಿಸಿಲ್ಲ.

2019ರಲ್ಲಿ ತೆರೆಕಂಡ ಚಿತ್ರಗಳಿಗೆ ಬುಧವಾರ ರಾಜ್ಯ ಪ್ರಶಸ್ತಿ ಘೋಷಿಸಲಾಗಿತ್ತು. 'ಪೈಲ್ವಾನ್' ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದರು. ರಾಜ್ಯ ಪ್ರಶಸ್ತಿ ಘೋಷಣೆ ಕುರಿತು ಗುರುವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಿಚ್ಚ ಸುದೀಪ್, ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. 'ಪೈಲ್ವಾನ್' ಚಿತ್ರದಲ್ಲಿನ ತಮ್ಮ ನಟನೆ ಗುರುತಿಸಿದ್ದಕ್ಕಾಗಿ ತೀರ್ಪುಗಾರರು ಹಾಗೂ ರಾಜ್ಯ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಚಿತ್ರರಂಗದಲ್ಲಿ ಸಾಕಷ್ಟು ಅರ್ಹರು ಇರುವುದರಿಂದ ಅವರಿಗೆ ಕೊಡಬೇಕೆಂದು ಹೇಳಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್‍, ‘ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ನಾನು ಕಳೆದ ಕೆಲವು ವರ್ಷಗಳಿಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಕ್ಕೆ ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಹಲವು ಅರ್ಹ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ಸಿಕ್ಕರೆ ನಾನು ಸಂತೋಷಪುಡತ್ತೇನೆ’ ಎಂದು ಸುದೀಪ್‍ ಹೇಳಿದ್ದಾರೆ.

ಗೌರವ ಡಾಕ್ಟರೇಟ್‌ ನಿರಾಕರಣೆ

ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ನಟ ಸುದೀಪ್ ಅವರಿಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಗೌರವವನ್ನು ಸುದೀಪ್ ತಿರಸ್ಕರಿಸಿ ತಮಗಿಂಥ ಅರ್ಹರಿಗೆ ನೀಡಲು ಸೂಚಿಸಿದ್ದರು. ಇದೀಗ ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಅವರು ತಿರಸ್ಕರಿಸಿದ್ದಾರೆ.

ಸುದೀಪ್‍ ಅವರ ಈ ನಿರ್ಧರಕ್ಕೆ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧಗಳು ಕೇಳಿ ಬರುತ್ತಿವೆ. ಅಭಿಮಾನಿಗಳು ಈ ನಡೆಯನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಗಳು ತಾನಾಗಿಯೇ ಅರಸಿ ಬಂದಾಗ, ಅದನ್ನು ತಿರಸ್ಕರಿಸಬಾರದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Similar News