ಸಿಎಂ ಸಿದ್ದರಾಮಯ್ಯ ಜೊತೆ ನಾವಿದ್ದೇವೆ, ರಾಜೀನಾಮೆ ಕೊಡಲು ಬಿಡಲ್ಲ: ಜನಾಂದೋಲನ ಸಮಾವೇಶದ ಸಂದೇಶ

ಮೈಸೂರು ನಗರಾಭಿವೃದ್ಧಿ ಪಾಧಿಕಾರ (ಮುಡಾ) ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ʻಮೈಸೂರು ಚಲೋʼ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಮೈಸೂರಿನಲ್ಲಿ ನಡೆಸಿದ ಜನಾಂದೋಲ ಸಮಾವೇಶ, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿ ಒಕ್ಕೊರಲಿನ ಸಂದೇಶ ರವಾನಿಸಿದೆ.;

Update: 2024-08-09 11:37 GMT

ಮೈಸೂರು ನಗರಾಭಿವೃದ್ಧಿ ಪಾಧಿಕಾರ (ಮುಡಾ) ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ʻಮೈಸೂರು ಚಲೋʼ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಮೈಸೂರಿನಲ್ಲಿ ನಡೆಸಿದ ಜನಾಂದೋಲ ಸಮಾವೇಶ, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿ ಒಕ್ಕೊರಲಿನ ಸಂದೇಶ ರವಾನಿಸಿದೆ. ಪ್ರತಿಪಕ್ಷಗಳ ಮೈತ್ರಿ ಹೋರಾಟಕ್ಕೆ ಮಣಿಯುವುದಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಕೊಡಲು ಬಿಡುವುದಿಲ್ಲ; ಅವರೊಂದಿಗೆ ಎಲ್ಲಾ ನಾಯಕರು ಒಟ್ಟಾಗಿ ನಿಂತಿದ್ದೇವೆ ಎಂಬ ಪ್ರಬಲ ಸಂದೇಶವನ್ನು ಸಮಾವೇಶ ನೀಡಿದೆ.

ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಆರಂಭಗೊಂಡ ಬೃಹತ್‌ ಸಮಾವೇಶದಲ್ಲಿ ಮೊದಲು ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಉಸ್ತುವಾರಿ ಸಚಿವ ಕೆ ಎಚ್‌ ಮುನಿಯಪ್ಪ, ʻʻಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ. ಅವರ ಪರ ನಿಲ್ಲುತ್ತೇವೆ. ಅವರು ರಾಜೀನಾಮೆ‌ ಕೊಡಲು ನಾವು ಬಿಡುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆʼʼ ಎಂದು ವಾಗ್ದಾನ ಮಾಡಿದರು.

ʻʻಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಇದೀಗ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಲಾಗುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಬಿಜೆಪಿ ಪ್ರಯತ್ನಿಸುತ್ತಿದೆʼʼ ಎಂದು ಕಿಡಿಕಾರಿದರು.

ʻʻಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನಾಯಕತ್ವದಲ್ಲಿ ಜನಪ್ರಿಯ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಸಲಾಗುತ್ತಿದೆ. ಶೋಷಿತರು, ಮಹಿಳೆಯರು ಹಾಗೂ ರೈತರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆʼʼ ಎಂದು ಹೇಳಿದರು.

ʻʻನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಸಹಿಸಲಾಗದೆ ಕುಲ್ಲಕ ಕಾರಣದಿಂದ ಬಿಜೆಪಿ ಜೆಡಿಎಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಗುಡ್ಡ ಅಗೆದು ಇಲಿ ಹಿಡಿಯಲು ಹೊರಟಿದ್ದಾರೆʼʼ ಎಂದು ಟೀಕಿಸಿದರು.

ಹಗರಣಗಳ ಪಿತಾಮಹ ವಿಜಯೇಂದ್ರ: ಹರಿಪ್ರಸಾದ್‌ ಕಿಡಿ

ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ʻʻಭ್ರಷ್ಟಾಚಾರದಲ್ಲಿ ಪ್ರಪಂಚದಲ್ಲೇ ಕುಖ್ಯಾತಿ ಪಡೆದಿರುವ ಯಡಿಯೂರಪ್ಪ ಅವರು ಆಪರೇಷನ್‌ ಕಮಲದ ಮೂಲಕ ಅಧಿಕಾರ ಪಡೆದುಕೊಂಡಿದ್ದರು. ಆಗ ಮರಿ ಯಡಿಯೂರಪ್ಪ ಅಪ್ಪನನ್ನು ಹಾಳು ಮಾಡಿದ. ಸಿಎಂ ಸಹಿಯನ್ನು ಮಗನೇ ಮಾಡುತ್ತಿದ್ದನು. ಇದರ ಬಗ್ಗೆ ತನಿಖೆ ಆಗಬೇಕು. ನಕಲಿ ಸಹಿ ಮಾಡಲಾಗಿದೆ. ಹಗರಣದ ಪಿತಾಮಹ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ” ಎಂದು ಹರಿಹಾಯ್ದರು.

“83 ವರ್ಷದ ಹಿಂದೆ ಇದೇ ದಿನ ಮಹಾತ್ಮ ಗಾಂಧಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ಕೊಟ್ಟರು. ಇದೊಂದು ಪವಿತ್ರವಾದ ದಿನ. ಇದೇ ದಿನ ನಾವು ಈಗ ಬಿಜೆಪಿ ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಿನಿಂದ ಮೈಸೂರಿಗೆ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಕಾಂಗ್ರೆಸ್‌ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿದ್ದಾರೆʼʼ ಎಂದು ಆರೋಪಿಸಿದರು.

ʻʻಆಪರೇಷನ್‌ ಕಮಲದ ಮೂಲಕ ಕುಖ್ಯಾತಿ ಗಳಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ನಾಚಿಕೆ, ಮಾನ- ಮರ್ಯಾದೆ ಇಲ್ಲದೇ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ʻಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಪರೋಕ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಆಗ ಎಷ್ಟು ಕಡತಗಳಿಗೆ ಅಪ್ಪನ ಡೂಪ್ಲಿಕೇಟ್ ಸಹಿ ಮಾಡಿದ್ದರು ಎಂಬುದನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ಆಗ, ಯಡಿಯೂರಪ್ಪ ಅವರ ಕಾಲದ ಮತ್ತಷ್ಟು ಹಗರಣಗಳು ಹೊರಬರುತ್ತವೆʼʼ ಎಂದು ಹೇಳಿದರು.

ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ: ಈಶ್ವರ ಖಂಡ್ರೆ ವಾಗ್ದಾಳಿ

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʻʻಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡುತ್ತಿದೆ. ಮಲತಾಯಿ ಧೋರಣೆ ಅನುಸರಿಸುತ್ತಿದೆ. ತೆರಿಗೆ ಪಾಲು ಕೊಡದೆ ವಂಚನೆ ಮಾಡುತ್ತಿದ್ದಾರೆ. ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ ಕೊಡದೇ ದ್ರೋಹ ಮಾಡಿದ್ದು, ಅವುಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆʼʼ ಎಂದರು.

ʻʻಬ್ರಹ್ಮಾಂಡ ಭ್ರಷ್ಟಾಚಾರಿಗಳಾದ ಬಿಜೆಪಿ ಹಾಗೂ ಜೆಡಿಎಸ್‌ನವರು ನಡೆಸುತ್ತಿರುವ ಪಾದಯಾತ್ರೆಯನ್ನು ಜನರು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಹಗರಣಗಳ ಪಿತಾಮಹರಿದ್ದರೆ ಅವರು ಬಿಜೆಪಿ, ಜೆಡಿಎಸ್‌ನವರುʼʼ ಎಂದು ಆರೋಪಿಸಿದರು.

ʻʻಜಾತಿ-ಜಾತಿ, ಧರ್ಮ- ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ-ಜೆಡಿಎಸ್‌ನವರು ಮಾಡುತ್ತಿದ್ದಾರೆ. ಹೆಣಗಳ ಮೇಲೆ ರಾಜಕಾರಣ ಮಾಡಿದ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?ʼʼ ಎಂದು ಖಂಡ್ರೆ ಪ್ರಶ್ನಿಸಿದರು.

ಸಿದ್ದರಾಮಯ್ಯ ಆಡಳಿತ ಕಳಂಕರಹಿತ, ಪ್ರಾಮಾಣಿಕ: ಪರಮೇಶ್ವರ್

ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿ, ಕಳಂಕರಹಿತ, ಬಡವರ ದನಿಯಾಗಿ ಹಾಗೂ ಪ್ರಾಮಾಣಿಕ ಆಡಳಿತವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ʻʻಮುಖ್ಯಮಂತ್ರಿ ಮೇಲೆ ಆಪಾದನೆ ಮಾಡಿದವರು, ಸರ್ಕಾರವನ್ನು ಉರುಳಿಸುತ್ತೇವೆ ಎಂದು ಮಾತನಾಡಿದವರಿಗೆ ಪ್ರಶ್ನೆ ಕೇಳುವ ಸಮಾವೇಶ ಇದಾಗಿದೆ. ಬಹುಶಃ ಕರ್ನಾಟಕದ ಇತಿಹಾಸದಲ್ಲಿಯೇ ಹೀಗೆ ವಿರೋಧ ಪಕ್ಷದವರಿಗೆ ಪ್ರಶ್ನೆ ಕೇಳುವ ಸಮಾವೇಶ ನಡೆದಿರಲಿಲ್ಲʼʼ ಎಂದರು.

ʻʻನಮ್ಮ ಪಾದಯಾತ್ರೆಗಳು ಜನರ ಪರವಾಗಿ ನಡೆಸಿದವಾಗಿದ್ದವು. ಆದರೆ ವಿರೋಧ ಪಕ್ಷದವರು ಕ್ಷುಲ್ಲಕ ಕಾರಣದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪ್ರಭಾವ ಬೀರಿದ್ದಕ್ಕೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳಿದ್ದರೆ ತೋರಿಸಿʼʼ ಎಂದು ಸವಾಲು ಹಾಕಿದರು.

ʻʻನಿಮ್ಮ ವಿರುದ್ಧ ಆಪಾದನೆಗಳಿಲ್ಲವೇ? ಬಿಜೆಪಿಯ ನಾಯಕರೇ, ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿನೋಟ ಎಂಬ ಪ್ರಕಟಣೆ ಕೊಟ್ಟಿದ್ದನ್ನು ಮರೆತಿದ್ದೀರಾ?ʼʼ ಎಂದು ಪ್ರಶ್ನಿಸಿದರು. ಆಗ ಪ್ರಶ್ನೆ ಕೇಳಿದ್ದ ಜೆಡಿಎಸ್‌ನವರಿಗೆ ಬಿಜೆಪಿಯವರು ಮೊದಲು ಉತ್ತರ ಕೊಡಲಿ ಎಂದರು.

ʻʻಬಿಜೆಪಿಯ ಸಿ.ಪಿ. ಯೋಗೇಶ್ವರ್ ಹಾಗೂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಆರೋಪಗಳ ವಿಡಿಯೊ ಕೂಡ ಪ್ರದರ್ಶಿಸಲಾಯಿತು ಇವರೆಲ್ಲರೂ ಯೂಟರ್ನ್ ನಾಯಕರು ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು. ಕುಟುಂಬದವರ ಅನುಕೂಲಕ್ಕಾಗಿ ಬೇರೆ ನಾಯಕರನ್ನು ಓಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಯಾರನ್ನೂ ಬೆಳೆಯಲು ಬಿಡುವ ಜಾಯಮಾನ ಅವರದಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ . ನಾವೆಲ್ಲರೂ ಅವರೊಂದಿಗೆ ಇದ್ದೇವೆʼʼ ಎಂದು ಹೇಳಿದರು.

ಕಪ್ಪುಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯ: ಎಂಬಿ ಪಾಟೀಲ್

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‌ʻʻಸಿದ್ದರಾಮಯ್ಯ ಅವರು ಸುದೀರ್ಘವಾದ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗದಿಂದ ಬಂದು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ನಡೆಸುವ ಮೂಲಕ ಯತ್ನಿಸುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದರು.

ʻʻಬಿಜೆಪಿ ಸರ್ಕಾರವಿದ್ದಾಗಲೇ ಮುಡಾ ತಪ್ಪಾಗಿದೆ ಎಂದು ಹೇಳಿ, ಮುಖ್ಯಮಂತ್ರಿ ಕುಟುಂಬಕ್ಕೆ ಭೂಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನಿದೆ? ಎಂದು ಪ್ರಶ್ನಿಸಿದರು.

ಬಂಡೆ ಸಿದ್ದರಾಮಯ್ಯನವರ ಜೊತೆ ಇದೆ: ಡಿಕೆ ಶಿವಕುಮಾರ್

ʻʻಬಿಜೆಪಿ-ಜೆಡಿಎಸ್‌ನವರದ್ದು ಪಾಪವಿಮೋಚನೆಯ ಯಾತ್ರೆಯಾಗಿದೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮಯುದ್ಧವಾಗಿದೆ. ಅಸತ್ಯದ ವಿರುದ್ಧದ ಸತ್ಯದ ಹೋರಾಟವಾಗಿದೆʼʼ ಎಂದು ಡಿಸಿಎಂ ಡಿಕೆ ಶಿವುಮಾರ್ ಹೇಳಿದರು.

ʻʻರಾಜ್ಯದ ಜನರು, ಸಂವಿಧಾನದ ರಕ್ಷಣೆಗಾಗಿ ಈ ಜನಾಂದೋಲನವನ್ನು ನಡೆಸುತ್ತಿದ್ದೇವೆ. ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆದು ಹಾಕುತ್ತೇವೆ ಎಂದು ಹೊರಟಿರುವವರ ವಿರುದ್ಧ ಬಡವರಿಗಾಗಿ ನಾವು ಹೋರಾಡುತ್ತಿದ್ದೇವೆ. ಮಿಸ್ಟರ್ ಕುಮಾರಸ್ವಾಮಿ, ಅಶೋಕ ಹಾಗೂ ವಿಜಯೇಂದ್ರ ಅವರೇ ಈ ಡಿಕೆಶಿ ನೇತೃತ್ವದಲ್ಲಿ 136 ಸೀಟುಗಳನ್ನು ಪಡೆದಿದ್ದೇವೆ. ಈ ಸರ್ಕಾರ ತೆಗೆಯಲು ಏನೇ ಕುತಂತ್ರ ಮಾರಿ ದರೂ ಅಗುವುದಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ ನಿಮಗೆ? ಈ ಬಂಡೆ ಸಿದ್ದರಾಮಯ್ಯ ಅವರ ಜೊತೆ ಇದೆ. ನನ್ನೊಂದಿಗೆ 136 ಜನ ಶಾಸಕರು ಇದ್ದಾರೆ. ನಾವೆಲ್ಲವೂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ನಿಮ್ಮ ಕೈಯಲ್ಲಿ ಏನೂ ಮಾಡಲಾಗುವುದಿಲ್ಲʼʼ ಎಂದು ಗುಡುಗಿದರು.

ಮೈಸೂರು ಚಲೋ ಪಾದಯಾತ್ರೆಗೆ ಅಪಸ್ವರ ವ್ಯಕ್ತಪಡಿಸಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ನೀಡಿದ್ದ ಹೇಳಿಕೆ ಹಾಗೂ ಯಡಿಯೂರಪ್ಪ ಮತ್ತು ದೇವೇಗೌಡರು ಪರಸ್ಪರ ನಿಂದಿಸಿಕೊಂಡಿದ್ದ ವಿಡಿಯೊಗಳನ್ನು ಪ್ರದರ್ಶಿಸುತ್ತಾ ಡಿಕೆಶಿ ಮಾತನಾಡಿದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿದ್ದ ಆರೋಪಗಳ ವಿಡಿಯೊ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.

Tags:    

Similar News