ವಾಲ್ಮೀಕಿ ನಿಗಮ ಹಗರಣ | ಸಿಬಿಐ ತನಿಖೆ ಕೋರಿಕೆ: ವಿಚಾರಣೆ ಮುಂದೂಡಿಕೆ
'ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.;
'ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
'ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು' ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ʼರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ(ವಿಶೇಷ ತನಿಖಾ ದಳ) ತನಿಖೆ ನಡೆಸುವ ವ್ಯಾಪ್ತಿ ಹೊಂದಿಲ್ಲ' ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಹೈಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಪ್ರತಿಪಾದಿಸಿದರು.
'ಬ್ಯಾಂಕ್‌ನಲ್ಲಿ 50 ರೂ. ಕೋಟಿಗಿಂತಲೂ ಹೆಚ್ಚಿನ ಮೊತ್ತದ ಅವ್ಯವಹಾರ ನಡೆದಿದೆ. ಇಂತಹ ಪ್ರಕರಣವನ್ನು ಸಿಬಿಐ ವಿಚಾರಣೆಗೆ ಒಳಪಡಿಸಲು ಅವಕಾಶವಿದೆ. ಹಗರಣದಲ್ಲಿ ಭಾಗಿಯಾಗಿರುವ ಬ್ಯಾಂಕ್ ಅಧಿಕಾರಿಗಳಲ್ಲದೇ ಇತರರ ವಿರುದ್ಧವೂ ತನಿಖೆ ನಡೆಸಬಹುದಾಗಿದೆ. ರಾಜ್ಯ ಸರ್ಕಾರ ತನಿಖೆಗಾಗಿ ಎಸ್‌ಐಟಿ ರಚಿಸಿದೆಯಾದರೂ, ಎಸ್‌ಐಟಿ ತನಿಖಾ ವ್ಯಾಪ್ತಿ ಹೊಂದಿಲ್ಲ. ಅಷ್ಟಕ್ಕೂ, ದಾಖಲೆ ಪರಿಶೀಲಿಸಿದ ಬಳಿಕ ಸಿಬಿಐಗೆ ಒಪ್ಪಿಗೆಯಾದರೆ ಎಸ್‌ಐಟಿ ತನಿಖೆಗೆ ಸಲಹೆ ನೀಡಬಹುದು' ಎಂದರು.
ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, 'ಆರೋಪಿತ ದೂರುದಾರರು (ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ತಮಗೆ ಹೊಂದುವ ತನಿಖಾ ಸಂಸ್ಥೆಯನ್ನು ಆಯ್ದುಕೊಳ್ಳಲು ಆಗದು. ಪೊಲೀಸ್, ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬ್ಯಾಂಕ್ ಮತ್ತು ಆರ್‌ಬಿಐ ಏನು ಮಾಡಬೇಕೆಂದಿದೆಯೋ ಅದನ್ನು ಮಾಡಲಿ. ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸದೇ ಮೌನವಹಿಸುವಂತೆ ಹೇಳಲಾಗದು. ಇದು ಸಾಂವಿಧಾನಿಕ ಪ್ರಶ್ನೆಯಾಗಿದ್ದು, ಇದಕ್ಕೆ ನ್ಯಾಯಾಲಯ ಉತ್ತರಿಸಬೇಕಿದೆ. ಸದ್ಯಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು' ಎಂದು ಮನವಿ ಮಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಪರ ಹಾಜರಾಗಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್ ಅವರೂ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.