Fake News Case | ರೈತ ಆತ್ಮಹತ್ಯೆ ಸುಳ್ಳು ಸುದ್ದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್
ರೈತ ಆತ್ಮಹತ್ಯೆಗೆ ಸಂಬಂಧಿಸಿದಂತೆ ‘ಸುಳ್ಳು ಸುದ್ದಿ’ ಹಬ್ಬಿಸಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಜಿಲ್ಲಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಪೊಲೀಸರು ‘ಸುಳ್ಳು ಸುದ್ದಿ’ ಹಬ್ಬಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಅವರು ನೀಡಿದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಕನ್ನಡದ ಎರಡು ಡಿಜಿಟಲ್ ಸುದ್ದಿ ತಾಣಗಳ ಸಂಪಾದಕರ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ.
"4 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದ್ದರಿಂದ ಮನನೊಂದು ಹಾವೇರಿ ಜಿಲ್ಲೆಯ ಹರನಗಿರಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಕ್ಫ್ ನೋಟಿಸ್ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಕನ್ನಡದ ಎರಡು ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಇದೇ ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಟ್ಯಾಗ್ ಮಾಡಿದ್ದರು.
ಈ ಸುದ್ದಿಗಳ ಬಗ್ಗೆ ಪರಿಶೀಲನೆ ನಡೆಸಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, "ಹಾವೇರಿ ಜಿಲ್ಲೆ, ಹಾನಗಲ್ ತಾಲೂಕಿನ ಹರನಗಿರಿ ಗ್ರಾಮದ 24 ವರ್ಷದ ರೈತ ರುದ್ರಪ್ಪ ಅವರು ಜನವರಿ 6, 2022 ರಂದು ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರಪ್ಪ ಅವರು 7 ಲಕ್ಷ ರೂ ಸಾಲ ಮಾಡಿ ಅಪಾರ ಬೆಳೆ ನಷ್ಟ ಅನುಭವಿಸಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅವರ ತಂದೆ ಹೇಳಿಕೆ ನೀಡಿದ್ದರು. ಅತಿವೃಷ್ಟಿಯಿಂದ ಹಾನಿಯಾಗಿದ್ದು ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
"ಆದರೆ, ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಬಗ್ಗೆ ಪರಿಶೀಲಿಸಿ ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ" ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ಹೇಳಿದ್ದಾರೆ.
'ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಮೊದಲ ಆರೋಪಿಯಾಗಿ ಮಾಡಲಾಗಿದೆ. ʼಕನ್ನಡ ದುನಿಯಾʼ ಹಾಗೂ ʼಕನ್ನಡ ನ್ಯೂಸ್ʼ ಡಿಜಿಟಲ್ ಮಾಧ್ಯಮಗಳ ಸಂಪಾದಕರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಮೂವರಿಗೂ ಸದ್ಯದಲ್ಲೇ ನೋಟಿಸ್ ನೀಡಿ ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ಅವರು ಹೇಳಿದ್ದಾರೆ.
'ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಹಾಗೂ ದ್ವೇಷ ಉಂಟು ಮಾಡಲು ಪ್ರಚೋದಿಸುವ ಸುಳ್ಳು ಸುದ್ದಿ (ಬಿಎನ್ಎಸ್ 353 (2) ಹರಿಬಿಟ್ಟ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ' ಎಂದು ತಿಳಿಸಿದ್ದಾರೆ.