ಚುನಾವಣಾ ಹೊತ್ತಲ್ಲಿ ʼಟ್ರಬಲ್ ಶೂಟರ್ʼ ಗೇ ಟ್ರಬಲ್ | ತನಿಖೆ ವಿಳಂಬವೇಕೆ? CBIಗೆ ಹೈಕೋರ್ಟ್ ಪ್ರಶ್ನೆ
"ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ.ಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ.49.13ರಷ್ಟು ಹೆಚ್ಚಳವಾಗಿದೆ" ಎಂದು ವಕೀಲರು ಹೈಕೋರ್ಟ್ಗೆ ತಿಳಿಸಿದರು.;
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ವಿಚಾರವಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ಸುಮಾರು ನಾಲ್ಕು ವರ್ಷಗಳಾದರೂ ಅಂತಿಮ ವರದಿ ಏಕೆ ಸಲ್ಲಿಸಿಲ್ಲ ಎಂದು ಶುಕ್ರವಾರ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಡಿಕೆಶಿ ಮೇಲಿನ ತನಿಖೆಗೆ ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಈಗಿನ ಸರ್ಕಾರ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ.
ಈ ವೇಳೆ ಅಡಿಗ ಅವರು, ಸಿಬಿಐ ಇನ್ನೂ ವಿಚಾರಣೆ ಆರಂಭಿಸಿಲ್ಲವೇ? ಸಿಬಿಐ ಯಾವಾಗ ಎಫ್ಐಆರ್ ದಾಖಲಿಸಿತು? ಎಂದು ಸಿಬಿಐ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿದೆ.
ನ್ಯಾಯಾಧೀಶರ ಪ್ರಶ್ನೆಗಳಿಗೆ ಉತ್ತರಿಸಿದ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, "2020ರ ಅಕ್ಟೋಬರ್ 3ರಂದು ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಆರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದರು. ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು" ಎಂದು ವಕೀಲರು ವಿವರಿಸಿದರು.
"ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ.ಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ.49.13ರಷ್ಟು ಹೆಚ್ಚಳವಾಗಿದೆ" ಎಂದು ವಕೀಲರು ಹೈಕೋರ್ಟ್ಗೆ ತಿಳಿಸಿದರು.
"ಸಾಮಾನ್ಯ ನಿಯಮಗಳ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಹೊಂದಿದೆಯೇ? ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದಾದರೆ ಸಿಬಿಐ ದಾಖಲಿಸಿರುವ ಎಫ್ಐಆರ್ ಗತಿ ಏನು? ಜನರಲ್ ಕ್ಲಾಸಸ್ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು" ಎಂದು ಕೋರಿದರು.
ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏ.18ಕ್ಕೆ ಮುಂದೂಡಿತು. ರಾಜ್ಯ ಸರ್ಕಾರದ ಪರ ವಿಶೇಷ ಪ್ರತಿನಿಧಿಯಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಅಡ್ವಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಮತ್ತು ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲ ಉದಯ ಹೊಳ್ಳ, ಯತ್ನಾಳ್ ಪರ ವೆಂಕಟೇಶ್ ಪಿ.ದಳವಾಯಿ ಹಾಜರಿದ್ದರು.