ವಾಲ್ಮೀಕಿ ನಿಗಮ ಹಗರಣ| ಯೂನಿಯನ್ ಬ್ಯಾಕ್ ಅಧಿಕಾರಿಗಳೇ ನೇರ ಭಾಗಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಉತ್ತರ
ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೊ ಅಥವಾ ಖಾಸಗಿ ಬ್ಯಾಂಕೊ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತಾರೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ ಜವಾಬ್ಧಾರಿಯನ್ನು ಹೊರುತ್ತಾರೆಯೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.;
ಮಹರ್ಷಿ ವಾಲ್ಮೀಕಿ ನಿಗಮದ ಕೋಟ್ಯಾಂತರ ರೂ ಅಕ್ರಮ ಪ್ರಕರಣದಲ್ಲಿ ಬ್ಯಾಂಕಿನ ಸಿಬ್ಬಂದಿಗಳೇ ನೇರವಾಗಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈ ಬಗ್ಗೆ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಗರಣ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಲಿಖಿತ ರೂಪದಲ್ಲಿ ಅವರು ಉತ್ತರವನ್ನು ನೀಡಿದ್ದಾರೆ.
ವಿರೋಧ ಪಕ್ಷದವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲಿಸಿದ ಬಳಿಕ ಎಸ್ ಐಟಿ ರಚಿಸಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆದರೆ ಜೂನ್ 3 ರಂದು ಎಂ.ಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಗಿರೀಶ್ ಚಂದ್ರ ಜೋಶಿ ಎಂ.ಜಿ ರಸ್ತೆ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸುಚಿಸ್ಮಿತಾ ರಾವುಲ್, ಚೀಫ್ ಮ್ಯಾನೇಜರ್ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಪತ್ರ ಬರೆದಿದ್ದರು. ಮೇ 28ರಂದು ಈ ಪ್ರಕರಣದ ಕುರಿತಂತೆ ಎಫ್ ಐ ಆರ್ ದಾಖಲಿಸಿ, ,ಮೇ 31ರಂದು ರಾಜ್ಯ ಸರ್ಕಾರ ತನಿಖೆಗೆ ಎಸ್ ಐಟಿ ರಚಿಸಿದೆ ಎಂದು ಅವರು ಉತ್ತರಿಸಿದ್ದಾರೆ.
ಬ್ಯಾಂಕಿನವರೆ ಸಿಬಿಐಗೆ ನೀಡಿರುವ ದೂರಿನಲ್ಲಿ ಒಪ್ಪಿಕೊಂಡಿರುವ ಹಾಗೆ ಎಂಜಿ ರಸ್ತೆಯ ಬ್ರಾಂಚಿನ ಅಧಿಕಾರಿಗಳು ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕಿನ ಅಧಿಕಾರಿಗಳು ಶಿವಕುಮಾರ ಎಂಬ ಅಕ್ರಮ ವ್ಯಕ್ತಿ (ಇದುವರೆಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಹೈದರಾಬಾದಿನ ಸಾಯಿತೇಜ ಎಂಬ ವ್ಯಕ್ತಿಯನ್ನು ಶಿವಕುಮಾರ ಎಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ) ಯ ವಿವರಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮವಾಗಿ ಹಣ ವರ್ಗಾಯಿಸಲು ನೆರವಾಗಿದ್ದಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಬ್ಯಾಂಕಿನವರೆ ಹೇಳಿದ್ದಾರೆ. ಈ ಅಕ್ರಮ ವ್ಯಕ್ತಿಗೆ ಚೆಕ್ ಬುಕ್ಕನ್ನು ಕೊಟ್ಟಿದ್ದು ಯಾಕೆ? ಆ ಚೆಕ್ಕುಗಳನ್ನು ಆಧರಿಸಿ NEFT ,RTGS ಮಾಡಲು ಅವಕಾಶಕೊಟ್ಟಿದ್ದು ಏಕೆ? ಎಂಜಿ ರಸ್ತೆಯ ಶಾಖೆಯ ಮುಖ್ಯಸ್ಥರು/ ಉಪ ಮುಖ್ಯಸ್ಥರು ಚೆಕ್ಕುಗಳನ್ನು ಸರಿಯಾಗಿ ಪರಿಶೀಲಿಸದೆ ಅಕ್ರಮ ಎಸಗಿದ್ದಾರೆ ಎಂದು ಬ್ಯಾಂಕಿನವರೆ ಹೇಳಿದ್ದಾರೆ. ಇದನ್ನೆಲ್ಲ ಆಧರಿಸಿಯೆ ಬ್ಯಾಂಕಿನ ಮೇಲಧಿಕಾರಿಗಳು ಸಿಬಿಐಗೆ ಬರೆದ ದೂರಿನಲ್ಲಿ ತಮ್ಮ ಸಿಬ್ಬಂದಿಯ / ಅಧಿಕಾರಿಗಳ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ವಿರೋಧ ಪಕ್ಷದವರಿಗೆ ನಾನು ಕೇಳಬಯಸುವುದೇನೆಂದರೆ, ಯೂನಿಯನ್ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೊ ಅಥವಾ ಖಾಸಗಿ ಬ್ಯಾಂಕೊ? ರಾಷ್ಟ್ರೀಕೃತ ಬ್ಯಾಂಕು ಹೌದಾದರೆ ಕೇಂದ್ರದ ಯಾವ ಇಲಾಖೆಯ ಕೆಳಗೆ ಬರುತ್ತಾರೆ? ಹಣಕಾಸು ಇಲಾಖೆಯ ಕೆಳಗೆ ತಾನೆ? ಹಣಕಾಸು ಇಲಾಖೆ ಯಾರ ಅಧೀನದಲ್ಲಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಗರಣದ ಜವಾಬ್ಧಾರಿಯನ್ನು ಹೊರುತ್ತಾರೆಯೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ
ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು. ಸರ್ಕಾರ ಪರಿಶಿಷ್ಟ ಜಾತಿ/ ಪಂಗಡಗಳ ವಿರುದ್ಧ ಎಂದು ಬಿಂಬಿಸುವುದು ಇದು ಬಿ.ಜೆ.ಪಿ. ಯವರ ಹುನ್ನಾರ. ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ. ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳೆ. ಇದೇ ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೇನೆಲ್ಲ ನುಂಗಿದ್ದಾರೆ ಎಂದು ಕೂಡ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಇಲ್ಲಿ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾನು ಪದೆ ಪದೆ ಈ ಸದನಕ್ಕೂ ನಾಡಿನ ಜನರಿಗೂ ಭರವಸೆ ನೀಡಬಯಸುತ್ತೇನೆ. ನಾವು ಪರಿಶಿಷ್ಟ ಜಾತಿ, ಪಂಗಡ, ದಮನಿತ ಸಮುದಾಯದವರಿಗೆ ಒದಗಿಸಿದ ಪ್ರತಿ ಪೈಸೆಯನ್ನೂ ಖರ್ಚು ಮಾಡುತ್ತೇವೆ ಮತ್ತು ಗುಣಾತ್ಮಕವಾಗಿ ವಿನಿಯೋಗಿಸುತ್ತೇವೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಳ್ಳರು ಯಾರೇ ಇದ್ದರೂ ಅವರನ್ನು ನಿರ್ಧಾಕ್ಷಿಣ್ಯವಾಗಿ ಶಿಕ್ಷಿಸುತ್ತೇವೆ. ಬಿ.ಜೆ.ಪಿ. ಅವಧಿಯ ಎಲ್ಲ ಹಗರಣಗಳನ್ನೂ ತನಿಖೆಗೆ ಒಪ್ಪಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ
ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಗರಣ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತ ರೂಪದಲ್ಲಿ ನೀಡಿರುವ ಉತ್ತರವನ್ನು ಇಲ್ಲಿ ಓದಿ