ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ| ಸಂತ್ರಸ್ತೆ ಅಪಹರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆ; ಎಚ್.ಡಿ. ರೇವಣ್ಣಗೆ ಮತ್ತಷ್ಟು ಸಂಕಷ್ಟ
ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್‌ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಚುನಾಯಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹಾಗಾಗಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇನ್ನೂ ಕೆಲವು ದಿನ ಇರಬೇಕಾಗುತ್ತದೆ.;
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಹೊಳೆನರಸೀಪುರ ಶಾಸಕ ಹಾಗೂ ಪ್ರಜ್ವಲ್ ತಂದೆ ಹೆಚ್.ಡಿ.ರೇವಣ್ಣ ಹಾಗೂ ಎರಡನೇ ಆರೋಪಿ ಸತೀಶ್ ಬಾಬಣ್ಣ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಮತ್ತೆ ನಾಲ್ವರನ್ನು ಎಸ್‌ಐಟಿ ವಶಕ್ಕೆ ಪಡೆದಿದ್ದು, ರೇವಣ್ಣ ಅವರಿಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಆರೋಪಿ ರೇವಣ್ಣ ಸಹಾಯಕ ಹಾಗೂ ಅವರ ಪತ್ನಿ ಭವಾಣಿ ರೇವಣ್ಣ ಸಂಬಂಧಿ ಸತೀಶ್ ಬಾಬಣ್ಣ ನೀಡಿದ ಹೇಳಿಕೆ ಆಧರಿಸಿ ನಾಲ್ವರನ್ನು ಬಂಧಿಸಿದೆ. ನಾಲ್ವರು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಸಂಬಂಧ ತನಿಖರ ನಡೆಯುತ್ತಿದೆ. ಇದುವರೆಗೆ ರೇವಣ್ಣ ಮತ್ತು ಅವರ ಸಂಬಂಧಿ ಸತೀಶ್ ಬಾಬಣ್ಣ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಎಚ್‌ಕೆ ಸುಜಯ್, ಮಧು, ತಿಮ್ಮಪ್ಪ ಮತ್ತು ಮನು ಎಂದು ಗುರುತಿಸಲಾಗಿದೆ.
ವಿಡಿಯೋ ಬಹಿರಂಗ ಮಾಡಿದವರಾರು?
ಈ ನಡುವೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹಾಗೂ ಪ್ರಜ್ವಲ್ ರೇವಣ್ಣ ಅವರ ಮಾಜಿ ಚಾಲಕ ಕಾರ್ತಿಕ್‌ಗೆ ಎಸ್‌ಐಟಿ ಎರಡನೇ ಬಾರಿ ನೋಟಿಸ್ ನೀಡಿದೆ. ಇದೀಗ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಎಸ್‌ಐಟಿ ನೋಟೀಸ್ ನೀಡಿರುವುದರಿಂದ ರೇವಣ್ಣ ಅವರಿಗೆ ಈ ಪ್ರಕರಣ ಮತ್ತಷ್ಟು ಉರುಲಾಗುತ್ತಿದೆ.
ದೇವರಾಜೇಗೌಡ ಅವರು ಇತ್ತೀಚೆಗೆ ಪತ್ರಿಕಾಗೋ಼ಷ್ಠಿ ಮಾಡಿ ಪ್ರಕರಣದಲ್ಲಿ ಪೆನ್‌ಡ್ರೈವ್ ಗಳನ್ನು ಬಹಿರಂಗಗೊಳಿಸುವ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿ ತಮ್ಮ ಬಳಿ ಈ ಬಗ್ಗೆ ದಾಖಲೆಗಳಿವೆ ಎಂದು ಹೇಳಿಕೊಂಡಿರುವುದನ್ನು ಸ್ಮರಿಸಬಹುದು.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ಒಂಬತ್ತು ಸಂತ್ರಸ್ತೆಯರ ಪೈಕಿ ಇಬ್ಬರು ಎಸ್‌ಐಟಿಗೆ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಒಂಬತ್ತು ಸಂತ್ರಸ್ತರ ಪೈಕಿ ಆರು ಮಂದಿ ಸಂತ್ರಸ್ತರು ಎಸ್‌ಐಟಿಗೆ ಹೇಳಿಕೆ ನೀಡಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಬಹಿರಂಗಗೊಳಿಸಿರುವ ಶಂಕೆಯಿಂದ ಕಾರ್ತಿಕ್ ಜೊತೆಗೆ ಪುಟ್ಟಸ್ವಾಮಿ ಅಲಿಯಾಸ್ ಪುಟ್ಟಿ, ನವೀನ್ ಗೌಡ ಮತ್ತು ಚೇತನ್ ಬಂಧನವಾಗುವ ಸಾಧ್ಯತೆ ಹೆಚ್ಚಿದೆ. ಕಾರ್ತಿಕ್ ಪ್ರಜ್ವಲ್ ಫೋನ್‌ನಿಂದ ಬ್ಲೂಟೂತ್ ಮೂಲಕ ವೀಡಿಯೊಗಳನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಾಮೀನು ಅರ್ಜಿ ಮುಂದೂಡಿದ ನ್ಯಾಯಾಲಯ
ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್‌ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಚುನಾಯಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹಾಗಾಗಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇನ್ನೂ ಕೆಲವು ದಿನ ಇರಬೇಕಾಗುತ್ತದೆ.