ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಬಲಿಪಾಡ್ಯಮಿಯಂದು 'ಗೋಪೂಜೆ'
ಹಿಂದೂ ಧರ್ಮದಲ್ಲಿ ಗೋವಿಗೆ 'ಗೋಮಾತೆ' ಎಂಬ ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತಿದೆ. ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗೋಪೂಜೆ
ದೀಪಾವಳಿ ಹಬ್ಬದ ಅಂಗವಾಗಿ, ಬಲಿಪಾಡ್ಯಮಿಯ ದಿನದಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಸಂಜೆ 'ಗೋಪೂಜೆ'ಯನ್ನು ಕಡ್ಡಾಯವಾಗಿ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹಿಂದೂ ಧರ್ಮದಲ್ಲಿ ಗೋವಿಗಿರುವ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ಮಂಗಳವಾರ (ಅಕ್ಟೋಬರ್ 21) ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವರ ಮೌಖಿಕ ನಿರ್ದೇಶನದಂತೆ, ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸೂಚನೆ ನೀಡಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
"ಹಿಂದೂ ಧರ್ಮದಲ್ಲಿ ಗೋವಿಗೆ 'ಗೋಮಾತೆ' ಎಂಬ ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತಿದೆ. ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಲಿಪಾಡ್ಯಮಿ ದಿನದಂದು ದೇವಾಲಯಗಳಲ್ಲಿನ ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಬೇಕು. ನಂತರ, ಅಕ್ಕಿ, ಬೆಲ್ಲ, ಹಣ್ಣುಗಳನ್ನು ಒಳಗೊಂಡ 'ಗೋಗ್ರಾಸ'ವನ್ನು ನೀಡಿ, ಸಂಜೆ ವಿಧಿವತ್ತಾಗಿ ಗೋಪೂಜೆ ನೆರವೇರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಈ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಮತ್ತು ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳಿಗೆ ಕಳುಹಿಸಲಾಗಿದೆ.