ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನೋಡಲು ಬನ್ನಿ, ಲಡ್ಡು ಉಚಿತವಾಗಿ ತಿನ್ನಿ
ಆರತಿ ವೀಕ್ಷಣೆಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಕೇವಲ ದೃಶ್ಯದ ರಸದೌತಣ ಮಾತ್ರವಲ್ಲದೆ, ಪ್ರಸಾದದ ಸಿಹಿಯನ್ನೂ ಉಣಬಡಿಸಲು ಸರ್ಕಾರ ಮುಂದಾಗಿದೆ.
ಗಂಗಾ ಆರತಿಯ ಮಾದರಿಯಲ್ಲಿ, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ, ಕನ್ನಡ ನಾಡಿನ ಜೀವನದಿ ಕಾವೇರಿಗೆ 'ಕಾವೇರಿ ಆರತಿ ಮಾಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ, (ಸೆಪ್ಟೆಂಬರ್ 26ರಿಂದ) ಐದು ದಿನಗಳ ಕಾಲ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬೃಂದಾವನದಲ್ಲಿ ಈ ಭವ್ಯ ದೃಶ್ಯಕಾವ್ಯ ಅನಾವರಣಗೊಳ್ಳಲಿದ್ದು, ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದು ಕಾದಿದೆ.
ಕಾವೇರಿ ಆರತಿಯನ್ನು ಕಣ್ತುಂಬಿಕೊಳ್ಳಲು ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ "ತಾಯಿ ಕಾವೇರಿ ಲಾಡು" ಪ್ರಸಾದವನ್ನು ಉಚಿತವಾಗಿ ವಿತರಿಸಲು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿತ್ಯ 8 ರಿಂದ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಲಾಡು ವಿತರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ, ಆರತಿ ವೀಕ್ಷಣೆಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಕೇವಲ ದೃಶ್ಯದ ರಸದೌತಣ ಮಾತ್ರವಲ್ಲದೆ, ಪ್ರಸಾದದ ಸಿಹಿಯನ್ನೂ ಉಣಬಡಿಸಲು ಸರ್ಕಾರ ಮುಂದಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 26ರ ಶುಕ್ರವಾರ ಸಂಜೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ. ಆದಿಚುಂಚನಗಿರಿ, ಸುತ್ತೂರು ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಕೃಷ್ಣರಾಜಸಾಗರವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಏನಿದು ಕಾವೇರಿ ಆರತಿ?
"ಕಾವೇರಿ ಆರತಿ" ಯೋಜನೆಯು, ಉತ್ತರ ಭಾರತದ ವಾರಣಾಸಿಯಲ್ಲಿ ಗಂಗಾ ನದಿಗೆ ನಡೆಯುವ ಭವ್ಯವಾದ "ಗಂಗಾ ಆರತಿ"ಯ ಮಾದರಿಯಲ್ಲಿ, ಕನ್ನಡ ನಾಡಿನ ಜೀವನದಿ ಕಾವೇರಿಗೆ ಗೌರವ ಸಮರ್ಪಿಸುವ ಒಂದು ಬೃಹತ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸಾದ ಈ ಯೋಜನೆಯ ಮುಖ್ಯ ಉದ್ದೇಶ, ಕಾವೇರಿ ನದಿಯ ಮಹತ್ವವನ್ನು ಸಾರುವುದು ಮತ್ತು ಕೆಆರ್‌ಎಸ್ ಪ್ರದೇಶವನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದಾಗಿದೆ.
ಈ ಯೋಜನೆಯ ಅಡಿಯಲ್ಲಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬಳಿ, ಏಕಕಾಲದಲ್ಲಿ 8 ರಿಂದ 10 ಸಾವಿರ ಜನರು ಕುಳಿತು ವೀಕ್ಷಿಸಬಹುದಾದ ಬೃಹತ್ ವೇದಿಕೆ ಮತ್ತು ಆಸನ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ. 92 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ, 13 ಅರ್ಚಕರಿಂದ ಶಾಸ್ತ್ರೋಕ್ತವಾಗಿ ಕಾವೇರಿ ನದಿಗೆ ಪೂಜೆ, ಪ್ರಾರ್ಥನೆ ಮತ್ತು ಆರತಿಯನ್ನು ನೆರವೇರಿಸಲಾಗುತ್ತದೆ. ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೀಪಾಲಂಕಾರಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ. ಈ ಮೂಲಕ, ಧಾರ್ಮಿಕ ಆಚರಣೆಯ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿ, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಕ್ರಮ ಕೈಗೊಂಡಿದೆ.