ಕೃಷ್ಣಾ ಮೇಲ್ದಂಡೆ ಯೋಜನೆ: ರಾಷ್ಟ್ರೀಯ ಮಾನ್ಯತೆಗಾಗಿ ದಶಕಗಳ ಹೋರಾಟ, ಕೇಂದ್ರದ ಮೌನ

ಸೆಪ್ಟೆಂಬರ್ 16ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project-3)ಯ ಮೂರನೇ ಹಂತದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ.;

Update: 2025-09-14 02:30 GMT
Click the Play button to listen to article

ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆಯು (ಯುಕೆಪಿ) ಇದೀಗ ಮೂರನೇ ಹಂತ ತಲುಪಿದೆ. ಆರು ದಶಕಗಳ ಹಿಂದೆ ಆರಂಭವಾದ ಈ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಬೇಕೆಂಬ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರವು ಈವರೆಗೂ ಸ್ಪಂದಿಸಿಲ್ಲ ಎಂಬುದೇ ವಿಪರ್ಯಾಸ.

ರಾಜ್ಯ ಸರ್ಕಾರ, ರೈತ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಈ ಬಗ್ಗೆ ಕೇಂದ್ರವು ಮೌನ ವಹಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತರೆ, ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅಗತ್ಯವಾದ ಅನುದಾನವು ಕೇಂದ್ರದಿಂದ ಲಭ್ಯವಾಗುತ್ತದೆ. ಇದು ಲಕ್ಷಾಂತರ ಎಕರೆ ಜಮೀನಿಗೆ ನೀರುಣಿಸುವುದಲ್ಲದೆ, ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ. ಅಲ್ಲದೆ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಬೆಳವಣಿಗೆ ಮತ್ತು ಈ ಪ್ರದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ.

ಇತ್ತೀಚೆಗೆ, ಮಧ್ಯ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿ, ಕೇಂದ್ರ ಸರ್ಕಾರವು ₹5,300 ಕೋಟಿ ಅನುದಾನ ಘೋಷಿಸಿರುವುದು ಗಮನಾರ್ಹ. ಆದರೆ, ಈ ಅನುದಾನವು ಇನ್ನೂ ರಾಜ್ಯಕ್ಕೆ ತಲುಪಿಲ್ಲ, ಇದು ಕೂಡ ಕೇಂದ್ರದ ನಡೆಯ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಯೋಜನೆಗೆ ಮಾನ್ಯತೆ ನೀಡಿ, ಮತ್ತೊಂದು ಪ್ರಮುಖ ಯೋಜನೆಗೆ ನಿರ್ಲಕ್ಷ್ಯ ತೋರುತ್ತಿರುವುದು ಉತ್ತರ ಕರ್ನಾಟಕದ ಜನರಲ್ಲಿ ತಾರತಮ್ಯದ ಭಾವನೆಯನ್ನು ಮೂಡಿಸಿದೆ. ರಾಷ್ಟ್ರೀಯ ಮಾನ್ಯತೆ ಇಲ್ಲದ ಕಾರಣ, ರಾಜ್ಯ ಸರ್ಕಾರವೇ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ಯೋಜನೆಯನ್ನು ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಸರ್ಕಾರದಿಂದ ಮೂರನೇ ಹಂತಕ್ಕೆ ದರ ನಿಗದಿ? 

ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರುಗಳಿಗೆ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಅನುಷ್ಠಾನಕ್ಕೆ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯ ಪ್ರಮುಖ ಭಾಗವಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಏಕರೂಪದ ದರ ನಿಗದಿಪಡಿಸುವ ಮಹತ್ವದ ತೀರ್ಮಾನ ಕೈಗೊಳ್ಳಲು, ಸೆಪ್ಟೆಂಬರ್ 16ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.

ರಾಜ್ಯದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ, ಅಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಆಧರಿಸಿ, ಮಳೆ-ಆಶ್ರಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಮೂರನೇ ಹಂತದಲ್ಲಿ, ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 130 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ.

ಈ ಯೋಜನೆಗೆ ಒಟ್ಟು 1,33,867 ಎಕರೆ ಜಮೀನಿನ ಅಗತ್ಯವಿದ್ದು, ಇದರಲ್ಲಿ 75,563 ಎಕರೆ ಪ್ರದೇಶವು ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಈ ಹಿಂದೆ ಎರಡು ಹಂತಗಳಲ್ಲಿ ಭೂಸ್ವಾಧೀನ ನಡೆಸಲು ಯೋಜಿಸಲಾಗಿತ್ತು. ಆದರೆ, ವಿಳಂಬವನ್ನು ತಪ್ಪಿಸಲು, ಒಂದೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರ ಮತ್ತು ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಯೋಜನೆಯ ಆರಂಭಿಕ ಅಂದಾಜು ವೆಚ್ಚ 51,148 ಕೋಟಿ ರೂಪಾಯಿಗಳು. ಆದರೆ, ಪ್ರಸ್ತುತ ಇದು 87,818 ಕೋಟಿ ರೂಪಾಯಿಗೆ ಪರಿಷ್ಕರಣೆಗೊಂಡಿದೆ. ಇದರಲ್ಲಿ, ಭೂಸ್ವಾಧೀನ ಪ್ರಕ್ರಿಯೆಗೆಂದೇ 40,557 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಅಂದಾಜಿಸಲಾಗಿದೆ. ಸೆಪ್ಟೆಂಬರ್ 16ರ ಸಚಿವ ಸಂಪುಟ ಸಭೆಯಲ್ಲಿ ಭೂಮಿಗೆ ನಿಗದಿಪಡಿಸಬೇಕಾದ ದರದ ಬಗ್ಗೆ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದ್ದು, ಇದು ಯೋಜನೆಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ: ದಶಕಗಳ ಇತಿಹಾಸ

ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ (ಯುಕೆಪಿ) 1964ರ ಮೇ 22ರಂದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಡಿಪಾಯ ಹಾಕಿದರು. ಸುಮಾರು 20 ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು, ಕುಡಿಯುವ ನೀರು ಪೂರೈಸುವುದು, ಕೈಗಾರಿಕೆಗಳಿಗೆ ನೀರು ಒದಗಿಸುವುದು ಮತ್ತು ಜಲವಿದ್ಯುತ್ ಉತ್ಪಾದನೆ ಮಾಡುವುದು ಈ ಬೃಹತ್ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಈ ಯೋಜನೆಯು ಪೂರ್ಣಗೊಂಡರೆ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೃಷಿ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.

ಆದರೆ, ಯೋಜನೆಯ ಆರಂಭದಿಂದಲೂ ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ (ಈಗಿನ ತೆಲಂಗಾಣ ಸೇರಿದಂತೆ) ರಾಜ್ಯಗಳೊಂದಿಗೆ ವಿವಾದಗಳು ಸೃಷ್ಟಿಯಾದವು. ಈ ಅಂತರರಾಜ್ಯ ಜಲ ವಿವಾದವನ್ನು ಬಗೆಹರಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು 1969ರಲ್ಲಿ ನ್ಯಾಯಮೂರ್ತಿ ಆರ್.ಎಸ್. ಬಾಚಾವತ್ ಅವರ ನೇತೃತ್ವದಲ್ಲಿ 'ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ'ಯನ್ನು ರಚಿಸಿತು. ಈ ನ್ಯಾಯಮಂಡಳಿಯು ವಿವಿಧ ಹಂತಗಳಲ್ಲಿ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ, ಮತ್ತು ಅದರ ಆಧಾರದ ಮೇಲೆ ಯೋಜನೆಯು ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. 

ನ್ಯಾಯ ಮಂಡಳಿಯ ತೀರ್ಪು ಏನು? 

ಕೃಷ್ಣಾ ನದಿ ನೀರು ಹಂಚಿಕೆಯ ವಿವಾದವನ್ನು ಬಗೆಹರಿಸಲು ರಚಿಸಲಾದ ಎರಡು ಪ್ರಮುಖ ನ್ಯಾಯಮಂಡಳಿಗಳು, ಕರ್ನಾಟಕದ ಪಾಲಿನ ನೀರಿನ ಹಕ್ಕನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. 1969ರಲ್ಲಿ ನ್ಯಾಯಮೂರ್ತಿ ಆರ್.ಎಸ್. ಬಾಚಾವತ್ ಅವರ ನೇತೃತ್ವದಲ್ಲಿ ರಚನೆಯಾದ ಮೊದಲ ನ್ಯಾಯಮಂಡಳಿಯು, 1973ರಲ್ಲಿ ತನ್ನ ಅಂತಿಮ ತೀರ್ಪನ್ನು ನೀಡಿತು. ಲಭ್ಯವಿದ್ದ 2,060 ಟಿಎಂಸಿ ನೀರನ್ನು ಮೂರು ರಾಜ್ಯಗಳ ನಡುವೆ ಹಂಚಿಕೆ ಮಾಡಿ, ಆಂಧ್ರಪ್ರದೇಶಕ್ಕೆ 811 ಟಿಎಂಸಿ, ಮಹಾರಾಷ್ಟ್ರಕ್ಕೆ 565 ಟಿಎಂಸಿ ಮತ್ತು ಕರ್ನಾಟಕಕ್ಕೆ 700 ಟಿಎಂಸಿ ನೀರನ್ನು ಹಂಚಿಕೆ ಮಾಡಿತು. ಈ ತೀರ್ಪು, ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಅಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನಿರ್ಮಾಣಕ್ಕೆ ಮತ್ತು ನೀರು ಬಳಕೆಗೆ ಕಾನೂನಾತ್ಮಕ ಬಲವನ್ನು ಒದಗಿಸಿತು.

ಆದರೆ, ನೀರು ಹಂಚಿಕೆಯ ವಿವಾದವು ಮುಂದುವರಿದ ಕಾರಣ, 2004ರಲ್ಲಿ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ನ್ಯಾಯಮಂಡಳಿಯನ್ನು ರಚಿಸಲಾಯಿತು. ಈ ನ್ಯಾಯಮಂಡಳಿಯು 2010ರಲ್ಲಿ ತನ್ನ ವರದಿಯನ್ನು ಸಲ್ಲಿಸಿ, 2013ರಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸಿತು. ಈ ತೀರ್ಪಿನ ಅನ್ವಯ, ಹೆಚ್ಚುವರಿ ಲಭ್ಯವಿದ್ದ ನೀರಿನಲ್ಲಿ ಕರ್ನಾಟಕಕ್ಕೆ 907 ಟಿಎಂಸಿ, ಆಂಧ್ರಪ್ರದೇಶಕ್ಕೆ 1001 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಅತ್ಯಂತ ಮುಖ್ಯವಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭಾಗವಾಗಿ, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರ್‌ಗೆ ಹೆಚ್ಚಿಸಲು ಈ ತೀರ್ಪು ಅನುಮತಿ ನೀಡಿತು.

2014ರಲ್ಲಿ ಆಂಧ್ರಪ್ರದೇಶ ರಾಜ್ಯವು ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯವಾದ ನಂತರ, ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಮತ್ತೊಂದು ಹೊಸ ವಿವಾದ ಹುಟ್ಟಿಕೊಂಡಿತು. ತಮಗೆ ಹಂಚಿಕೆಯಾದ ನೀರಿನಲ್ಲಿ ಪಾಲು ಕೇಳಿ ತೆಲಂಗಾಣವು ತನ್ನ ಹೋರಾಟವನ್ನು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ನಡುವೆ ನೀರು ಹಂಚಿಕೆಯ ವಿವಾದವು ಇಂದಿಗೂ ಮುಂದುವರೆದಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ. 

ಯೋಜನೆಯಲ್ಲಿ ಕೇಳಿಬಂದ ಭ್ರಷ್ಟಾಚಾರ: 

ರಾಜ್ಯದ ಅತಿದೊಡ್ಡ ನೀರಾವರಿ ಯೋಜನೆ ಎಂದು ಕರೆಯಲ್ಪಡುವ ಕೃಷ್ಣಾ ಮೇಲ್ದಂಡೆ ಯೋಜನೆಯು ಭ್ರಷ್ಟಾಚಾರ ಆರೋಪದಿಂದ ಹೊರತಾಗಿರಲಿಲ್ಲ. ಯೋಜನೆಗೆ ಪ್ರಾರಂಭಿಕ ಹಂತದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ನಿರೀಕ್ಷಿಸಲಾಗಿದ್ದರೆ, ಹಂತವಾರು ವಿಸ್ತರಣೆಯ ನಂತರ ಈ ಮೊತ್ತ ಲಕ್ಷಾಂತರ ಕೋಟಿ ರೂಪಾಯಿಗಳ ಮಟ್ಟಕ್ಕೆ ಹೆಚ್ಚಳವಾಯಿತು.  ಈ ವೆಚ್ಚ ಏರಿಕೆಗೆ ಕಾರಣವಾಗಿ ಅಕ್ರಮ ಗುತ್ತಿಗೆ ಹಂಚಿಕೆ, ಕಾಮಗಾರಿ ಖರ್ಚಿನಲ್ಲಿ ಅತಿರೇಕ, ಲಂಚ–ಕಮೀಷನ್ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದವು. 

ಭೂಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿದ್ದು, ಪ್ರಭಾವಿ ವ್ಯಕ್ತಿಗಳ ಭೂಮಿಗಳಿಗೆ ಹೆಚ್ಚಿನ ದರ, ಸಾಮಾನ್ಯ ರೈತರಿಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂಬ ದೂರುಗಳು ದಾಖಲಾದವು. ಅಲ್ಲದೇ, ನಕಲಿ ಹೆಸರಿನಲ್ಲಿ ಪರಿಹಾರ ಪಾವತಿ ನಡೆದಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿತು. 

ಎಚ್‌.ಡಿ.ದೇವೇಗೌಡ ವಿರುದ್ಧವೂ ಕೇಳಿಬಂದ ಆರೋಪ:

ಯುಕೆಪಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತೀರ್ಮಾನಗಳ ವಿರುದ್ಧ ಹಲವು ಟೀಕೆಗಳು ವ್ಯಕ್ತವಾದವು. 1996–97ರಲ್ಲಿ ಪ್ರಧಾನಿಯಾಗಿದ್ದ ವೇಳೆ ದೇವೇಗೌಡರು, ಅಲಮಟ್ಟಿ ಅಣೆಕಟ್ಟಿನ ಪೂರ್ಣ ಜಲಾಶಯ ಮಟ್ಟವನ್ನು 524.26 ಮೀಟರ್‌ಗಿಂತ ಕಡಿಮೆ ಮಾಡಿ ಕೇವಲ 512 ಮೀಟರ್ ಮಟ್ಟಕ್ಕೆ ಮಾತ್ರ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಿದರು. ಪರಿಣಾಮವಾಗಿ ಬರಗಾಲ ಪೀಡಿತ ಉತ್ತರ ಕರ್ನಾಟಕದ ಲಕ್ಷಾಂತರ ಎಕರೆ ಕೃಷಿಭೂಮಿಗೆ ನೀರಾವರಿ ಸಿಗದೆ ರೈತರು ಸಂಕಷ್ಟ ಅನುಭವಿಸಬೇಕಾಯಿತು. ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಜಕೀಯ ಒತ್ತಡಕ್ಕೆ ತಲೆಬಾಗಿದ ಕಾರಣ ದೇವೇಗೌಡರು ರಾಜ್ಯದ ಹಿತಾಸಕ್ತಿಯನ್ನು ಮರೆತರು ಎಂಬ ಆರೋಪಗಳು ಕೇಳಿಬಂದವು. ಅಲ್ಲದೇ, ಅಕ್ರಮ ಗುತ್ತಿಗೆ ಹಂಚಿಕೆಯಲ್ಲಿಯೂ ಅಕ್ರಮ ಎಸಗಿದ್ದಾರೆ. ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿದ್ದರು ಎಂಬ ಟೀಕೆಗಳು ವ್ಯಕ್ತವಾಗಿದ್ದವು. 

ಆಗ ಇದಕ್ಕೆ ಪ್ರತಿಕ್ರಿಯಿಸಿದ್ದ ದೇವೇಗೌಡರು, ಅಂದಿನ ಪರಿಸ್ಥಿತಿಯಲ್ಲಿ ರಾಜ್ಯಗಳ ನಡುವೆ ಸಮಾಧಾನ ಸಾಧಿಸುವ ಅಗತ್ಯವಿತ್ತು. 512 ಮೀಟರ್ ಅನುಮೋದನೆ ತಾತ್ಕಾಲಿಕವಾಗಿದ್ದು, ಮುಂದಿನ ಹಂತದಲ್ಲಿ ಎತ್ತರ ಹೆಚ್ಚಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದ್ದರು. 

ಮೂರನೇ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಜತೆಗೆ ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಯಾಗಿದೆ. ಮೊದಲ ಹಂತದಲ್ಲಿ ನಾರಾಯಣಪುರ, ಆಲಮಟ್ಟಿ ಡ್ಯಾಂಗಳ ಮೂಲಕ 4.25 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಿದರೆ, 2ನೇ ಹಂತದಲ್ಲಿ 1.97 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು. 1ನೇ ಹಂತ 1990ರಲ್ಲಿ ಪೂರ್ಣವಾದರೆ, 2ನೇ ಹಂತ 2000 ನೇ ಸಾಲಿನಲ್ಲಿ ಪೂರ್ಣಗೊಂಡಿತ್ತು. ಇದೀಗ ಮೂರನೇ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. 

ಒಂದು ಮತ್ತು ಎರಡನೇ ಹಂತದ ಯೋಜನೆ ಕುರಿತು ಮೇಲ್ಮನೆಯಲ್ಲಿ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯಕ್ಕೆ ಹಂಚಿಕೆಯಾಗಿರುವ 734 ಟಿಎಂಸಿ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -1 ಮತ್ತು 2 ರ ಯೋಜನೆಗೆ 173 ಟಿಎಂಸಿ ನೀರಿನ ಹಂಚಿಕೆಯಾಗಿದ್ದು, ಈ ಪೈಕಿ 11 ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಉತ್ತರ ಕರ್ನಾಟಕದ 5 ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಹಾಗೂ ರಾಯಚೂರಿಗೆ ಸುಮಾರು 6,22,023 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಯೋಜನೆಗಳ ಅನುಷ್ಠಾನದಿಂದ ಸಂಬಂಧಿಸಿದ 176 ಗ್ರಾಮಗಳು ಬಾಧಿತವಾಗಿದ್ದು, ಈ ಗ್ರಾಮಗಳ ಪುನಶ್ವೇತನಕ್ಕಾಗಿ 138 ಪುನರ್‌ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 134 ಪುನರ್‌ವಸತಿ ಕೇಂದ್ರಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 2 ಕೇಂದ್ರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. 

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಗೆ 130 ಟಿಎಂಸಿ ಹಂಚಿಕೆಯಾಗಿದೆ. ಹಂಚಿಕೆಯಾದ 130 ಟಿಎಂಸಿ ನೀರಿನ ಬಳಕೆಗಾಗಿ ಆಲಮಟ್ಟಿ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಳ ಮಾಡಲಾಗುತ್ತದೆ. ಈ ಯೋಜನೆಯಡಿ 9 ಉಪ ಯೋಜನೆಗಳಾದ ಮುಳವಾಡ, ಚಿಮ್ಮಲಗಿ, ಹೇರಕಲ್, ಮಲ್ಲಾಬಾದ, ಕೊಪ್ಪಳ ಎತ ನೀರಾವರಿ, ಇಂಡಿ ಹಾಗೂ ರಾಂಪೂರ ಏತ ನೀರಾವರಿ ವಿಸ್ತರಣೆ, ನಾರಾಯಣಪೂರ ಬಲದಂಡೆ ಕಾಲುವೆ ವಿಸ್ತರಣೆ ಹಾಗೂ ಭೀಮಾ ಪ್ಲಾಂಕ ಉಪ-ಯೋಜನೆಗಳ ಅನುಷ್ಠಾನದೊಂದಿಗೆ ಉತ್ತರ ಕರ್ನಾಟಕದ ವಿಜಯಪೂರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ 5.94 ಲಕ್ಷ ಹೆಕ್ಟೇರ್ (14.87 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿರುತ್ತದೆ ಎಂದಿದ್ದಾರೆ. 

ಮುಳುಗಡೆಯಾಗುವ 20 ಗ್ರಾಮಗಳ ಪುನರ್ ವಸತಿ 

ಯೋಜನೆ ಹಂತ-3ರ ಯೋಜನಾ ಅನುಷ್ಟಾನಕ್ಕಾಗಿ 1.34 ಲಕ್ಷ ಎಕರೆ ಜಮೀನನ್ನು ಹೊಸ ಭೂಸ್ವಾಧೀನ ಕಾಯ್ದೆಯನ್ವಯ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಬಾಧಿತವಾಗುವ 20 ಗ್ರಾಮಗಳಿಗೆ ಎದುರಾಗಿ 23 ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಿದ್ದು, ಇದಕ್ಕಾಗಿ 4,933 ಎಕರೆ ಜಮೀನಿನ ಅವಶ್ಯಕತೆ ಇರುತ್ತದೆ. ಈ ಪೈಕಿ 1846 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.  ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು,ಇಲ್ಲಿಯವರೆಗೆ 3,448.23 ಕೋಟಿ ರೂ. ವೆಚ್ಚವನ್ನು ಭರಿಸಲಾಗಿದೆ. 

20 ಗ್ರಾಮ ಮತ್ತು ಬಾಗಲಕೋಟೆ ಪಟ್ಟಣದ 10 ವಾರ್ಡ್‌ಗಳಲ್ಲಿನ ಕಟ್ಟಡ ಸೇರಿ ಒಟ್ಟು 25,860 ಕಟ್ಟಡಗಳನ್ನು ಸ್ವಾಧೀನಪಡಿಸಬೇಕಾಗಿದೆ. ಒಟ್ಟಾರೆ, ಮುಳುಗಡೆ ಹೊಂದುವ ಜಮೀನು, ಪುನರ್ವಸತಿ ನಿರ್ಮಾಣಕ್ಕಾಗಿ ಹಾಗೂ ಕಾಲುವೆ ನಿರ್ಮಾಣಕ್ಕಾ, ಭೂಸ್ವಾಧೀನಪಡಿಸಿಕೊಳ್ಳಲು 17,827 ಕೋಟಿ  ರೂ. ಮೊತ್ತವನ್ನು ಮೀಸಲಿಡಲಾಗಿದ್ದು, ಈ ಪೈಕಿ ಭೂಸ್ವಾಧೀನಪಡಿಸಿಕೊಂಡ 28,878 ಎಕರೆ ಕ್ಷೇತ್ರಕ್ಕೆ ಇಲ್ಲಿಯವರೆಗೆ 3,077.30 ಕೋಟಿ ರೂ.ವೆಚ್ಚವನ್ನು ಭರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಹಂತ-3ರ 9 ಉಪ-ಯೋಜನೆಗಳಡಿ ಏತ ನೀರಾವರಿಗಳ ಮುಖ್ಯ ಸ್ಥಾವರಗಳ ನಿರ್ಮಾಣ, ಮುಖ್ಯ ಕಾಲುವೆ ನಿರ್ಮಾಣ ಕೈಗೊಂಡಿದ್ದು ಪ್ರಗತಿಯ ವಿವಿಧ ಹಂತದಲ್ಲಿವೆ. ಅಲ್ಲದೇ, ಯೋಜನಾ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ನೈಸರ್ಗಿಕವಾಗಿ ನೀರು ಹರಿಸಿ ತುಂಬಿಸಲು ಅವಶ್ಯಕ ವಿತರಣಾ ಕಾಲುವೆ ಜಾಲದ ಕಾಮಗಾರಿಗಳನ್ನು ಸಹ ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಸದಲ ಕಾಮಗಾರಿಗಳಿಗಾಗಿ 18,028.44 ಕೋಟಿ  ರೂ. ಅಂದಾಜು ಮೊತ್ತದ ಪೈಕಿ ಇಲ್ಲಿಯವರೆಗೆ 11,098.22 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎನ್ನಲಾಗಿದೆ. 

Tags:    

Similar News