ವಿಧಾನಮಂಡಲ ಅಧಿವೇಶನ | ಮೊದಲ ದಿನವೇ ಪ್ರತಿಧ್ವನಿಸಿದ ವಾಲ್ಮೀಕಿ ನಿಗಮ ಹಗರಣ: ಪ್ರತಿಪಕ್ಷಗಳ ವಾಗ್ದಾಳಿ, ಸಿಎಂ ತಿರುಗೇಟು

ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹಗರಣಗಳ ಅಸ್ತ್ರ ಝಳಪಿಸಿದವು.

Update: 2024-07-15 14:09 GMT

ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹಗರಣಗಳ ಅಸ್ತ್ರ ಝಳಪಿಸಿದವು.

ವಿಧಾನಸಭೆಯ ಮಧ್ಯಾಹ್ನದವರೆಗಿನ ಕಲಾಪದಲ್ಲಿ ಕಳೆದ ಅಧಿವೇಶನದ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಧ್ಯಾಹ್ನದ ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷ ಬಿಜೆಪಿ, ವಾಲ್ಮೀಕಿ ಪರಿಶಿಷ್ಟ ವರ್ಗ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿತು. ಆದರೆ, ಸಿಎಂ ಸಿದ್ದರಾಮಯ್ಯ ಅವರು, ʻʻವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದನ್ನು ಈ ಸದನದಲ್ಲೇ ನಾವು ಬಯಲು ಮಾಡುತ್ತೇವೆʼʼ ಎಂದು ಹೇಳುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ವಿಷಯ ಪ್ರಸ್ತಾಪಿಸಿ, ʻʻಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಾಲ್ಮೀಕಿ ನಿಗಮದ ನೂರಾರು ಕೋಟಿ ಕೊಳ್ಳೆ ಹೊಡೆದ ಅಧ್ಯಕ್ಷ ಬಸವನ ಗೌಡ ದದ್ದಲ್‌ ಅವರು ರೈತರ ಭೂಮಿ ಖರೀದಿಸಲು ಮುಂದಾಗಿದ್ದರು. ಭ್ರಷ್ಟ ಸಚಿವ ಬಿ ನಾಗೇಂದ್ರ ಅವರನ್ನು ಇಡಿ ಬಂಧಿಸಿದ ತಕ್ಷಣ ನಾಪತ್ತೆಯಾಗಿದ್ದ ದದ್ದಲ್‌ ಅವರು ಇದೀಗ ಅಧಿವೇಶನಕ್ಕೆ ಬಂದು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ರಕ್ಷಣೆ ಪಡೆದಿದ್ದಾರೆʼʼ ಎಂದು ಟೀಕಾ ಪ್ರಹಾರ ನಡೆಸಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ʻʻವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದನ್ನು ಈ ಸದನದಲ್ಲೇ ನಾವು ಬಯಲು ಮಾಡುತ್ತೇವೆ. ರಾಜಕೀಯ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರೇ, ನಿಮ್ಮ ಪ್ರತಿ ಮಾತಿಗೂ ನನ್ನ ಬಳಿ ಉತ್ತರವಿದೆ. ಇಷ್ಟು ದಿನ ಮಾಧ್ಯಮಗಳ ಎದುರು ಸುಳ್ಳು ಹೇಳುತ್ತಾ, ದೂರದಲ್ಲೆಲ್ಲೋ ನಿಂತು ಗಾಳಿಯಲ್ಲಿ ಗುಂಡು ಹೊಡೆದಂತಲ್ಲ. ಇದು ಸದನ, ಇಲ್ಲಿ ನಿಮ್ಮ ಹಿಟ್‌ ಅಂಡ್‌ ರನ್‌ ಗೆ ಅವಕಾಶವಿಲ್ಲʼʼ ಎಂದು ಗುಡುಗಿದರು.

ಆ ಬಳಿಕ ಮತ್ತೆ ಮಾತಿಗಿಳಿದ ಆರ್‌ ಅಶೋಕ್‌, ವಾಲ್ಮೀಕಿ ನಿಗಮದ ಸೂಪರಿಂಡೆಂಟ್‌ ಚಂದ್ರಶೇಖರ್‌ ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಆರು ಪುಟಗಳ ಡೆತ್‌ನೋಟ್‌ ಹಿಡಿದು ವಿವರವಾಗಿ ಓದುವ ಮೂಲಕ ಸದನದ ಗಮನ ಸೆಳೆದರು. ಪತ್ರದಲ್ಲಿ ಚಂದ್ರಶೇಖರ್‌ ಅವರು ಮಾಡಿರುವ ಆರೋಪಗಳನ್ನು ಒತ್ತಿ ಹೇಳಿದರು. ʻʻಸಚಿವರು ನನಗೆ ಮೌಖಿಕವಾಗಿ ವಸಂತನಗರದಲ್ಲಿರುವ ಖಾತೆಯಿಂದ ಎಂಜಿ ರಸ್ತೆಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಪತ್ರ ಬರೆಯುವಂತೆ ಸೂಚಿಸಿದರುʼʼ ಎಂದು ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಹೇಳಿದರು. 

"ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ, 187 ಕೋಟಿ ರೂ. ಹಣ ಕಟಾಕಟ್ ಎಂದು ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು" ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇದಕ್ಕೆ, "ವರ್ಗಾವಣೆ ಮಾಡು ಎಂದು ನಾನು ಹೇಳಿದ್ನಾ? ಸದನಕ್ಕೆ ಏನೇನೋ ತಪ್ಪು ಮಾಹಿತಿ ನೀಡಬೇಡಿ. ವರ್ಗಾವಣೆ ಆಗಿರೋದು 187 ಕೋಟಿಯಲ್ಲ, 89.62 ಕೋಟಿ ರೂ. ಎಂದು, ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ" ಅಂತ ಸಿಎಂ ಗರಂ ಆದರು. "ಅಲ್ಲಿಗೆ ಒಪ್ಕೊಂಡಂತೆ ಆಯ್ತಲ್ಲ" ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿದರು. ಇದಕ್ಕೆ ಮತ್ತೆ ಸಿಎಂ ಸ್ಪಷ್ಟೀಕರಣ ಕೊಟ್ಟರು.

"ಲೂಟಿಯನ್ನು ಯಾರೂ ಒಪ್ಪಿಕೊಂಡಿಲ್ಲ. ಇದು ಇ.ಡಿ ಅವರು ಹೇಳಿರುವುದು ಅಷ್ಟೇ. ಇದು ಒಪ್ಪಿತ ಸತ್ಯವಲ್ಲ" ಎಂದು ಹೇಳಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶೋಕ್ ನಡುವೆ ಒಂದಿಷ್ಟು ಜಟಾಪಟಿ ನಡೆಯಿತು. ಇದಕ್ಕೂ ಮುನ್ನ, ಯತ್ನಾಳ್ ಹಾಗೂ ಸಿಎಂ ಮಧ್ಯೆ ಮಾತಿನ ಸಮರ ನಡೆಯಿತು. 

ಆ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, "ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿದ್ದಾರೆ. ದಲಿತರ ಹಣವನ್ನು ಲೂಟಿ ಹೊಡೆದಿದ್ದಾರೆ. ಕರ್ನಾಟಕ ಇತಿಹಾಸದಲ್ಲೇ ಇದು ದೊಡ್ಡ ಕಪ್ಪು ಚುಕ್ಕೆ" ಎಂದು ಗುಡುಗಿದರು.

"ಕಟಾಕಟ್ ಅಂತೇಳಿ ನೂರಕ್ಕೆ ನೂರರಷ್ಟು ಲೂಟಿ ಮಾಡಿ್ದ್ದಾರೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ ಆಗಿದೆ. ದಲಿತರ ಹಣ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲೇ ಯಾರೂ ದಲಿತರ ಹಣ ನುಂಗಿರಲಿಲ್ಲ. ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯಕ್ಕೆ ಹೋಗಿದೆ" ಎಂದು ಆರ್.ಅಶೋಕ್ ಹರಿಹಾಯ್ದರು.

ಆರ್ ಅಶೋಕ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, "ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿಲ್ಲ. ಹಣ ಲೂಟಿ ಹೊಡೆದಿದ್ದಾರೆ ಅನ್ನೋದು ಸರಿಯಲ್ಲ" ಎಂದು ಕಿಡಿಕಾರಿದರು.

ಹಗರಣದ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದವು. ಈ ವಾಗ್ವಾದದಲ್ಲೇ ಮಧ್ಯಾಹ್ನದ ಸುಮಾರು ನಾಲ್ಕು ತಾಸು ಕಲಾಪವನ್ನು ವಾಲ್ಮೀಕಿ ನಿಗಮ ಹಗರಣವೇ ನುಂಗಿ ಹಾಕಿತು. ಮಾರನೇ ದಿನ ಈ ವಿಷಯದ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ ಸಭಾಧ್ಯಕ್ಷರು, ಸಂಜೆ ಆರಕ್ಕೆ ದಿನದ ಕಲಾಪವನ್ನು ಅಂತ್ಯಗೊಳಿಸಿದರು.

Tags:    

Similar News