ಕೂಡಲಸಂಗಮ | ಪ್ರವಾಹ ಭೀತಿ ಸದ್ಯಕ್ಕಿಲ್ಲ, ಪರಿಸ್ಥಿತಿ ನಿಭಾಯಿಸಲು ಸಜ್ಜು: ಜಿಲ್ಲಾಡಳಿತ
ʻʻಈಗಲೇ ಪ್ರವಾಹ ಬರುತ್ತದೆ ಎಂದು ರೈತರು ಹಾಗೂ ಜನಸಾಮಾನ್ಯರು ಭಯಪಡುವ ಅಗತ್ಯ ಇಲ್ಲ. ಮುಂದೆ ಪ್ರವಾಹ ಪರಿಸ್ಥಿತಿ ಉಂಟಾದರೂ ಅದನ್ನು ನಿಭಾಯಿಸಲು ಮುಂಜಾಗೃತ ಕ್ರಮವಾಗಿ ಏನೇನು ವ್ಯವಸ್ಥೆ ಮಾಡಿಕೊಳ್ಳಬೇಕೋ ಅದೆಲ್ಲವನ್ನು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಜನತೆ ಭಯಪಡುವ ಅಗತ್ಯವಿಲ್ಲ" ಎಂದು ಜಿಲ್ಲಾಧಿಕಾರಿ ಕೆ ಎಂ ಜಾನಕಿ ಅವರು ಹೇಳಿದ್ದಾರೆ.
ಕಳೆದ 15 ದಿನಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದು, ಅದರಿಂದಾಗಿ ಪ್ರವಾಹ ಭೀತಿ ಉಂಟಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ʼದ ಫೆಡರಲ್ ಕರ್ನಾಟಕʼಕ್ಕೆ ಅವರು ಈ ಹೇಳಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬರುವುದು ಹೊಸದಲ್ಲ. ವಿಚಿತ್ರ ಏನು ಅಂದರೆ ಈ ಭಾಗದಲ್ಲಿ ಹೆಚ್ಚಾಗಿ ಮಳೆ ಆಗದಿದ್ದರೂ ಮಹಾರಾಷ್ಟ್ರದ ಕೃಷ್ಣಾಕೊಳ್ಳದಲ್ಲಿ 120-130 ಮಿ.ಮೀ. ಮಳೆ ಅಂದರೆ 10-15 ದಿನಗಳ ಕಾಲ ನಿರಂತರವಾಗಿ ಮಳೆ ಸುರಿದರೂ ಇಲ್ಲಿ ಪ್ರವಾಹ ಉಂಟಾಗುತ್ತದೆ. ಆಲಮಟ್ಟಿ ಜಲಾಶಯದಿಂದ ಪ್ರತಿ ದಿನ 180 ಟಿಎಂ ಸಿ ನೀರನ್ನು ಹರಿಬಿಡುತ್ತಿರುವುದರಿಂದ ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗುವುದಿಲ್ಲ ಎನ್ನಲಾಗುತ್ತಿದ್ದು, ಕೆಲವು ಮಾಧ್ಯಮಗಳು ಪ್ರವಾಹ ಭೀತಿ ಎದುರಾಗಿದೆ ಎಂದು ಸುದ್ದಿ ಬಿತ್ತರಿಸಿರುವುದರಿಂದ ಜನರಲ್ಲಿ ಆತಂಕ ಮೂಡಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೆ ಎಂ ಜಾನಕಿ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು,ʻʻಈಗಲೇ ಪ್ರವಾಹ ಬರುತ್ತದೆ ಎಂದು ಭಯ ಪಡುವ ಅಗತ್ಯ ಇಲ್ಲ. ಹಾಗಂತ ಈ ಬಾರಿ ಪ್ರವಾಹ ಉಂಟಾಗುವುದೇ ಇಲ್ಲ ಅಂತಲೂ ನಾವು ಹೇಳುವುದಿಲ್ಲ. ಮುಂದೆ ಒಂದು ವೇಳೆ ಪ್ರವಾಹ ಉಂಟಾದರೂ ನಾವು ಮುಂಜಾಗೃತ ಕ್ರಮವಾಗಿ ಏನೇನೆಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕೋ ಅದೆಲ್ಲವನ್ನು ಮಾಡಿಕೊಳ್ಳುತ್ತಿದ್ದೇವೆ. ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ಬೋಟ್‌ಗಳನ್ನು ಸುಸ್ಥಿತಿಯಲ್ಲಿಡುವುದು, ನಾವಿಕರ ಮಾಹಿತಿ ಪಡೆಯುವುದು, ರಕ್ಷಣಾ ಸಾಮಗ್ರಿಗಳ ವಿವರ, ತರಬೇತಿ ಪಡೆದ ನುರಿತ ಸಿಬ್ಬಂದಿಯ ಮಾಹಿತಿ,.. ಸೇರಿದಂತೆ ಎಲ್ಲವನ್ನು ನಾವು ಮುಂಜಾಗ್ರತಾ ಕ್ರಮವಾಗಿ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಸಂದರ್ಭದಲ್ಲೂ ಪ್ರವಾಹ ಬಂದರೂ ಯಾವುದೇ ಜೀವಹಾನಿಯಾಗದಂತೆ ನೋಡಿಕೊಳ್ಳಲು ಸಿದ್ದರಾಗಿದ್ದೇವೆ" ಎಂದು ತಿಳಿಸಿದರು.
ಇದೇ ವಿಚಾರವಾಗಿ ʻದ ಫೆಡರಲ್ ಕರ್ನಾಟಕʼದೊಂದಿಗೆ ಉತ್ತರ ಕರ್ನಾಟಕ ಭಾಗದ ನದಿಗಳ ಬಗ್ಗೆ ಪರಿಣಿತರಾಗಿರುವ ಸಜ್ಜನ್ ಅವರು ಮಾತನಾಡಿದ್ದು, ಸದ್ಯಕ್ಕೆ ಪ್ರವಾಹದಂತಹ ಯಾವುದೇ ತೊಂದರೆ ಇಲ್ಲ, ಈ ಭಾಗದಲ್ಲಿ ಯಾವಾಗಲೂ ಪ್ರವಾಹ ಉಂಟಾಗುವುದು ಅಗಷ್ಟ್ ತಿಂಗಳದಲ್ಲಿ. ಈಗ ಸುರಿಯುತ್ತಿರುವುದು ವಾಡಿಕೆ ಮಳೆ ಅಷ್ಟೇ. ಈ ಭಾಗದಲ್ಲಿ ಹೆಚ್ಚಾಗಿ ಮಳೆ ಆಗದಿದ್ದರೂ ಮಹಾರಾಷ್ಟ್ರದಲ್ಲಿ ಮಳೆ ಜೋರಾದರೆ ಪ್ರವಾಹ ಭೀತಿ ಎದುರಾಗುತ್ತದೆ ಎನ್ನುವುದು ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಸ್ಥರ ಗೋಳು. ಮಹಾರಾಷ್ಟ್ರದ ನೀರನ್ನು ಕೊಯ್ನಾ ಡ್ಯಾಂ ಮೂಲಕ ಕೃಷ್ಣಾ ನದಿಗೆ ಬಿಡುವುದರಿಂದ ಅಲ್ಲಿ ವರುಣನ ಅರ್ಭಟ ಜೋರಾದರೆ ಇಲ್ಲಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರುವಾಗುತ್ತದೆ. ಕೃಷ್ಣ ನದಿಯಿಂದ 2.5 ರಿಂದ 3 ಲಕ್ಷ ಕ್ಯೂಸೆಕ್ ನೀರು ಹರಿದುಬಂದರೆ ಮಾತ್ರ ಪ್ರವಾಹ ಉಂಟಾಗುತ್ತದೆ. ಮಲಪ್ರಭಾಗೆ 30,000 ಕ್ಯೂಸೆಕ್ ನೀರು ಹರಿಯಬೇಕು. ಬೆಣ್ಣೆಹಳ್ಳ, ತುಪ್ರಿಹಳ್ಳ ತುಂಬಿಹರಿದಾಗ ಪ್ರವಾಹ ಉಂಟಾಗುತ್ತದೆ. ಇನ್ನು ಘಟಪ್ರಭಾ ನದಿಯು 40,000 ಕ್ಯೂಸೆಕ್ ನೀರು ಹರಿದಾಗ ಮಾತ್ರ ಪ್ರವಾಹ ಉಂಟಾಗುತ್ತದೆ ಎಂದು ಮಾಹಿತಿ ನೀಡಿದರು.