ಶಿರಾಡಿ ಭೂಕುಸಿತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಕಾರಣ: ತಜ್ಞರು
ಅತಿಯಾದ ಮಳೆಯಿಂದಾಗಿ ಭೂಮಿಯ ಪದರಗಳ ಒಳಗೆ ನೀರು ಸೇರಿಕೊಂಡು ಭೂಕುಸಿತ ಆಗುತ್ತಿದೆ. ಹಾಗೆಯೇ ರಸ್ತೆ ಅಗಲೀಕರಣಕ್ಕಾಗಿ ಅವೈಜ್ಞಾನಿಕವಾಗಿ ಯಂತ್ರಗಳಿಂದ ಗುಡ್ಡಗಳನ್ನು ಕತ್ತರಿಸುತ್ತಿರುವುದು ಭೂಕುಸಿತಕ್ಕೆ ಮೇಲ್ನೋಟದ ಕಾರಣಗಳಾಗಿವೆ ಎಂದು ತಂಡ ಅಭಿಪ್ರಾಯ ಪಟ್ಟಿದೆ.;
ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ದೊಡ್ಡತಪ್ಪಲೆ ಯಲ್ಲಿ ಪದೇಪದೆ ಭೂಕುಸಿತ ಉಂಟಾಗುತ್ತಿದ್ದು, ಈ ಪ್ರದೇಶಗಳಿಗೆ ಭೂಗರ್ಭ ಶಾಸ್ತ್ರಜ್ಞರ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಅವರು ಅಲ್ಲಿನ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಕೊಂಡೊಯ್ಯದಿದ್ದಾರೆ.
ಅತಿಯಾದ ಮಳೆಯಿಂದಾಗಿ ಭೂಮಿಯ ಪದರಗಳ ಒಳಗೆ ನೀರು ಸೇರಿ ಕೊಂಡು ಭೂಕುಸಿತ ಆಗುತ್ತಿದೆ. ಹಾಗೆಯೇ ರಸ್ತೆ ಅಗಲೀಕರಣಕ್ಕಾಗಿ ಬೃಹತ್ ಯಂತ್ರಗಳನ್ನು ಬಳಸಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸುತ್ತಿರುವುದು ಭೂಕುಸಿತಕ್ಕೆ ಮೇಲ್ನೋಟದ ಕಾರಣಗಳಾಗಿವೆ ಎಂದು ತಂಡ ಅಭಿಪ್ರಾಯಪಟ್ಟಿದೆ.
ಸಕಲೇಶಪುರ ತಾಲೂಕಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 750 ಶಿರಾಡಿ ಘಾಟ್‌ನಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸಿದೆ. ಹೆದ್ದಾರಿ 75ರ ದೋಣಿಗಾಲ್ ಗ್ರಾಮದಿಂದ ಮಾರನಹಳ್ಳಿ ಗ್ರಾಮದವರೆಗೆ ಗುರುವಾರ ರಾತ್ರಿ ಮತ್ತಷ್ಟು ಭೂಕುಸಿತ ಸಂಭವಿಸಿದೆ. ಇದರಿಂದಾಗಿ, ಮಂಗಳೂರು-ಬೆಂಗಳೂರು ನಡುವಿನ ಸಂಚಾರ ಬಂದ್ ಆಗಿತ್ತು. ಬಳಿಕ, ಮಣ್ಣು ತೆರವುಗೊಳಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಸಕಲೇಶಪುರ-ಮಾರನಹಳ್ಳಿ ಮಾರ್ಗಮಧ್ಯೆ ದೊಡ್ಡತಪ್ಪಲೆ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ಪ್ಲೈವುಡ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬುಧವಾರ ಪಲ್ಟಿಯಾಗಿತ್ತು. ಭಾರಿ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದರಿಂದ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.