ಬಿಎಂಟಿಸಿ ಬಸ್‌ನಲ್ಲಿ ಎದುರಿಸಿದ ಚಿಲ್ಲರೆ ಸಮಸ್ಯೆ‌ X ಪೋಸ್ಟ್‌ ವೈರಲ್!

ಬೆಂಗಳೂರಿನ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್‌ನಲ್ಲಿ ಎದುರಿಸಿದ ಚಿಲ್ಲರೆ ಸಮಸ್ಯೆ ಅನುಭವವನ್ನು ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದಾರೆ.;

Update: 2024-04-17 14:10 GMT
ಬಸ್‌ ಕಂಡಕ್ಟರ್‌ ನೀಡಿದ ಟಿಕೆಟ್‌
Click the Play button to listen to article

ಚಿಲ್ಲರೆ ಕೊಡಿ ಸರ್.. ಎಲ್ಲರೂ ದೊಡ್ಡ ದೊಡ್ಡ ನೋಟುಗಳನ್ನು ಕೊಟ್ಟರೆ ನಾವೇನು ಮಾಡುವುದು? ಹೀಗೆ ಬಸ್‌, ಮಾರ್ಕೆಟ್‌, ಹೋಟೆಲ್‌ ಮುಂತಾದ ಕಡೆ ಕೇಳಿ ಬರುವ ಸಾಮಾನ್ಯ ಮಾತುಗಳು. ಚಿಲ್ಲರೆಗಾಗಿ ಸಾರ್ವಜನಿಕರ ಪರದಾಟ ನಿತ್ಯ ವಾಸ್ತವವಾಗಿದೆ. ಇನ್ನು ಚಿಲ್ಲರೆ ಸಮಸ್ಯೆಯಿಂದ ಅಂಗಡಿಯಲ್ಲಿ ಚಾಕೋಲೇಟ್ ಕೊಟ್ಟರೆ, ತರಕಾರಿ ಅಂಗಡಿಯಲ್ಲಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಕೊಡುತ್ತಾರೆ. ಆದರೆ, ಬಸ್‌ನಲ್ಲಿ ಪ್ರಯಾಣಿಸುವಾಗಲೂ ಚಿಲ್ಲರೆ ಸಮಸ್ಯೆ ಎದುರಾದರೆ ಏನು ಮಾಡುವುದು? ಚಿಲ್ಲರೆ ಇಲ್ಲ ಎಂದು ನಮ್ಮ ಹಣ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ.

ಇತ್ತೀಚೆಗೆ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್‌ನಲ್ಲಿ ಎದುರಿಸಿದ ಚಿಲ್ಲರೆ ಸಮಸ್ಯೆ ಅನುಭವವನ್ನು ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಬಸ್‌ನಲ್ಲಿ (bmtc) ಪ್ರಯಾಣಿಸಿದ ಅನುಭವವನ್ನು ಅವರು ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದು, ಬಿಎಂಟಿಸಿ ಬಸ್ ಟಿಕೆಟ್‌ನ 15 ರೂಪಾಯಿಗಳ ಫೋಟೋ ಸಮೇತ ಪೋಸ್ಟ್ ಮಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಿತಿನ್‌ ಕೃಷ್ಣ ಎಂಬವರು ತಮ್ಮ x ಖಾತೆಯಲ್ಲಿ ʻʻನಾನು ಇಂದು 5ರೂ. ಗಳನ್ನು ಕಳೆದುಕೊಂಡೆ. ನಾನು ಪ್ರಯಾಣಿಸಿದ ಬಸ್ಸಿನ ಕಂಡೆಕ್ಟರ್‌ ಬಳಿ ಒಂದು ರೂಪಾಯಿ ಚಿಲ್ಲರೆ ಕೂಡ ಇರಲಿಲ್ಲ. ಇದಕ್ಕೆ ಏನಾದರೂ ಪರಿಹಾರವಿದೆಯೇ? ಎಂದು ಬರೆದುಕೊಂಡಿದ್ದು, ಇದಕ್ಕೆ @BMTC_BENGALURU ಟ್ಯಾಗ್ ಕೂಡ ಮಾಡಿದ್ದಾರೆ.

ಇನ್ನೂ ನಿತಿನ್ ಕೃಷ್ಣ ಅವರ ಮತ್ತೊಂದು ಪೋಸ್ಟ್‌ನಲ್ಲಿ,ʻʻಬಸ್‌ ಪ್ರಯಾಣ ಆರಂಭಿಸುವಾಗ ಕಂಡಕ್ಟರ್‌ಗೆ ಬೇಕಾಗುವಷ್ಟು ಚಿಲ್ಲರೆಯನ್ನು ಒದಗಿಸಬೇಕು ಅಥವಾ ಆನ್‌ಲೈನ್‌ ಪೇಮೆಂಟ್‌ಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬಳಸಬೇಕು. ನಾನು ಪ್ರತಿ ಬಾರಿ ನನ್ನ ಹಣವನ್ನು ಕಳೆದುಕೊಳ್ಳಬೇಕೇ? ಅಥವಾ ಈ ನೆಪದಲ್ಲಿ ಕಂಡಕ್ಟರ್‌ಗಳು ಹಣ ಸಂಪಾದಿಸುತ್ತಿದ್ದಾರೆಯೇʼʼ ಎಂದು ಪೋಸ್ಟ್‌ ಮಾಡಿದ್ದಾರೆ.

ಅವರ ಪೋಸ್ಟ್ ಬಿಎಂಟಿಸಿ ಸೇರಿದಂತೆ ಹಲವರ ಗಮನ ಸೆಳೆದಿದ್ದು, ʻʻನಿಮ್ಮ ದೂರನ್ನು BMTC2024003258 ಡಾಕೆಟ್ ಸಂಖ್ಯೆಯಲ್ಲಿ ನೋಂದಾಯಿಸಲಾಗಿದೆ‌ʼʼ ಎಂದು ತಿಳಿಸಿದ್ದಾರೆ.

ಈ ಪೋಸ್ಟ್‌ 2ದಿನಗಳ ಹಿಂದೆ ವೈರಲ್‌ ಆಗಿದ್ದು, ಆವತ್ತಿನಿಂದ ಇಲ್ಲಿಯವರೆಗೆ 70,000 ವೀಕ್ಷಣೆಗಳೊಂದಿಗೆ ಇನ್ನು ಹೆಚ್ಚು ವೀಕ್ಷಣೆಗೊಳ್ಳುತ್ತಿದೆ. 300ಕ್ಕೂ ಹೆಚ್ಚು ಲೈಕ್ಸ್‌ಗಳು ಹಾಗೂ ಬಳಕೆದಾರರ ಕಮೆಂಟ್‌ಗಳ ಮಹಾಪೂರವೇ ಬರುತ್ತಿದೆ.

ಈ ಪೋಸ್ಟ್ ಬಗ್ಗೆ X ಬಳಕೆದಾರರು ಹೇಳಿದ್ದೇನು?

"ಸಾರ್ವಜನಿಕ ಸಾರಿಗೆಯಲ್ಲಿ ತೊಂದರೆ-ಮುಕ್ತ ಪ್ರಯಾಣಕ್ಕಾಗಿ ನಾವೇ ಸರಿಯಾದ ಚಿಲ್ಲರೆಯನ್ನು ಇಟ್ಟುಕೊಳ್ಳುವುದು ಒಂದೇ ಪರಿಹಾರವಾಗಿದೆ. ಇದರಿಂದ ಬಸ್‌ ಕಂಡಕ್ಟರ್‌ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ನೀವು ʻನಮ್ಮ ಬಿಎಮ್‌ಟಿಸಿʼ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಬಸ್‌ ಸಂಚಾರ ಆರಂಭಿಸುವ ಮೊದಲು ಎಷ್ಟು ಟಿಕೆಟ್‌ ದರ ಎಷ್ಟಿದೆ ಎಂದು ನೋಡಿಕೊಳ್ಳಿ ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಿತಿನ್ ಕೃಷ್ಣ, “ನನ್ನಲ್ಲಿ ಏನೇ ಚಿಲ್ಲರೆಗಳಿದ್ದರೂ ಹಿಂದಿನ ಕಂಡಕ್ಟರ್‌ಗಳಿಗೆ ನೀಡಿದ್ದೇನೆ. ನಾನು ಎಷ್ಟು ಚೇಂಜ್‌ಗಳನ್ನು ಇಟ್ಟುಕೊಳ್ಳುವುದು? ಈ ಕಂಡಕ್ಟರ್‌ಗಳು ಇಡೀ ದಿನ ಏನು ಮಾಡುತ್ತಾರೆ. ಅವರಲ್ಲಿ 1 ಅಥವಾ 2ರೂಗಳ ಚೇಂಜ್‌ಗಳು ಇರುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ʻʻನಾನು ಇತ್ತೀಚೆಗೆ ಔಟರ್‌ ರಿಂಗ್‌ ರೋಡ್‌ನಲ್ಲಿ ಒಂದೆರಡು ಬಾರಿ ಪ್ರಯಾಣಿಸಿದ್ದೆ. ಅವರಲ್ಲಿ ಯುಪಿಐ ಇತ್ತು. ನೀವು ಅವರನ್ನು ಕೇಳಿದ್ದಿರೋ ಇಲ್ಲವೋ? ಯುಪಿಐ ಚಿಲ್ಲರೆ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

“ಆನ್‌ಲೈನ್‌ನಲ್ಲಿ ಪಾವತಿಸಿ. ಸಾಮಾಜಿಕ ಮಾಧ್ಯಮದಲ್ಲಿ ಅಳುವುದನ್ನು ನಿಲ್ಲಿಸಿʼʼ, ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದರೆ, “ಇದು ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ನೀವು ಚೇಂಜ್‌ಗಾಗಿ ಒತ್ತಾಯಿಸದ ಹೊರತು ಅವರು ನಿಮ್ಮ ಚೇಂಜ್‌ ವಾಪಾಸ್ಸು ಕೊಡಲ್ಲ. ಇದು ತಪ್ಪಲ್ಲʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

“ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐಗೆ ಏನು ತಡೆಯಾಗುತ್ತಿದೆ ಇದು ಬಹುಪಾಲು ಚಿಲ್ಲರೆ ಸಮಸ್ಯೆಗಳನ್ನು ಪರಿಹರಿಸುತ್ತದೆ. ಬಿಎಂಟಿಸಿ ಅಧಿಕಾರಿಗಳ ಈ ದುರಾಡಳಿತದಿಂದ ಕಂಡಕ್ಟರ್‌ಗಳು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Tags:    

Similar News