ಎಚ್-1ಬಿ ವೀಸಾ ಶುಲ್ಕ ಭಾರೀ ಏರಿಕೆ: ಭಾರತೀಯ ಟೆಕ್ಕಿಗಳಿಗೆ ಟ್ರಂಪ್ ಪ್ರಹಾರ

ಅಮೆರಿಕನ್ನರು ಕೆಲಸ ಮಾಡದ ಕ್ಷೇತ್ರಗಳಲ್ಲಿ ಹೆಚ್ಚು ನುರಿತ ಕಾರ್ಮಿಕರನ್ನು ದೇಶಕ್ಕೆ ಕರೆತರಲು ಈ ವೀಸಾವನ್ನು ಬಳಸಬೇಕಿತ್ತು, ಆದರೆ ಹಾಗಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Update: 2025-09-20 05:27 GMT

ಅಮೆರಿಕದ ಎಚ್‌1ಬಿ ವಿಸಾ

Click the Play button to listen to article

ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಬೆಳವಣಿಗೆಯೊಂದರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾಗಳ ವಾರ್ಷಿಕ ಶುಲ್ಕವನ್ನು 1,00,000 ಡಾಲರ್‌ಗಳಿಗೆ (ಸುಮಾರು 88 ಲಕ್ಷ ರೂಪಾಯಿ) ಹೆಚ್ಚಿಸುವ ಮಹತ್ವದ ಘೋಷಣೆಗೆ ಸಹಿ ಹಾಕಿದ್ದಾರೆ. ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದರೂ ಈ ವೀಸಾವನ್ನು ನೆಚ್ಚಿಕೊಂಡಿರುವ ಭಾರತೀಯರಿಗೆ ದೊಡ್ಡ ಸಮಸ್ಯೆಯಾಗಲಿದೆ.

ವೈಟ್ ಹೌಸ್ ಸಿಬ್ಬಂದಿ ಕಾರ್ಯದರ್ಶಿ ವಿಲ್ ಸ್ಕಾರ್ಫ್ ಅವರ ಪ್ರಕಾರ, ದೇಶದ ವಲಸೆ ವ್ಯವಸ್ಥೆಯಲ್ಲಿ ಎಚ್-1ಬಿ ವೀಸಾ ಕಾರ್ಯಕ್ರಮವು ಅತ್ಯಂತ ದುರುಪಯೋಗಕ್ಕೊಳಗಾದ ವ್ಯವಸ್ಥೆಗಳಲ್ಲಿ ಒಂದಾಗಿದೆ. ಅಮೆರಿಕನ್ನರು ಕೆಲಸ ಮಾಡದ ಕ್ಷೇತ್ರಗಳಲ್ಲಿ ಹೆಚ್ಚು ನುರಿತ ಕಾರ್ಮಿಕರನ್ನು ದೇಶಕ್ಕೆ ಕರೆತರಲು ಈ ವೀಸಾವನ್ನು ಬಳಸಬೇಕಿತ್ತು, ಆದರೆ ಹಾಗಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ 100,000 ಡಾಲರ್​ ಶುಲ್ಕವು, ಅಮೆರಿಕಕ್ಕೆ ಬರುವವರು "ನಿಜವಾಗಿಯೂ ನುರಿತರು" ಎಂಬುದನ್ನು ಎಂಬುದನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಅವರು ಅಮೆರಿಕನ್ ಕಾರ್ಮಿಕರ ಉದ್ಯೋಗ ಕಸಿಯುವವರಲ್ಲ ಎಂಬುದನ್ನು ಟ್ರಂಪ್ ಆಡಳಿತ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಅವರ ಸಮ್ಮುಖದಲ್ಲಿ ಘೋಷಣೆಗೆ ಸಹಿ ಹಾಕಿದ ಟ್ರಂಪ್, "ನಮಗೆ ಉತ್ತಮ ನೌಕರರು ಬೇಕು, ಮತ್ತು ಈ ನೀತಿ ಅದಕ್ಕೆ ಪೂರಕ," ಎಂದು ಹೇಳಿದರು.

ಕಂಪನಿಗಳ ಮೇಲಿನ ಪರಿಣಾಮ ಮತ್ತು ಆದಾಯ ನಿರೀಕ್ಷೆ

ಈ ನೀತಿಯು ಹೊಸ ವೀಸಾ ಅರ್ಜಿಗಳಿಗೆ ಮಾತ್ರವಲ್ಲದೆ, ಈಗಾಗಲೇ ವೀಸಾ ಹೊಂದಿರುವವರ ನವೀಕರಣಕ್ಕೂ ಅನ್ವಯಿಸುತ್ತದೆ. ಇದರಿಂದಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ 100,000 ಡಾಲರ್​ ಪಾವತಿಸಲು ಸಿದ್ಧರಿವೆಯೇ ಅಥವಾ ಅವರನ್ನು ವಾಪಸ್ ಕಳುಹಿಸಿ ಅಮೆರಿಕನ್ನರನ್ನು ನೇಮಿಸಿಕೊಳ್ಳಬೇಕೇ ಎಂದು ನಿರ್ಧರಿಸಬೇಕಾಗುತ್ತದೆ. "ಒಬ್ಬ ವ್ಯಕ್ತಿ ಕಂಪನಿಗೆ ಮತ್ತು ಅಮೆರಿಕಕ್ಕೆ ಹೆಚ್ಚು ಮೌಲ್ಯಯುತನಾಗಿದ್ದರೆ ಮಾತ್ರ ಉಳಿಯುತ್ತಾನೆ, ಇಲ್ಲದಿದ್ದರೆ ಅವರು ಅಮೆರಿಕನ್ನರಿಗೆ ದಾರಿ ಮಾಡಿಕೊಡಬೇಕು," ಎಂದು ಲುಟ್ನಿಕ್ ಸ್ಪಷ್ಟಪಡಿಸಿದರು.

ಈ ಕಾರ್ಯಕ್ರಮದಿಂದ ಅಮೆರಿಕದ ಖಜಾನೆಗೆ 100 ಬಿಲಿಯನ್‌ಗಿಂತಲೂ ಡಾಲರ್​ಗಿಂತಲೂ ಹೆಚ್ಚು ಆದಾಯ ಬರುವ ನಿರೀಕ್ಷೆಯಿದೆ. ಈ ಹಣವನ್ನು ತೆರಿಗೆ ಕಡಿತಗೊಳಿಸಲು ಮತ್ತು ಸಾಲವನ್ನು ತೀರಿಸಲು ಬಳಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

'ಗೋಲ್ಡ್ ಕಾರ್ಡ್' ಎಂಬ ಹೊಸ ಯೋಜನೆ

ಎಚ್-1ಬಿ ನೀತಿಯ ಜೊತೆಗೆ, ಟ್ರಂಪ್ 'ದಿ ಗೋಲ್ಡ್ ಕಾರ್ಡ್' ಎಂಬ ಹೊಸ ಕಾರ್ಯನಿರ್ವಾಹಕ ಆದೇಶಕ್ಕೂ ಸಹಿ ಹಾಕಿದ್ದಾರೆ. ಇದು ಅಸಾಧಾರಣ ಸಾಮರ್ಥ್ಯವಿರುವ ಮತ್ತು ಅಮೆರಿಕಕ್ಕೆ ಬೆಂಬಲ ನೀಡಲು ಬದ್ಧವಾಗಿರುವ ವಿದೇಶಿಯರಿಗಾಗಿ ಹೊಸ ವೀಸಾ ಮಾರ್ಗವನ್ನು ಸೃಷ್ಟಿಸುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಅಮೆರಿಕದ ಖಜಾನೆಗೆ 1 ಮಿಲಿಯನ್ ಡಾಲರ್​ (ವೈಯಕ್ತಿಕ) ಅಥವಾ 2 ಮಿಲಿಯನ್ ಡಾಲರ್​ (ಕಾರ್ಪೊರೇಟ್ ಪ್ರಾಯೋಜಕತ್ವ) ಪಾವತಿಸುವ ವ್ಯಕ್ತಿಗಳಿಗೆ ತ್ವರಿತ ವೀಸಾ ಪ್ರಕ್ರಿಯೆ ಮತ್ತು ಗ್ರೀನ್ ಕಾರ್ಡ್‌ಗೆ ದಾರಿ ಸಿಗಲಿದೆ.

ಭಾರತೀಯರ ಮೇಲೆ ಆಗುವ ಪರಿಣಾಮ

ಈ ಕ್ರಮವು ಭಾರತೀಯ ತಂತ್ರಜ್ಞಾನ ವೃತ್ತಿಪರರ ಮೇಲೆ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಿದೆ. ಎಚ್-1ಬಿ ವೀಸಾಗಳು ಸಾಮಾನ್ಯವಾಗಿ ಮೂರು ವರ್ಷಗಳ ಅವಧಿಗೆ ಮಾನ್ಯವಾಗಿದ್ದು, ಮತ್ತೊಮ್ಮೆ ಮೂರು ವರ್ಷಗಳವರೆಗೆ ನವೀಕರಣ ಮಾಡಬೇಕು. ಆದರೆ, ದಶಕಗಳಿಂದ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಭಾರತೀಯರು ಈ ಹೊಸ ಶುಲ್ಕದಿಂದಾಗಿ ಅಮೆರಿಕದಲ್ಲಿ ತಮ್ಮ ವಾಸ್ತವ್ಯ ಮುಂದುವರಿಸಲು ಸಾಧ್ಯವಾಗುವುದೇ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಕಂಪನಿಗಳು ವಾರ್ಷಿಕವಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ನಿರಾಕರಿಸಿದರೆ, ಅನೇಕರು ತಾಯ್ನಾಡಿಗೆ ಮರಳಬೇಕಾದ ಪರಿಸ್ಥಿತಿ ಎದುರಾಗಬಹುದು.

Tags:    

Similar News