Wayanad Landslide | ರಾಜ್ಯದ ಇನ್ನಿಬ್ಬರ ಮೃತದೇಹ ಪತ್ತೆ: ಬದುಕುಳಿದ 12 ಮಂದಿ ವಾಪಾಸ್‌

ಕೇರಳದ ವಯನಾಡಿನ ಚೋರಲ್ಮಲಾ ಮತ್ತು ಮುಂಡಕೈಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕರ್ನಾಟಕದ ಮೂವರ ಮೃತದೇಹಗಳು ಬುಧವಾರದವರೆಗೆ ಪತ್ತೆಯಾಗಿದ್ದು, ಗುರುವಾರ ಇನ್ನೂ ಇಬ್ಬರ ಮೃತದೇಹ ಪತ್ತೆಹಚ್ಚಲಾಗಿದೆ.;

Update: 2024-08-01 11:18 GMT
ವಯನಾಡು ಭೂಕುಸಿತ
Click the Play button to listen to article

ಕೇರಳದ ವಯನಾಡಿನ ಚೋರಲ್ಮಲಾ ಮತ್ತು ಮುಂಡಕೈಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕರ್ನಾಟಕದ ಮೂವರ ಮೃತದೇಹಗಳು ಬುಧವಾರದವರೆಗೆ ಪತ್ತೆಯಾಗಿದ್ದು, ಗುರುವಾರ ಇನ್ನೂ ಇಬ್ಬರ ಮೃತದೇಹ ಪತ್ತೆಹಚ್ಚಲಾಗಿದೆ. ದುರಂತದಲ್ಲಿ ರಾಜ್ಯದ ಒಟ್ಟು 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಗುರುವಾರ ಸಿಕ್ಕಿರುವ ಎರಡು ಮೃತದೇಹಗಳನ್ನು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ರಾಜೇಂದ್ರ (50) ಮತ್ತು ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಉಕ್ಕಲಗೆರೆಯ ಶಿವಮ್ಮ (50) ಎಂದು ಗುರತಿಸಲಾಗಿದೆ. ಇದರೊಂದಿಗೆ ಇದುವರೆಗೆ ಚಾಮರಾಜನಗರದ ಪುಟ್ಟಸಿದ್ದಿ, ರಾಣಿ, ರಾಜೇಂದ್ರ ಹಾಗೂ ಚಾಮರಾಜನಗರದ ಟಿ ನರಸೀಪುರ ತಾಲೂಕಿನ ಉಕ್ಕಲಗೆರೆಯ ಶ್ರೇಯಾ ಮತ್ತು ಶಿವಣ್ಣ ಅವರ ಮೃತದೇಹಗಳನ್ನು ಮಾತ್ರ ಗುರುತಿಸಲಾಗಿದೆ. ಮೆಪ್ಪಾಡಿಯಲ್ಲಿ ನಡೆದ ಸಾಮೂಹಿಕ ಶವಸಂಸ್ಕಾರದ ವೇಳೆ ಎಲ್ಲರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ವಯನಾಡ್‌ನಲ್ಲಿರುವ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.

ಈ ಮಧ್ಯೆ ಸಂಬಂಧಿಕರನ್ನು ಭೇಟಿ ಮಾಡಲು ವಯನಾಡ್‌ಗೆ ತೆರಳಿ ಅಲ್ಲಿ ಸಿಲುಕಿಕೊಂಡಿದ್ದ ರಾಜ್ಯದ ಇಬ್ಬರನ್ನು ಚಾಮರಾಜನಗರದ ಕಂದಾಯ ಅಧಿಕಾರಿಗಳು ಕರೆತಂದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದ ಸ್ವಾಮಿಶೆಟ್ಟಿ (70) ಸಂಬಂಧಿಕರೊಬ್ಬರ ಮನೆಗೆ ಬಂದಿದ್ದು, ವೈತಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಅಧಿಕಾರಿಗಳು ವಾಪಸ್ ಕರೆತಂದಿದ್ದಾರೆ. ಅಲ್ಲದೇ ಸಂಬಂಧಿಕರನ್ನು ಭೇಟಿಯಾಗಲು ಹೋಗಿ ಸಿಲುಕಿಕೊಂಡಿದ್ದ ಮಳವಳ್ಳಿಯ ದಡದಳ್ಳಿಯ ರಾಜೇಶ್ ಎಂಬುವವರ ಪತ್ನಿ ರಾಧಾ ಅವರನ್ನು ಕರೆತರಲಾಗಿದೆ. ಗುಂಡ್ಲುಪೇಟೆಯಿಂದ ಬದುಕುಳಿದ ಮೂವರು ಮತ್ತು ಚಾಮರಾಜನಗರದಿಂದ ಅಲ್ಲಿಗೆ ವಲಸೆ ಬಂದು ನೆಲೆಸಿದ್ದ ಏಳು ಮಂದಿಯನ್ನು ಮರಳಿ ಕರೆತರಲಾಗಿದೆ. 

ಮನೆಮಂದಿ ಕಳೆದುಕೊಂಡ ವೃದ್ಧೆಗೆ ಸಿಎಂ ಸಾಂತ್ವನ

ಮೂವರು ಪುತ್ರರು, ಮೂವರು ಸೊಸೆಯಂದಿರು ಹಾಗೂ ಮೂವರು ಮೊಮ್ಮಕ್ಕಳನ್ನು ಕಳೆದುಕೊಂಡಿರುವ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆಯ ಮಹದೇವಮ್ಮ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಬೈಲ್‌ ಮೂಲಕ ಸಂಪರ್ಕಿಸಿ ಮಾತನಾಡಿಸಿದ್ದು, ಆಕೆಗೆ ಸಾಂತ್ವನ ಹೇಳಿದ ಅವರು ಆಕೆಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಇಲ್ಲಿಯವರೆಗೆ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ರಾಜೇಂದ್ರ (50), ರತ್ನಮ್ಮ (45) ಹಾಗೂ ಚಾಮರಾಜನಗರ ಮೂಲದ ಚೋರಲ್ಮಲಾ ನಿವಾಸಿಗಳಾದ ಪುಟ್ಟಸಿದ್ದಿ (62) ಮತ್ತು ರಾಣಿ (50); ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಕತ್ತರಗಟ್ಟ ಮೂಲದ ಮುಂಡಕೈ ನಿವಾಸಿಗಳಾದ ಎರಡೂವರೆ ವರ್ಷದ ನಿಹಾಲ್, ಲೀಲಾವತಿ (55), ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಉಕ್ಕಲಗೆರೆಯ ಒಂಬತ್ತು ಮಂದಿ ಹಾಗೂ ಚೋರಲ್ಮಲ ನಿವಾಸಿಗಳಾದ ಗುರುಮಲ್ಲನ್ (60), ಶಿವಣ್ಣ (50), ಅಪ್ಪಣ್ಣ (39), ಸಾವಿತ್ರಿ (54), ಸಬಿತಾ (43), ದಿವ್ಯ (35), ಶ್ರೇಯಾ (19), ಅಶ್ವಿನ್ (13), ಜಿತು (11) ಮೃತಪಟ್ಟಿದ್ದಾರೆ.

Tags:    

Similar News