ಕುರುಬ ಮುಖಂಡ ವಿಜಯಶಂಕರ್‌ ಮೇಘಾಲಯ ರಾಜ್ಯಪಾಲ; ಈಶ್ವರಪ್ಪಗೆ ಮುಳುವಾದ ʼಬಂಡಾಯʼ

ಮೈಸೂರು ಪ್ರದೇಶಕ್ಕೆ ಸೇರಿದ ಜನತಾ ಪರಿವಾರದ ನಾಯಕ ಬಿ. ರಾಚಯ್ಯ ಅವರು ರಾಜ್ಯಪಾಲರಾದ ಬಳಿಕ ಈಗ ವಿಜಯಶಂಕರ್‌ ಅವರು ರಾಜ್ಯವೊಂದರ ರಾಜ್ಯಪಾಲರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಾಂಗದವರೇ ಆದ ವಿಜಯಶಂಕರ್‌ ಆವರ ಆಯ್ಕೆ ಮೂಲಕ ಆ ಭಾಗದ ಕುರುಬ ಸಮೂದಾಯದ ವಿಶ್ವಾಸ ಗಳಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನಲಾಗಿದೆ.

Update: 2024-07-28 12:50 GMT

ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ಕುರುಬ ಮುಖಂಡ,  ಮಾಜಿ ಬಿಜೆಪಿ ಸಂಸದ  ಹಾಗೂ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಕಟಣೆ ಹೊರಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಆಪ್ತ ಬಳಗದ ವಿಜಯಶಂಕರ್‌ ಅವರಿಗೆ ಬಿಜೆಪಿ ವರಿಷ್ಠರು ಅವಕಾಶ ಕಲ್ಪಿಸಿದ್ದಾರೆ.

ಆ ಮೂಲಕ ಬಿಜೆಪಿಯ ಭಿನ್ನಮತೀಯ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ರಾಜ್ಯಪಾಲರಾಗುವ ಅವಕಾಶ ತಪ್ಪಿಸಿಕೊಂಡಂತಾಗಿದೆ ಎನ್ನಲಾಗಿದೆ. ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನಿರಾಕರಿಸಿದ ಬಳಿಕ ಹಾಗೂ ಅವರ ಪುತ್ರನಿಗೆ ಲೋಕಸಭಾ ಚುನಾವಣೆ ಟಿಕೆಟ್‌ ನಿರಾಕರಿಸಿದ ಬಳಿಕ ಅವರನ್ನು ರಾಜ್ಯಪಾಲರಾಗಿ ಮಾಡುವ ಸಂದೇಶ ನೀಡಲಾಗಿತ್ತು. ಆದರೆ, ಪಕ್ಷದ ಆದೇಶ ಮೀರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಶ್ವರಪ್ಪ, ಬಳಿಕ ನಡೆದ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಬಂಡಾಯ ಅಭ್ಯರ್ಥಿಗಳಾದ ರಘುಪತಿ ಭಟ್‌ ಮತ್ತಿತರರಿಗೆ ಬೆಂಬಲ ವ್ಯಕ್ತಪಡಿಸಿ ವರಿಷ್ಠರ ಸಿಟ್ಟಿಗೆ ಕಾರಣವಾಗಿದ್ದರು.

ಈಗ ರಾಜ್ಯಪಾಲ ಹುದ್ದೆಯಿಂದ ಕುರುಬ ಮುಖಂಡರೂ ಆಗಿರುವ , ಆರ್‌ಎಸ್‌ಎಸ್‌ ಮೂಲದ ಮತ್ತು  ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವಕಾಶ ವಂಚಿತರಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರದೇ ಜನಾಂಗಕ್ಕೆ ಸೇರಿದ ವಿಜಯಶಂಕರ್‌ ಅವರ ನೇಮಕವಾಗಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಅವಕಾಶ ಮತ್ತೆ ಕ್ಷೀಣವಾಗಿದೆ ಎಂದು ಹೇಳಲಾಗಿದೆ.

ಮೈಸೂರು ಪ್ರದೇಶಕ್ಕೆ ಸೇರಿದ  ಜನತಾ ಪರಿವಾರದ ನಾಯಕ ಬಿ. ರಾಚಯ್ಯ ಅವರು ರಾಜ್ಯಪಾಲರಾದ ಬಳಿಕ ಈಗ ವಿಜಯಶಂಕರ್‌ ಅವರು ರಾಜ್ಯವೊಂದರ ರಾಜ್ಯಪಾಲರಾಗಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಾಂಗದವರೇ ಆದ ವಿಜಯಶಂಕರ್‌ ಆವರ ಆಯ್ಕೆ ಮೂಲಕ ಆ ಭಾಗದ ಕುರುಬ ಸಮೂದಾಯದ ವಿಶ್ವಾಸ ಗಳಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನಲಾಗಿದೆ.

ಮೇಘಾಲಯ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ.ಎಚ್‌. ವಿಜಯಶಂಕರ್‌ ಅವರು ಒಂದು ಕಾಲದಲ್ಲಿ ಸಿಮೆಂಟ್ ವ್ಯಾಪಾರ ಮಾಡುತ್ತಿದ್ದವರು. ಹಿಂದುಳಿದ ವರ್ಗವಾದ ಕುರುಬ ಸಮಾಜಕ್ಕೆ ಸೇರಿದ  ಅವರ ಹೆಸರು ಚಂದ್ರಶೇಖರ ಹೊನ್ನಭಂಡಾರ ವಿಜಯಶಂಕರ್‌.  67 ವರ್ಷ ವಯಸ್ಸಿನ ಅವರು, ಒಂದು ಬಾರಿ ಶಾಸಕ, ಎರಡು ಬಾರಿ ಸಂಸದ ಹಾಗೂ ಒಮ್ಮೆ ವಿಧಾನಪರಿಷತ್‌ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಸಚಿವರೂ ಆಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನಿಂದ ರಾಜಕಾರಣಕ್ಕೆ ಕಾಲಿಟ್ಟ ಅವರು, ಬಳಿಕ ಬಿಜೆಪಿ ಸೇರಿದ್ದರು. ನಂತರ ಕಾಂಗ್ರೆಸ್‌ಗೆ ಮರಳಿದ್ದರು. ಬಳಿಕ ಬಿಜೆಪಿಗೆ ವಾಪಸಾಗಿದ್ದರು. 

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ (2010ರಲ್ಲಿ), ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸಣ್ಣ ಕೈಗಾರಿಕೆ ಮತ್ತು ಅರಣ್ಯ ಖಾತೆಯನ್ನು ನೀಡಿದ್ದರು. ಮೊದಲು ಚಾಮರಾಜನಗರ ಹಾಗೂ ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನಿರ್ವಹಿಸಿದ್ದರು ವಿಜಯಶಂಕರ್‌.

ವಿಜಯಶಂಕರ್‌ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ಘೋಷಿಸಿದ್ದ ಅವರಿಗೆ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಇದೀಗ ಅವರಿಗೆ ರಾಜ್ಯಪಾಲರ ಸ್ಥಾನವೇ ಒಲಿದು ಬಂದಿದೆ. ಸಾರ್ವಜನಿಕವಾಗಿ ಶ್ವೇತವಸ್ತ್ರಧಾರಿಯಾಗಿಯೇ ಕಾಣಿಸಿಕೊಳ್ಳುವುದು ಅವರ ವಿಶೇಷಗಳಲ್ಲೊಂದು.


Tags:    

Similar News