ವಿಧಾನ ಪರಿಷತ್ ಉಪ ಚುನಾವಣೆ | ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಆಯ್ಕೆ
ದಕ್ಷಿಣಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಭರ್ಜರಿ ಗೆಲುವು ಸಾಧಿಸಿದ್ದಾರೆ.;
ದಕ್ಷಿಣಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಿಶೋರ್ ಕುಮಾರ್ ಅವರು ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮತ್ತು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಕೋಟ ಶ್ರೀನಿವಾಸ್ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅ.21ರಂದು ಉಪಚುನಾವಣೆ ನಡೆದಿತ್ತು. ಗುರುವಾರ ಮತಎಣಿಕೆ ನಡೆದಿದೆ. ಈ ಮತಎಣಿಕೆಯಲ್ಲಿ ಬಿಜೆಪಿ 3,654 ಮತಗಳನ್ನು ಪಡೆದರೆ, ಕಾಂಗ್ರೆಸ್ 1,957 ಮತಗಳನ್ನು ಗಳಿಸಿದೆ. ಎಸ್‌ಡಿಪಿಐ 195 ಮತಗಳನ್ನು ಪಡೆದಿದೆ. ಕಿಶೋರ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಎಸ್‌ಡಿಪಿಐ ಅಭ್ಯರ್ಥಿ ಅನ್ವರ್ ಸಾದತ್ ಬಜತ್ತೂರು ಹಾಗೂ ಪಕ್ಷೇತರ ಅಭ್ಯರ್ಥಿ ದಿನಕರ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ ದಕ್ಷಿಣಕನ್ನಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದರು. ಅವರ ಅವಧಿ 2028ರ ಜನವರಿಯ ತನಕ ಇತ್ತು. ಆದರೆ ಅವರು ಜೂನ್ 24ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಉಪ ಚುನಾವಣೆ ನಡೆದಿದೆ. ವಿಧಾನ ಪರಿಷತ್ ಸದಸ್ಯರಾಗಿದ್ದರೂ ಸಹ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿ 2024ರ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಲೋಕಸಭಾ ಚುನಾವಣೆಯಲ್ಲಿ 7,32,234 ಮತಗಳನ್ನು ಪಡೆದ ಅವರು, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (4,73,059 ಮತ) ಅವರ ವಿರುದ್ಧ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು.
ಆ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.