ಧರ್ಮಸ್ಥಳ ಪ್ರಕರಣ | ಎಸ್‌ಐಟಿ ರಚನೆಗೆ ನಮ್ಮ ವಿರೋಧವಿಲ್ಲ; ಆದರೆ, ತನಿಖೆಗೆ ಒತ್ತಡ ಹೇರಿದವರು ಯಾರು?- ಅಶೋಕ್‌ ಪ್ರಶ್ನೆ

ಕೆಲ ಮಾಧ್ಯಮಗಳಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಮೇರೆಗೆ ಎಸ್‌ಐಟಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.;

Update: 2025-08-18 11:43 GMT

ಧರ್ಮಸ್ಥಳ ಪ್ರಕರಣ ಕುರಿತಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೀಡಿರುವ ಉತ್ತರದಲ್ಲಿ ಏನೂ ಇಲ್ಲ, ಬರೆದುಕೊಂಡು ಬಂದು ಓದಿದಂತಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದರು.

ಗೃಹ ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಅಡಗಿದೆ ಎಂದು ಹಲವರು ಪದೇ ಪದೇ ಹಲವರು ಹೇಳಿದ್ದಾರೆ. ಯಾರ ಒತ್ತಡಕ್ಕೆ ಮಣಿದು ಎಸ್‌ಐಟಿ ಮಾಡಲಾಗಿದೆ ಎಂದು ಹೇಳಿಲ್ಲ. ‌ಮುಖ್ಯಮಂತ್ರಿ ಮನೆಗೆ ಪ್ರಗತಿಪರರು ಬಂದು ಮನವಿ ನೀಡಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ. ನಾವ್ಯಾರು ಎಸ್‌ಐಟಿ ಮಾಡಿ ಎಂದು ಕೇಳಿರಲಿಲ್ಲ. ಕೆಲ ಮಾಧ್ಯಮಗಳಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಮೇರೆಗೆ ಎಸ್‌ಐಟಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೊಲೆ ಆರೋಪ ಬಂದಿದೆ.  ಈ ಬಗ್ಗೆಯೂ ಎಸ್‌ಐಟಿ ರಚನೆ ಮಾಡಿ, ಜನರಿಗೆ ಸ್ಪಷ್ಟ ಸಂದೇಶ ನೀಡಬೇಕು.  ಸದನದಲ್ಲಿ ನಮಗೆ ಮರ್ಯಾದೆ ಇಲ್ಲ. ಡಿಕೆಶಿ ಅವರು ಷಡ್ಯಂತ್ರ ಎಂದು ಹೇಳಿದ್ದಾರೆ. ಆ ಬಗ್ಗೆ ಪ್ರಸ್ತಾಪಿಸಿಲ್ಲ, ಮೊದಲು ಬುರುಡೆ ಬಗ್ಗೆ ತನಿಖೆ ಮಾಡಬೇಕಿತ್ತು. ದೂರುದಾರನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕಿಡಿಕಾರಿದರು. 

ಅನಾಮಿಕನಿಗೆ ತಲೆಬುರುಡೆ ಸಿಕ್ಕಿದ್ದು ಹೇಗೆ?,  ರಾಜ್ಯದಲ್ಲಿ ಲಕ್ಷಾಂತರ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಣ್ಯದಲ್ಲಿ ಅಗೆಯಲು ಅನುಮತಿ ನೀಡಿದ್ದು ಯಾರು, ಈ ಎಲ್ಲಾ ದೂರುಗಳಿಗೂ ಎಸ್‌ಐಟಿ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಧರ್ಮಸ್ಥಳದ ಮಾನ ಹರಾಜಾಗುತ್ತಿದೆ. ಅದನ್ನು ಈಗ ಯಾರು ಕಟ್ಟಿಕೊಡುತ್ತಾರೆ ಎಂದು ಕಿಡಿಕಾರಿದರು.

ಡಿಕೆಶಿ ಅವರು ಷಡ್ಯಂತ್ರದ ಕುರಿತು ಬಹಿರಂಗಪಡಿಸಬೇಕು. ಇಲ್ಲಿ ದೂರುದಾರ ಮುಖ್ಯವಲ್ಲ. ಆತನ ಹಿಂದಿರುವವರು ಯಾರು ಎಂಬುದು ಪತ್ತೆಯಾಗಬೇಕು ಎಂದರು.

ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಿಎಲ್‌ಪಿ ಸಭೆಯಲ್ಲಿ ಚರ್ಚೆಯಾಗಿದೆ.  ಜವಾಬ್ದಾರಿಯುತ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಅವರು ಧರ್ಮಸ್ಥಳಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಯಾರು ಷಡ್ಯಂತ್ರ ಎಲ್ಲವೂ ಹೊರಗಡೆ ಬರಬೇಕು. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬಗ್ಗೆ ಸೂಕ್ತ ಸಂದೇಶ ನೀಡುತ್ತೇವೆ. ನೂರಕ್ಕೆ ನೂರರಷ್ಟು ಷಡ್ಯಂತ್ರದ ಬಗ್ಗೆ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು.

Tags:    

Similar News