ಬೆಂಗಳೂರಿಗೆ ಸುರಂಗ: Part-2| ಸುರಂಗ ರಸ್ತೆ 16.7 ಕಿ.ಮೀ., ರ‍್ಯಾಂಪ್ ಉದ್ದ 18 ಕಿ.ಮೀ; ಐಟಿ ನಗರಿಗೆ ಶಾಪವೇ?
ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಲು ಕನಿಷ್ಠ ಒಂದು ವರ್ಷ ತೆಗೆದುಕೊಂಡಿದ್ದಾರೆ. ಆದರೆ, ಅತ್ಯಂತ ಸೂಕ್ಷ್ಮ ಯೋಜನೆಯಾಗಿರುವ ಟನಲ್ ರಸ್ತೆಯ ಡಿಪಿಆರ್ ಅನ್ನು ತರಾತುರಿಯಲ್ಲಿ ಸಿದ್ಧಪಡಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳ-ಸಿಲ್ಕ್ ಬೋರ್ಡ್ ನಡುವೆ 16.7 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಸಾಕಷ್ಟು ವಿವಾದಕ್ಕೆ ಒಳಗಾಗಿದೆ. ನಗರದ ಸಂಚಾರ ದಟ್ಟಣೆಗೆ ಪರಿಹಾರ ರೂಪಿಸುವ ಉದ್ದೇಶದಿಂದ ಸುರಂಗ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಯೋಜನೆಗೆ ಪರಿಸರವಾದಿಗಳು, ನಗರ ತಜ್ಞರು ಹಾಗೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸೂಕ್ತ ಅಧ್ಯಯನವಿಲ್ಲದೇ ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂಬ ಆತಂಕವು ಯೋಜನೆ ವಿರೋಧಿಸುವವರದ್ದಾಗಿದೆ.
ಸುರಂಗ ರಸ್ತೆಯ ಉದ್ದ 16.7 ಕಿ.ಮೀ ಆದರೂ ರ‍್ಯಾಂಪ್ ಗಳ ಒಟ್ಟು ಉದ್ದವೇ 18 ಕಿ.ಮೀ. ಆಗಲಿದೆ. ಹಾಗಾಗಿ ಡಿಪಿಆರ್‌ನಲ್ಲಿ ಹೇಳಿರುವಂತೆ ಸುರಂಗ ರಸ್ತೆ 16.7 ಕಿ.ಮೀ. ಅಲ್ಲ, 34 ಕಿ.ಮೀ. ಎಂಬುದು ನಗರ ತಜ್ಞ ಹಾಗೂ ಸಿಟಿಜನ್ ಫಾರ್ ಸಿಟಿಜನ್ ಸಂಸ್ಥೆಯ ಸಂಸ್ಥಾಪಕ ರಾಜಕುಮಾರ್ ದುಗಾರ್ ಅವರ ವಾದ.
ಬಹುಕೋಟಿ ವೆಚ್ಚದ ಉದ್ದೇಶಿತ ಸುರಂಗ ರಸ್ತೆ ಯೋಜನೆಯನ್ನು ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿರುವುದಕ್ಕೆ ರಾಜಕುಮಾರ್ ದುಗಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಯೋಜನೆ ಸಾಧಕ-ಬಾಧಕಗಳ ಕುರಿತು ಸವಿವರವಾಗಿ ಮಾತನಾಡಿದ್ದಾರೆ. ಎರಡೇ ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ ಹಾಗೂ ಡಿಪಿಆರ್ ಸಿದ್ಧಪಡಿಸಿರುವುದಕ್ಕೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಟನಲ್ ರಸ್ತೆ ವಿರೋಧಿಸಲ್ಲ,ಆದರೆ, ಬೆಂಗಳೂರಿಗೆ ಅನಗತ್ಯ
ಸುರಂಗ ರಸ್ತೆ ಬೇಡ ಎನುವುದಿಲ್ಲ, ಆದರೆ, ಬೆಂಗಳೂರಿಗೆ ಬೇಡವಾದದು. ಬೆಟ್ಟಗುಡ್ಡ, ನೀರು, ಪರಿಸರ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಅವನ್ನು ತಪ್ಪಿಸಲು ಟನಲ್ ರಸ್ತೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಬೆಂಗಳೂರಿಗೆ ಇಂತಹ ಯಾವ ಕಾರಣಗಳೂ ಅನ್ವಯವಾಗುವುದಿಲ್ಲ. ಟನಲ್ ರಸ್ತೆಗೆ ಪರ್ಯಾಯವಾದ ಅವಕಾಶಗಳಿದ್ದರೂ ಬಳಸಿಕೊಂಡಿಲ್ಲ ಎಂದು ರಾಜಕುಮಾರ್ ದುಗಾರ್ ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಕರ್ನಾಟಕವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹಿಂದುಳಿದಿದೆ. ಮೊದಲು ಅದರ ಸುಧಾರಣೆ ಶ್ರಮಿಸಬೇಕು. 16.5 ಕಿ.ಮೀ. ಉದ್ದದ ಯೋಜನೆಯನ್ನು ತರಾತುರಿಯಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಲು ಕನಿಷ್ಠ ಒಂದು ವರ್ಷ ತೆಗೆದುಕೊಂಡಿದ್ದಾರೆ. ಆದರೆ, ಅತ್ಯಂತ ಸೂಕ್ಷ್ಮ ಯೋಜನೆಯಾಗಿರುವ ಟನಲ್ ರಸ್ತೆಯ ಡಿಪಿಆರ್ ಅನ್ನು ತರಾತುರಿಯಲ್ಲಿ ಸಿದ್ಧಪಡಿಸಲಾಗಿದೆ. ಡಿಪಿಆರ್‌ನಲ್ಲೇ ಸಾಕಷ್ಟು ಲೋಪಗಳಿವೆ. ಇನ್ನು ಕೆಲಸದಲ್ಲಿ ಎಷ್ಟು ಲೋಪಗಳಾಗಬಹುದು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಸುರಂಗದ ರಸ್ತೆಯಲ್ಲಿ ಐದು ಕಡೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ರ‍್ಯಾಂಪ್ ನಿರ್ಮಾಣವಾಗಲಿದೆ. ಹೆಬ್ಬಾಳ, ಮೇಖ್ರಿ ವೃತ್ತ, ರೇಸ್ ಕೋರ್ಸ್ ರಸ್ತೆ, ಲಾಲ್ಬಾಗ್ ಹಾಗೂ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತೆ ಬಳಿ ರ‍್ಯಾಂಪ್ ಗಳನ್ನು ನಿರ್ಮಿಸಲಾಗುತ್ತಿದೆ.
ಸುರಂಗದ ಒಟ್ಟು ಉದ್ದ16.7 ಕಿ.ಮೀ, ಆದರೆ, ಒಟ್ಟು ರ‍್ಯಾಂಪ್ ಉದ್ದವೇ 18 ಕಿ.ಮೀ ಆಗಲಿದೆ. ಪ್ರತಿ ರ‍್ಯಾಂಪ್ ಸರಾಸರಿ 1.1 ಕಿ.ಮೀ ಇರಲಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ತೆರಳಲು ಒಂದೂವರೆ ಗಂಟೆ ಸಮಯ ಹಿಡಿಯಲಿದೆ. ಟನಲ್ ರಸ್ತೆಯಲ್ಲಿ ಸಾಗಲು 35 ನಿಮಿಷ ಸಾಕು, ಆದರೆ, ರ‍್ಯಾಂಪ್ ಮೂಲಕ ಪ್ರವೇಶ, ನಿರ್ಗಮನ ಮಾಡಬೇಕಾದರೆ ಅಷ್ಟೇ ಸಮಯ ತೆಗೆದುಕೊಳ್ಳಲಿದೆ. ಜತೆಗೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರ‍್ಯಾಂಪ್ ಗಳಿಗೆ ಬರುವಾಗ ತೆಗೆದುಕೊಳ್ಳಬೇಕಾದ ಯೂಟರ್ನ್‌ಗಳಿಂದಲೂ ದಟ್ಟಣೆ ಉಂಟಾಗಲಿದೆ. ರಾಜ್ಯ ಸರ್ಕಾರ ಡಿಪಿಆರ್ ತಯಾರಿಕೆಗೂ ಮುನ್ನ ಏನು ಮಾಡಬೇಕಿತ್ತೋ ಅದನು ಮಾಡಿಲ್ಲ. ಈಗಾಗಲೇ ಬೆಂಗಳೂರು ವಿಶ್ವದಲ್ಲೇ ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿದೆ. ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ಇದೆ. ನಗರದಲ್ಲಿ 1.2 ಕೋಟಿ ವಾಹನಗಳಿವೆ. ಇದರಲ್ಲಿ 80 ಲಕ್ಷ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿವೆ. 20 ಲಕ್ಷ ಕಾರುಗಳಿವೆ. ಟನಲ್ ರಸ್ತೆಯಲ್ಲಿ ಟೋಲ್ ಶುಲ್ಕ ದುಬಾರಿಯಾಗಿರುವುದರಿಂದ ಶೇ 5 ರಷ್ಟು ವಾಹನಗಳು ಮಾತ್ರ ಸಂಚರಿಸಬಹುದು. ಶ್ರೀಮಂತರು ಬಳಸುವ ಸುರಂಗಕ್ಕಾಗಿ ದೊಡ್ಡ ಬಂಡವಾಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಜನಸಂಖ್ಯೆ ಬೆಳವಣಿಗೆ ಹಾಗೂ ವಾಹನ ದಟ್ಟಣೆಯಲ್ಲಿ ಸುಸ್ಥಿರತೆ ಇಲ್ಲ. ಸಬ್ ಅರ್ಬನ್ ರೈಲು ಸೇವೆ ಮುಂಬೈ, ಚೆನ್ನೈ ಹಾಗೂ ದೆಹಲಿಯಲ್ಲಿ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಒಂದು ಮಳೆಯಾದರೆ ರಸ್ತೆ ಗುಂಡಿ ಬೀಳಲಿದೆ. ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ. ಸುರಂಗ ರಸ್ತೆ ನಿರ್ಮಿಸುವುದರಿಂದ ಪ್ರವಾಹದ ನೀರು ನುಗ್ಗಿ ಇನ್ನಷ್ಟು ಅವಾಂತರ ಎದುರಾಗಲಿದೆ.
ಮಳೆ ನೀರು ತಕ್ಷಣ ಹಿಂಗುವ ಕುರಿತು ಡಿಪಿಆರ್ ನಲ್ಲಿ ಯಾವುದೇ ವಿವರ ನಮೂದಿಸಿಲ್ಲ. ಸುರಂಗದಲ್ಲಿ ಸಂಚರಿಸುವ ಮೆಟ್ರೋ, ರೈಲು ಚಾಲಕರಿಗೆ ಸೂಕ್ತ ತರಬೇತಿ ನೀಡಲಾಗಿರುತ್ತದೆ. ಆದರೆ, ಇಲ್ಲಿ ಯಾವುದೇ ತರಬೇತಿ ಇಲ್ಲದೇ ಖಾಸಗಿಯವರೇ ಸಂಚರಿಸುತ್ತಾರೆ. ಅಚಾನಕ್ಕಾಗಿ ಅವಘಡ ಸಂಭವಿಸಿದರೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಒಳಗೆ ದಟ್ಟಣೆ ಉಂಟಾದರೆ ಎಲ್ಲವೂ ಅಸ್ತವ್ಯಸ್ತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಧ್ಯಯನ ವರದಿ ಇಲ್ಲ
ಯಾವುದೇ ಸುರಂಗ ನಿರ್ಮಾಣ ಮಾಡಬೇಕಾದರೆ ಜಿಯಾಲಜಿ ಹಾಗೂ ಹೈಡ್ರಾಲಜಿ ಅಧ್ಯಯನ ಅಗತ್ಯವಿದೆ. ಬೆಂಗಳೂರಿನಲ್ಲಿ ಒಂದು ಕಿ.ಮೀ. ಸುರಂಗ ಕೊರೆಯಲು 700 ಕೋಟಿ ವ್ಯಯವಾದರೆ, ದೆಹಲಿಯಲ್ಲಿ 400 ಕೋಟಿ ವೆಚ್ಚವಾಗಲಿದೆ.
ಕೆರೆಗಳ ನಗರ ಬೆಂಗಳೂರಿನಲ್ಲಿ ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲ, ರಾಜಕಾಲುವೆ ಒತ್ತುವರಿಯಾಗಿವೆ. ಟನಲ್ ರಸ್ತೆ ಕೊರೆಯಲು 15 ಮೀಟರ್ ಟಿಬಿಎಂ ಯಂತ್ರ ಬಳಸುವುದರಿಂದ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಯೋಜನೆ ಜಾರಿಗೆ ತರುವ ಮೊದಲು ಸಾರ್ವಜನಿಕರ ಅಹವಾಲು ಆಲಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. 50 ಪೈಸೆಯ ಮಾತ್ರೆಯಲ್ಲೇ ಅಡ್ಡಪರಿಣಾಮಗಳ ಬಗ್ಗೆ ಉಲ್ಲೇಖವಿರುತ್ತದೆ. ಹೀಗಿರುವಾಗ 20 ಸಾವಿರ ಕೋಟಿ ವೆಚ್ಚದ ಯೋಜನೆಯಲ್ಲಿ ಅಡ್ಡಪರಿಣಾಮಗಳನ್ನು ಆಲಿಸಬೇಕಲ್ಲವೇ ಎಂದು ರಾಜಕುಮಾರ್ ದುಗಾರ್ ಕೇಳಿದ್ದಾರೆ.
ರಸ್ತೆ ಗುಂಡಿ, ಫುಟ್‌ಪಾತ್, ಸಾರ್ವಜನಿಕ ಸಾರಿಗೆ, ಸಬ್ ಅರ್ಬನ್ ಹೆಚ್ಚು ಮಾಡಬೇಕು. ವಿದ್ಯುತ್ ದೀಪ, ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದೆಲ್ಲವನ್ನೂ ಬಿಟ್ಟು ಸುರಂಗ ನಿರ್ಮಿಸಲು ಹೋದರೆ ಯಾರಿಗಾದರೂ ಸಿಟ್ಟು ತರಲಿದೆ. ಸುರಂಗದ ಲಾಭ, ನಷ್ಟ ಅವಲೋಕಿಸಿದರೆ ಯೋಜನೆಯನ್ನು ಕೈಗೆತ್ತಿಕೊಳ್ಳಲೇಬಾರದು. ಟನಲ್ ರಸ್ತೆಗೂ ಮುನ್ನ ಪರ್ಯಾಯ ಆಯ್ಕೆಗಳ ಕುರಿತು ಯೋಚಿಸಬೇಕು. ಶೇ 5 ರಷ್ಟು ವಾಹನಗಳು ಕೂಡ ಟನಲ್ ಬಳಸುವುದಿಲ್ಲ ಎಂದು ಹೇಳಿದ್ದಾರೆ.
90 ರಷ್ಟು ಜನರ ವಿರೋಧ
ಬೆಂಗಳೂರಿನಲ್ಲಿ ಟನಲ್ ಅಥವಾ ಸುರಂಗ ರಸ್ತೆ ನಿರ್ಮಾಣಕ್ಕೆ ಶೇ 90 ರಷ್ಟು ಜನರ ವಿರೋಧ ವ್ಯಕ್ತವಾಗಿದೆ. ಸುರಂಗದಲ್ಲಿ ಕಿ.ಮೀ.ಗೆ 20 ರೂ. ಟೋಲ್ ಶುಲ್ಕ ನಿಗದಿ ಮಾಡಲಾಗಿದೆ. ಒಳಗೆ ಹೋಗಿ ಹೊರ ಬರಬೇಕಾದರೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಜತೆಗೆ ಟನಲ್ ನಿರ್ಮಾಣವಾಗುವಾಗಲೂ ತೊಂದರೆಗಳು ಸಂಭವಿಸಬಹುದು. ನಿರ್ಮಾಣವಾದ ನಂತರವೂ ಸಮಸ್ಯೆ ಸಂಭವಿಸಬಹುದು. ಈ ಕುರಿತು ನಾವು 431 ಜನರನ್ನು ಸಮೀಕ್ಷೆಗೆ ಒಳಪಡಿಸಿದಾಗ ಶೇ 90 ಮಂದಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶೇ 10 ರಷ್ಟು ಮಂದಿ ಮಾತ್ರ ಟನಲ್ ರಸ್ತೆ ಬೇಕು ಎಂದಿದ್ದಾರೆ. ಮೆಟ್ರೋ ಟನಲ್ ಕೊರೆಯುವ ಯಂತ್ರವು ಆರು ಮೀಟರ್ ವ್ಯಾಸ ಹೊಂದಿರಲಿದೆ. ಟನಲ್ ಕೊರೆಯಬೇಕಾದ ಯಂತ್ರವು 15 ಮೀಟರ್ ವ್ಯಾಸ ಹೊಂದಿರಲಿದೆ. ಭೂಗರ್ಭದಲ್ಲಿ ಗಟ್ಟಿ ಬಂಡೆಗಳು ಅಡ್ಡ ಬಂದರೆ ಕೆಲವೊಮ್ಮೆ ಟಿಬಿಎಂ ಯಂತ್ರಗಳೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನೀರು, ಮಣ್ಣು ಕಲುಷಿತ ಭೀತಿ
ಟನಲ್ ಕೊರೆಯುವ ಯಂತ್ರಕ್ಕೆ (ಟಿಬಿಎಂ) ಬೆಂಟೋನೈಟ್ ಸ್ಲರಿ ಬಳಸಲಾಗುತ್ತದೆ. ಬೆಂಟೋನೈಟ್ ಬಳಕೆಯಿಂದ ನೀರಿನ ಒಳಹರಿವು ತಡೆಯುತ್ತದೆ. ನಿರ್ಮಾಣದ ಸಮಯದಲ್ಲಿ ಘರ್ಷಣೆ ಕಡಿಮೆ ಮಾಡಲಿದೆ. ಆದರೆ, ಈ ಸ್ಲರಿಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಮಣ್ಣು ಹಾಗೂ ನೀರು ಕಲುಷಿತವಾಗಲಿದೆ.
ಟಿಬಿಎಂ ಯಂತ್ರವು ಭೂಮಿಯನ್ನು ಕೊರೆಯುವ ಸಂದರ್ಭದಲ್ಲಿ ಕಟ್ಟಡಗಳು ಕಂಪಿಸುವ ಸಾಧ್ಯತೆ ಇರಲಿದೆ. ಟನಲ್ ಮಾರ್ಗದಲ್ಲಿರುವ ಬಹುಮಹಡಿ ಕಟ್ಟಡಗಳು ಸುಮಾರು 50 ಅಡಿ ಆಳದವರೆಗೆ (ಮಹಡಿಗಳ ಆಧಾರದ ಮೇಲೆ ತಳಪಾಯ ಆಳ ನಿರ್ಧಾರವಾಗಲಿದೆ) ಅಡಿಪಾಯ ಹಾಕಲಿವೆ. ಇಂತಹ ಸ್ಥಳಗಳಲ್ಲಿ ಟಿಬಿಎಂ ಯಂತ್ರಗಳು ಟನಲ್ ಕೊರೆಯುವುದರಿಂದ ಅಡಿಪಾಯ ಸಡಿಲವಾಗಿ ಅಪಾಯ ಉಂಟಾಗುವ ಸಾಧ್ಯತೆಗಳಿರಲಿವೆ ಎನ್ನಲಾಗಿದೆ.
ರದ್ದು ಮಾಡುವುದು ಕಷ್ಟ
ಟನಲ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ವಿನ್ಯಾಸ ಮಾಡಲಾಗಿದೆ. ತಿದ್ದುಪಡಿ ಮಾಡಿದರೆ ಇಡೀ ಯೋಜನೆಯನ್ನೇ ಬದಲಾಯಿಸಬೇಕಾಗುತ್ತದೆ. ಹೊಸದಾಗಿ ಮಾಡಬೇಕಾಗುತ್ತದೆ. ಈ ಕಸರತ್ತು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ಅವಧಿಯಲ್ಲಿ ಬೇರೆ ಯೋಜನೆಯನ್ನೇ ಮಾಡಬಹುದು.
ಯೋಜನೆಗೆ ಎತ್ತಿರುವ ಆಕ್ಷೇಪಗಳಿಗೆ ಸರ್ಕಾರದ ಯಾರೊಬ್ಬರು ಉತ್ತರ ನೀಡಿಲ್ಲ. ಸಾರ್ವಜನಿಕರ ಸಲಹೆಯನ್ನೂ ಪಡೆದಿಲ್ಲ. ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದ ಜನರಲ್ಲಿ ಯೋಜನೆ ಬಗ್ಗೆ ವಿಶ್ವಾಸ ಮೂಡಿಲ್ಲ ಎಂದು ರಾಜಕುಮಾರ್ ದುಗಾರ್ ಹೇಳಿದ್ದಾರೆ.
ಸಿವಿಕ್ ಬೆಂಗಳೂರು ಸಂಘಟನೆಯಿಂದ ಡಿಸಿಎಂ ಅವರಿಗೆ ಪತ್ರ ಬರೆದು ವರ್ಷವಾದರೂ ಈವರೆಗೆ ಉತ್ತರ ಬಂದಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಆಗಿಲ್ಲ. ಟನಲ್ ರಸ್ತೆಯಲ್ಲಿ ಅಧಿಕ ಟೋಲ್ ಶುಲ್ಕದಿಂದ ಕ್ಯಾಬ್ ಮಾಲೀಕರಿಗೆ ಹೊರೆಯಾಗಲಿದೆ.
ಪರಿಹಾರಗಳೇನು?
ಕಳೆದ 25ವರ್ಷಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. 1.2 ಕೋಟಿ ವಾಹನಗಳು ಸಂಚರಿಸುತ್ತಿವೆ. ಈವುಗಳಿಗೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಬಿಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೇರೆ ಕಂಡೆ ಸಂಪರ್ಕ ವ್ಯವಸ್ಥೆ ಸುಧಾರಿಸಿದರೆ ಹೆಚ್ಚು ಅನುಕೂಲವಾಗಲಿದೆ.
ರಸ್ತೆ ಗುಂಡಿ, ಫುಟ್‌ಪಾತ್ ಸರಿಯಾಗಿ ಮಾಡುತ್ತಿಲ್ಲ. ಸಾಕಷ್ಟು ಕಡೆ ಒತ್ತುವರಿಯಾಗಿದೆ. ವಾಕೆಬಿಲಿಟಿ ಆಗುತ್ತಿಲ್ಲ. ಚರಂಡಿ, ವಿದ್ಯುತ್ ದೀಪ ಹಾಳಾಗಿದೆ. ಕಸದ ಸಮಸ್ಯೆ ಇದೆ. ಸಬ್ ಅರ್ಬನ್ ಕಾರ್ಯ ಮುಗಿಸಬೇಕು. ಸಣ್ಣ ಬಸ್‌ಗಳನ್ನು ಒದಗಿಸುವುದರಿಂದ ಚಿಕ್ಕ ದಾರಿಗಳಲ್ಲಿಯೂ ಸಂಚಾರ ಸುಲಭವಾಗಲಿದೆ. 5-6 ಸಾವಿರ ಬಸ್‌ಗಳನ್ನು ಪೂರೈಸಬೇಕಾಗಿದೆ. ಮೆಟ್ರೋ ಫೀಡರ್ ಹೆಚ್ಚಿಸಬೇಕು. ಇದರಿಂದ ದಟ್ಟಣೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟನಲ್ ರಸ್ತೆಗೆ ಐಐಎಸ್ಸಿ ಆಕ್ಷೇಪ
ಬೆಂಗಳೂರಿನಲ್ಲಿ ಟನಲ್ ರಸ್ತೆ ಅಪಾಯ ಸೃಷ್ಟಿಸಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದರೂ ರಾಜ್ಯ ಸರ್ಕಾರ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದಿರುವುದು ಕಳವಳಕಾರಿ ವಿಚಾರವಾಗಿದೆ.
ಟನಲ್ ರಸ್ತೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ಬದಲು ಹೆಚ್ಚಲಿದೆ. ಹಲವು ಮಾಲಿನ್ಯಗಳು ಹೆಚ್ಚಲಿವೆ ಎಂದು ವರದಿ ನೀಡಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳಿಂದಾಗಿ ಅರಣ್ಯ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಿರುವಾಗ ಜನರಿಗೆ ಯೋಜನೆಯ ಸಾಧಕ ಬಾಧಕ ತಿಳಿಸದೇ ಟನಲ್ ರಸ್ತೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ಯೋಜನೆ ಕೈ ಬಿಡಬೇಕು. ಅಗತ್ಯವಿರುವ ಪರ್ಯಾಯ ಮಾರ್ಗಗಳನ್ನು ಅನ್ವೇಷಣೆ ಮಾಡಬೇಕು ಎಂದು ನಗರ ತಜ್ಞ ರಾಜಕುಮಾರ್ ದುಗ್ಗಾರ ಹೇಳಿದರು.
ನ್ಯಾಯಾಲಯದಲ್ಲಿ ಯೋಜನೆ ವಿರುದ್ಧ ಹೋರಾಟ
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್ ರಸ್ತೆ ಪ್ರಶ್ನಿಸಿ ಚೆನ್ನೈನಲ್ಲಿರುವ ಹಸಿರು ನ್ಯಾಯಾಧೀಕರಣ ಹಾಗೂ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ ಹೈಕೋರ್ಟ್ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ.
ʼಭಾರತೀಯ ಜಿಯಾಲಜಿಕಲ್ ಸರ್ವೇʼ ಸೇರಿ ಯಾವುದೇ ಸಂಸ್ಥೆಯ ಅನುಮತಿ ಪಡೆಯದೇ ಯೋಜನೆ ಆರಂಭಿಸಲು ಹೊರಟಿದೆ. ಜನರ ಕಲ್ಯಾಣಕ್ಕೆ ಶ್ರಮಿಸುವ ಸರ್ಕಾರಗಳು ಮೊದಲ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಶಕ್ತಿಯೋಜನೆ ಸರ್ಕಾರದ ಅತ್ಯುತ್ತಮ ನಿರ್ಧಾರ. ಆದರೆ, ಟನಲ್ ವಿಚಾರದಲ್ಲಿ ಸರ್ಕಾರ ನಿರ್ಧಾರ ಅಕ್ಷಮ್ಯ ಎಂದು ರಾಜಕುಮಾರ್ ಟೀಕಿಸಿದ್ದಾರೆ.