Namma Metro Fare Hike | ಅವೈಜ್ಞಾನಿಕ ದರ ಪರಿಷ್ಕರಣೆ; ಮೆಟ್ರೋದಿಂದ ಜನ ದೂರ!

ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕೆಲ ಸ್ಟೇಜ್‌ಗಳಲ್ಲಿ ಶೇ 100 ರಷ್ಟು ಏರಿಕೆಯಾಗಿರುವ ದರವನ್ನು ಕೊಂಚ ಇಳಿಸಿದ್ದರು. ಆದರೆ, ದರ ಪರಿಷ್ಕರಣೆಯೇ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.;

Update: 2025-02-17 10:55 GMT
ನಮ್ಮ ಮೆಟ್ರೋ ರೈಲು

ʼನಮ್ಮ ಮೆಟ್ರೋʼ ದರ ಏರಿಕೆ ಕುರಿತು ಪ್ರಯಾಣಿಕರಲ್ಲಿ ಮಡುಗಟ್ಟಿದ್ದ ಆಕ್ರೋಶ ತಣಿಸಲು ಬಿಎಂಆರ್‌ಸಿಎಲ್‌ ದರ ಪರಿಷ್ಕರಿಸಿದ ಬಳಿಕವೂ ಮೆಟ್ರೋ ಪ್ರಯಾಣದೆಡೆಗಿನ ಅಸಹನೆ ಮುಂದುವರಿದಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳ ಕಣ್ಣೊರೆಸುವ ತಂತ್ರಕ್ಕೆ ತಿರುಗೇಟು ನೀಡುತ್ತಿರುವ ಪ್ರಯಾಣಿಕರು ಮೆಟ್ರೋ ಪ್ರಯಾಣವನ್ನೇ ಮೊಟಕುಗೊಳಿಸುತ್ತಿದ್ದಾರೆ.

ಫೆ.9 ರಂದು ಬಿಎಂಆರ್‌ಸಿಲ್‌ ಅಧಿಕಾರಿಗಳು ಶೇ 70 ರಿಂದ 100ರಷ್ಟು ಮೆಟ್ರೋ ಪ್ರಯಾಣ ದರ ಏರಿಸಿದ್ದರಿಂದ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಷಯ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಸಾರ್ವಜನಿಕರ ವಿರೋಧ, ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಬಹಿಷ್ಕಾರ ಅಭಿಯಾನದಿಂದ ಎಚ್ಚೆತ್ತುಕೊಂಡ ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಕೆಲ ಸ್ಟೇಜ್‌ಗಳಲ್ಲಿ ಶೇಕಡಾ 100ರಷ್ಟು ಏರಿಕೆಯಾಗಿರುವ ದರವನ್ನು ಕೊಂಚ ಇಳಿಸಿತ್ತು. ಆದರೆ, ದರ ಪರಿಷ್ಕರಣೆಯೂ ಅವೈಜ್ಞಾನಿಕವಾಗಿದೆ ಎಂಬುದು ಪ್ರಯಾಣಿಕರ ಆರೋಪವಾಗಿದೆ. 

ಕಾಟಾಚಾರದ ದರ ಪರಿಷ್ಕರಣೆ

ʼನಮ್ಮ ಮೆಟ್ರೋʼ ಪ್ರಯಾಣ ದರವನ್ನು ಶೇಕಡ 46 ರಿಂದ 47 ರಷ್ಟು ಏರಿಕೆ ಮಾಡಲಾಗುತ್ತಿದೆ ಎಂದು ಹೇಳುತ್ತಲೇ ಶೇ 100ರಷ್ಟು ದರ ಏರಿಸಿದ್ದ ಬಿಎಂಆರ್‌ಸಿಎಲ್‌ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ರಾಜಕೀಯ ಮೇಲಾಟದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪ್ರಯಾಣ ದರ ಇಳಿಸುವಂತೆ ಸೂಚಿಸಿದ ಮೇಲೆ ಬಿಎಂಆರ್‌ಸಿಎಲ್‌ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಅದರಂತೆ ಕೆಲ ಸ್ಟೇಜ್‌ಗಳಲ್ಲಿ ಶೇ 10ರಷ್ಟು ದರ ಇಳಿಸಿ ಕೈ ತೊಳೆದುಕೊಂಡಿದೆ. ವಿಪರ್ಯಾಸವೆಂದರೆ ಅತಿ ಹೆಚ್ಚು ಜನರು ಪ್ರಯಾಣಿಸುವ ಕೊನೆಯ ಮೈಲಿನ ನಿಲ್ದಾಣಗಳಲ್ಲಿ ದರ ಏರಿಕೆ ಇಳಿಕೆಯಾಗಿಲ್ಲ. ಹಾಗಾಗಿ ಪ್ರಯಾಣಿಕರು ಮೆಟ್ರೋ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ.

ಪರಿಷ್ಕರಣೆಯಾಗದ ಶೇ 100ರಷ್ಟು ದರ ಏರಿಕೆ

ಮಾದಾವರ, ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿಯಿಂದ ರೇಷ್ಮೆ ಸಂಸ್ಥೆಯವರೆಗೆ ಈ ಮೊದಲು 60 ರೂ. ದರವಿತ್ತು. ಈಗ 90 ರೂ. ಆಗಿದೆ. ಪೀಣ್ಯ ಇಂಡಸ್ಟ್ರಿ, ಯಶವಂತಪುರ, ಸ್ಯಾಂಡಲ್ ಸೋಪ್‌ ಫ್ಯಾಕ್ಟರಿಯಿಂದ ರೇಷ್ಮೆ ಸಂಸ್ಥೆವರೆಗೆ 50ರೂ.ಗಳಿಂದ 80 ರೂ.ಗೆ ಏರಿಕೆಯಾಗಿದೆ. ಈ ಯಾವ ದರಗಳು ಪರಿಷ್ಕರಣೆಯಾಗಿಲ್ಲ ಎಂಬುದು ಪ್ರಯಾಣಿಕರ ಆರೋಪ. 

ಈ ಹಿಂದೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಯಿಂದ ಜಯನಗರಕ್ಕೆ 33 ರೂ. ಇತ್ತು. ದರ ಏರಿಕೆಯ ಬಳಿಕ 60 ರೂ. ಆಗಿದೆ. ಯಶವಂತಪುರದಿಂದ ಯಲಚೇನಹಳ್ಳಿಗೆ 42.75 ರೂ. ಇತ್ತು. ದರ ಏರಿಕೆ ಆದ ಮೇಲೆ 70 ರೂ. ಆಗಿದೆ. ಕೋಣನಕುಂಟೆ ಕ್ರಾಸ್‌ನಿಂದ ಆರ್‌ವಿ ರಸ್ತೆಗೆ 20 ರೂ. ಇತ್ತು. ಈಗ 40 ರೂ. ಆಗಿದೆ. ಈ ಸ್ಟೇಜ್‌ಗಳಲ್ಲಿ ಶೇ 100 ರಷ್ಟು ದರ ಏರಿಕೆಯಾಗಿದೆ.  ವಾಜರಹಳ್ಳಿಯಿಂದ ನ್ಯಾಷನಲ್ ಕಾಲೇಜಿಗೆ ಈ ಹಿಂದೆ 28.5 ರೂ. ಇತ್ತು. ದರ ಏರಿಕೆಯ ನಂತರ 50 ರೂ. ಆಗಿದೆ. ಮೈಸೂರು ರಸ್ತೆಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣದವರೆಗೆ ಈ ಹಿಂದೆ 23 ರೂ. ಇತ್ತು. ಏರಿಕೆಯ ಬಳಿಕ 40 ರೂ. ಆಗಿದೆ. ಇಲ್ಲೂ ಕೂಡ ಯಾವುದೇ ದರ ಪರಿಷ್ಕರಣೆ ಆಗಿಲ್ಲ. 

ಕೆಂಪೇಗೌಡ ನಿಲ್ದಾಣದಿಂದ ಮಾದಾವರ ನಿಲ್ದಾಣದವರೆಗೆ ಈ ಹಿಂದೆ 40 ರೂ. ಇತ್ತು. ಈಗ 70 ರೂ.ಗೆ ಏರಿಕೆಯಾಗಿದೆ. ಈ ಹಂತದ ಸ್ಟೇಜ್‌ಗಳಲ್ಲಿ ದರ ಪರಿಷ್ಕರಣೆ ಮಾಡದೇ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ ಎಂದು ಮೆಟ್ರೋ ಪ್ರಯಾಣಿಕರು ಆರೋಪಿಸಿದ್ದಾರೆ.  

ದರ ಏರಿಕೆಯ ಮೊದಲು ಕೋಣನಕುಂಟೆ ಕ್ರಾಸ್‌ನಿಂದ ನ್ಯಾಷನಲ್ ಕಾಲೇಜಿಗೆ 20 ರೂ. ಪ್ರಯಾಣ ದರವಿತ್ತು. ದರ ಏರಿಕೆಯ ಬಳಿಕ 40 ರೂ. ಆಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಬಸ್ ಟರ್ಮಿನಲ್‌ವರೆಗೆ 35 ರೂ. ಇತ್ತು. ದರ ಏರಿಕೆಯ ನಂತರ 60 ರೂ. ಆಗಿದ್ದು, ಯಾವುದೇ ದರ ಪರಿಷ್ಕರಣೆ ಮಾಡಿಲ್ಲ.  

ಕೆಲ ಸೀಮಿತ ಸ್ಟೇಜ್‌ಗಳಲ್ಲಿ ಶೇ 90 ರಿಂದ 100 ರಷ್ಟು ಹೆಚ್ಚಳವಾಗಿದ್ದ ದರವನ್ನು ಶೇ 10 ರಷ್ಟು ಕಡಿಮೆ ಮಾಡಲಾಗಿದೆ. ಆದರೆ, ಬಹಳಷ್ಟು ಸ್ಟೇಜ್‌ಗಳಲ್ಲಿ ಶೇ 100 ರಷ್ಟು ದರ ಏರಿಕೆ ಹಾಗೆಯೇ ಇದೆ. 

ತಗ್ಗುತ್ತಿರುವ ಪ್ರಯಾಣಿಕರ ಸಂಖ್ಯೆ

ಪ್ರಯಾಣ ದರ ಹೆಚ್ಚಳಗೊಂಡು ವಾರವಾದರೂ ವೈಜ್ಞಾನಿಕವಾಗಿ ದರ ಪರಿಷ್ಕರಿಸದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕಳೆದ ಶನಿವಾರ ಅತಿ ಕಡಿಮೆ ಜನರು(6.90 ಲಕ್ಷ) ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದರ ಏರಿಕೆಗೂ ಮುನ್ನ ಮೆಟ್ರೋದಲ್ಲಿ ಪ್ರತಿ ದಿನ 8-9 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಬಿಎಂಆರ್‌ಸಿಎಲ್‌ ನ ಈ ಧೋರಣೆಯಿಂದ ಸಾಕಷ್ಟು ಜನರು ಮೆಟ್ರೊ ತೊರೆದು, ಬಸ್ ಇಲ್ಲವೇ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ನಾಗಸಂದ್ರದಿಂದ ಜಯನಗರಕ್ಕೆ 45 ರೂ. ನೀಡಿ ಪ್ರಯಾಣಿಸುತ್ತಿದ್ದೆ. ಈಗ ದರ ಏರಿಕೆಯಿಂದ 70 ರೂ.ಆಗಿದೆ. ಬಂದು ಹೋಗುವುದಕ್ಕೆ 140ರೂ. ಖರ್ಚಾಗುತ್ತದೆ. ಹಾಗಾಗಿ ಬಿಎಂಟಿಸಿ ಬಸ್‌ಗೆ ಹೋಗುತ್ತಿದೆ. ಇದಕ್ಕಾಗಿ ಕೇವಲ 80ರೂ. ಖರ್ಚಾಗುತ್ತಿದೆ ಎಂದು ನಾಗಸಂದ್ರ ನಿವಾಸಿ ನಾರಾಯಣಸ್ವಾಮಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸಮಯ ಉಳಿತಾಯ ಮಾಡುವ ಸಲುವಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಕೂಡ ಈಗ ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡಿದ್ದಾರೆ. ದುಬಾರಿ ದರ ಪಾವತಿಸಿ ಪ್ರಯಾಣಿಸುವ ಬದಲು ಉಚಿತವಾಗಿ ಗಮ್ಯ ಸ್ಥಾನ ಸೇರಲು ನಿರ್ಧರಿಸಿದ್ದಾರೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆ

ಮೆಟ್ರೋದಿಂದ ವಿಮುಖರಾಗುತ್ತಿರುವ ಬಹುತೇಕ ಪ್ರಯಾಣಿಕರು ಬಿಎಂಟಿಸಿ ಹಾಗೂ ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಇದರಿಂದ ನಗರದಲ್ಲಿ ಮತ್ತೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಬೆಳಗ್ಗೆ 9 ರಿಂದ 12ರವರೆಗೆ ದಟ್ಟಣೆ ವಿಪರೀತವಾಗಿದೆ. ಅದೂ ಕೂಡ ಮೆಟ್ರೋ ಮಾರ್ಗವಿರುವ ರಸ್ತೆಗಳಲ್ಲೇ ವಾಹನ ದಟ್ಟಣೆ ಹೆಚ್ಚುತ್ತಿರುವುದು ಮೆಟ್ರೋ ಸಾರಿಗೆಯನ್ನು ಜನ ತಿರಸ್ಕರಿಸಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. 

ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್‌ ಜಾಗದಲ್ಲಿ ಬೈಕ್‌ಗಳ ಸಂಖ್ಯೆ ಹೆಚ್ಚಿರುತ್ತಿತ್ತು. ದರ ಏರಿಕೆಯ ಬಳಿಕ ವಾಹನಗಳ ನಿಲುಗಡೆ ಸಂಖ್ಯೆಯೂ ಕಡಿಮೆಯಾಗಿರುವುದು ಕಂಡು ಬಂದಿದೆ.

Tags:    

Similar News