ವಿಧಾನಪರಿಷತ್ ಚುನಾವಣೆ: ಸಿ ಟಿ ರವಿ ಸೇರಿ ಮೂವರಿಗೆ ಟಿಕೆಟ್ ಘೋಷಿಸಿದ ಬಿಜೆಪಿ
ವಿಧಾನ ಪರಿಷತ್ ಚುನಾವಣೆಗೆ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ.;
ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ನ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಹೈಕಮಾಂಡ್ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ (ಜೂ.3) ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಸಿಟಿ ರವಿ ಅವರು ಲೋಕಸಭಾ ಟಿಕೆಟ್ ವಂಚಿತರಾಗಿದ್ದರು. ಇದೀಗ ಹೈಕಮಾಂಡ್ ಪರಿಷತ್ ಚುನಾವಣೆಗೆ ಸಿಟಿ ರವಿಗೆ ಅವರಿಗೆ ಅವಕಾಶ ನೀಡುವ ಮೂಲಕ ಬಂಬರ್ ಗಿಫ್ಟ್ ನೀಡಿದೆ.
ಧನ್ಯವಾದ ಸಲ್ಲಿಸಿದ ಸಿ.ಟಿ ರವಿ
ಇನ್ನು ಬಿಜೆಪಿ ಅಭ್ಯರ್ಥಿಯಾಗಿ ಸಿಟಿ ರವಿ ಅವರನ್ನು ಆಯ್ಕೆ ಮಾಡಿದಕ್ಕೆ ಪಕ್ಷದ ವರಿಷ್ಠರಿಗೆ ತಮ್ಮ ಎಕ್ಸ್ ಖಾತೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. ಹೈಕಮಾಂಡ್ ಸಿಟಿ ರವಿ ಅವರ ಹೆಸರನ್ನು ಸೂಚಿಸಿದ ಬೆನ್ನಲೇ ಧನ್ಯವಾದ ಸಲ್ಲಿಸಿರುವ ಸಿಟಿ ರವಿ ಅವರು, 'ಕರ್ನಾಟಕ ವಿಧಾನಪರಿಷತ್ತಿನ ದೈವಾರ್ಷಿಕ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಕೋರ್ ಕಮಿಟಿಯ ಎಲ್ಲಾ ನನ್ನ ಸಹೋದ್ಯೋಗಿ ಬಂಧುಗಳಿಗೆ ಹೃತ್ತೂರ್ವಕ ಧನ್ಯವಾದಗಳು' ಎಂದು ಸಿ.ಟಿ. ಹೇಳಿದ್ದಾರೆ.
ಅಭಿನಂದನೆ ಸಲ್ಲಿಸಿದ ವಿಜಯೇಂದ್ರ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಪರಿಷತ್ ಚುನಾವಣೆಗೆ ಆಯ್ಕೆಗೊಂಡವರನ್ನು ಅಭಿನಂದಿಸಿದ್ದು, ತಮ್ಮ x ಖಾತೆಯಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಲು ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಸಿಟಿ ರವಿ, ಹಾಲಿ ಸದಸ್ಯರಾಗಿ ಪಕ್ಷ ಸಂಘಟನೆಗೆ ಸದನದ ಒಳಗೆ ಹಾಗೂ ಹೊರಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದ ಎನ್. ರವಿಕುಮಾರ್ ಹಾಗೂ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಎಂ.ಜಿ. ಮುಳೆ ಅವರುಗಳನ್ನು ಪಕ್ಷದ ಪರವಾಗಿ ಆತ್ಮೀಯವಾಗಿ ಅಭಿನಂದಿಸುವೆ ಎಂದು ಬರೆದುಕೊಂಡಿದ್ದಾರೆ.
ಹಲವರಿಗೆ ನಿರಾಸೆ
ಎಂಎಲ್‌ಸಿ ಚುನಾವಣೆಗೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಅದರಲ್ಲೂ ಪ್ರಮುಖವಾಗಿ ಮಂಡ್ಯ ಲೋಕಸಭಾ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಅಲ್ಲದೇ ಕೋರ್ ಕಮಿಟಿ ಸಭೆಯಲ್ಲೂ ಸಹ ಪಟ್ಟಿಯಲ್ಲಿ ಸಿಟಿ ರವಿ ಹಾಗೂ ಲೋಕಸಭಾ ಟಿಕೆಟ್ ವಂಚಿತ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್ಗೆ ಕಳುಹಿಸಲಾಗಿತ್ತು. ಆದರೆ ಇವರಿಗೆಲ್ಲ ಬಿಜೆಪಿ ಹೈಕಮಾಂಡ್ ನಿರಾಸೆ ಉಂಟು ಮಾಡಿದೆ.