BJP Infighting | ವಿಜಯೇಂದ್ರಗೆ ಹುಡುಗಾಟಿಕೆ ಬುದ್ದಿ, ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ: ರಮೇಶ ಜಾರಕಿಹೊಳಿ

ಒಂದು ಕಡೆ, ದೆಹಲಿಗೆ ಹೋಗಿ ವರಿಷ್ಠರು ನೀಡಿದ್ದ ನೋಟಿಸ್‌ಗೆ ಉತ್ತರ ಕೊಟ್ಟು ಬಂದ ಮಾರನೆ ದಿನವೇ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಬಣದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರೆ, ಮತ್ತೊಂದು ಕಡೆ ಯತ್ನಾಳ್‌ ಬಣದ ಪ್ರಮುಖ ರಮೇಶ್‌ ಜಾರಕಿಹೊಳಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಅರ್ಹತೆಯನ್ನೇ ಲೇವಡಿ ಮಾಡಿದ್ದಾರೆ.

Update: 2024-12-06 08:02 GMT
ರಮೇಶ್‌ ಜಾರಕಿಹೊಳಿ
Click the Play button to listen to article

ದೆಹಲಿ ವರಿಷ್ಠರ ಬುದ್ಧಿವಾದದ ಹೊರತಾಗಿಯೂ ರಾಜ್ಯ ಬಿಜೆಪಿಯ ಬಣ ರಾಜಕಾರಣ ತಣ್ಣಗಾಗಿಲ್ಲ. ಒಂದು ಕಡೆ, ದೆಹಲಿಗೆ ಹೋಗಿ ವರಿಷ್ಠರು ನೀಡಿದ್ದ ನೋಟಿಸ್‌ಗೆ ಉತ್ತರ ಕೊಟ್ಟು ಬಂದ ಮಾರನೆ ದಿನವೇ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಬಣದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರೆ, ಮತ್ತೊಂದು ಕಡೆ ಯತ್ನಾಳ್‌ ಬಣದ ಪ್ರಮುಖ ರಮೇಶ್‌ ಜಾರಕಿಹೊಳಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಅರ್ಹತೆಯನ್ನೇ ಲೇವಡಿ ಮಾಡಿದ್ದಾರೆ. 

ಬಿಜೆಪಿ ಹಿರಿಯ ನಾಯಕ ಯತ್ನಾಳ್‌ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಕಳೆದ ಕೆಲವು ದಿನಗಳಿಂದ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಅವರಿಗೆ ಹೈಕಮಾಂಡ್‌ ಶೋಕಾಸ್‌ ನೋಟಿಸ್‌ ಕೂಡ ಜಾರಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ವಿವರಣೆಯನ್ನೂ ನೀಡಿ ಬಂದಿದ್ದಾರೆ. ವರಿಷ್ಠರ ಭೇಟಿಯ ಬೆನ್ನಲ್ಲೇ ದೆಹಲಿಯಲ್ಲೇ ಯತ್ನಾಳ್‌ ಬಣದ ಪ್ರಮುಖರು ಸಭೆ ನಡೆಸಿದ್ದಾರೆ.

ಈ ನಡುವೆ, ಯತ್ನಾಳ್‌ ಬಣದ ಹಿರಿಯ ನಾಯಕ ರಮೇಶ್ ಜಾರಕಿಹೊಳಿ ಇದೀಗ ಪಕ್ಷದ ರಾಜ್ಯಾಧ್ಯಕ್ಷರ ಅರ್ಹತೆಯನ್ನೇ ಲೇವಡಿ ಮಾಡಿದ್ದಾರೆ. ವಿಜಯೇಂದ್ರಗೆ ಇನ್ನೂ ಹುಡುಗಾಟಿಕೆ ಬುದ್ಧಿಯಿದೆ, ಇನ್ನೂ ಸಣ್ಣ ಹುಡುಗನಾಗಿರುವ ಅವರು ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಹಾಗಾಗಿ ಅವರಾಗಿಯೇ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕು. ಅನುಭವ ಆದಮೇಲೆ ಅಧ್ಯಕ್ಷರಾದರೆ ಸೂಕ್ತ ಎಂದು ಹೇಳುವ ಮೂಲಕ ವಿಜಯೇಂದ್ರ ಅವರು ಪಕ್ಷದ ಸಾರಥ್ಯ ವಹಿಸಲು ಇನ್ನೂ ಅನುಭವ ಸಾಲದು, ಇನ್ನೂ ಹುಡುಗಾಟಿಕೆಯ ಮನಸ್ಥಿತಿ ಅವರದ್ದು ಎಂದು ಲೇವಡಿ ಮಾಡಿದ್ದಾರೆ. 

ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಹೋರಾಟ ಮಾಡಿ ಬಿಜೆಪಿಯಲ್ಲಿ ದೊಡ್ಡ ಸ್ಥಾನವನ್ನು ಪಡೆದಿದ್ದಾರೆ. ಆದರೆ  ಯಡಿಯೂರಪ್ಪ ಮಗನೆಂಬುದೊಂದೇ ಅರ್ಹತೆ ಎಂದು ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇದರಿಂದ ಯಡಿಯೂರಪ್ಪ ಅವರ ಹೋರಾಟ ಮತ್ತು ತ್ಯಾಗವೂ ಮಂಕಾಗುತ್ತದೆ. ವಿಜಯೇಂದ್ರ, ಬಿಎಸ್‌ವೈ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿ ಅಡ್ಡಾಡುವ ವಯಸ್ಸು ಅವರದು. ಇನ್ನೂ 4 ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದು ಹೇಳಿದ್ದಾರೆ. \

ನಾವು ಯತ್ನಾಳ್ ಬೆನ್ನಿಗೆ ನಿಲ್ಲುತ್ತೇವೆ. ಕೇಂದ್ರ ನಾಯಕರ ಮನವೊಲಿಸುತ್ತೇವೆ ಎಂದು ಹೇಳುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ತಮ್ಮ ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಅವರು, ತನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರನ್ನು ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಆಂತರಿಕ ಸಭೆ ಮಾಡಿ ಕೇಳಲಿ ಹೇಳುತ್ತೇನೆ ಎಂದು ಕೂಡ ಹೇಳಿದ್ದಾರೆ.

ವಕ್ಫ್ ವಿಚಾರವಾಗಿ ಜೆಪಿಸಿ ಅಧ್ಯಕ್ಷರನ್ನು ಭೇಟಿಯಾಗಿ ವಕ್ಫ್ ವಿರುದ್ಧದ ಮೊದಲ ಹಂತದ ಹೋರಾಟದ ವರದಿ ಸಲ್ಲಿಸಿದ್ದೇವೆ. ವಕ್ಫ್ ವಿರುದ್ಧ 2ನೇ ಹಂತದ ಹೋರಾಟಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ನಮ್ಮ ಕೆಲಸದ ಬಗ್ಗೆ ದೆಹಲಿಯ ವರಿಷ್ಠರು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಾರಕಿಹೊಳಿ ತಮ್ಮ ದೆಹಲಿ ಭೇಟಿ ಫಲಪ್ರದ ಎಂದು ಹೇಳಿದ್ದಾರೆ.

Tags:    

Similar News