ಡೆಲಿವರಿ ಬಾಯ್‌ಗೆ ಅವಮಾನ, ಕನ್ನಡಿಗರ ವಿರುದ್ಧ ದ್ವೇಷ: ಬೆಂಗಳೂರಿನಲ್ಲಿ ತ್ರಿಪುರಾ ವ್ಯಕ್ತಿ ಬಂಧನ

ರಂಜಿತ್ ಹಿಂದಿಯಲ್ಲಿಯೇ ಮಾತನಾಡಿ, ನಿಂದನೆ ನಿಲ್ಲಿಸುವಂತೆ ಕೇಳಿಕೊಂಡರೂ, ಸರ್ಕಾರ್ ತಮ್ಮ ವರ್ತನೆ ಬದಲಾಯಿಸದೆ ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಲು ಶುರುಮಾಡಿದ್ದ ಎಂದು ಆರೋಪಿಸಲಾಗಿದೆ.;

Update: 2025-07-18 14:09 GMT

ಡೆಲಿವರಿ ಬಾಯ್‌ಗೆ ನಿಂದಿಸಿ, ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ತ್ರಿಪುರಾ ಮೂಲದ ಮಸಾಜ್ ಥೆರಪಿಸ್ಟ್ ಒಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಬಂಧಿತ ವ್ಯಕ್ತಿಯನ್ನು ಹೊಂಗಸಂದ್ರದ ಬೇಗೂರು ಮುಖ್ಯ ರಸ್ತೆಯ ನಿವಾಸಿ, ಮಿಥುನ್ ಸರ್ಕಾರ್ (35) ಎಂದು ಗುರುತಿಸಲಾಗಿದೆ.

ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ 29 ವರ್ಷದ ಡೆಲಿವರಿ ಬಾಯ್ ರಂಜಿತ್, ಸರ್ಕಾರ್ ವಿಳಾಸ ಸರಿಯಾಗಿ ಸಿಗದ ಕಾರಣ ಬೆಳಿಗ್ಗೆ 930ಕ್ಕೆ ಕರೆ ಮಾಡಿದ್ದರು. ವಿಳಾಸದ ಬಗ್ಗೆ ಕೇಳಿದಾಗ, ಸರ್ಕಾರ್ ಹಿಂದಿಯಲ್ಲಿ ಉತ್ತರಿಸಿದ್ದ. ರಂಜಿತ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಸಿಟ್ಟಾಗಿ ನಿಂದಿಸಲು ಶುರುಮಾಡಿದ್ದ. ರಂಜಿತ್ ಹಿಂದಿಯಲ್ಲಿಯೇ ಮಾತನಾಡಿ, ನಿಂದನೆ ನಿಲ್ಲಿಸುವಂತೆ ಕೇಳಿಕೊಂಡರೂ, ಸರ್ಕಾರ್ ತಮ್ಮ ವರ್ತನೆ ಬದಲಾಯಿಸದೆ ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಅವಮಾನಕಾರಿಯಾಗಿ ಮಾತನಾಡಲು ಶುರುಮಾಡಿದ್ದ ಎಂದು ಆರೋಪಿಸಲಾಗಿದೆ. "ಕರ್ನಾಟಕದಲ್ಲಿ ವಾಸಿಸುವ ಶೇ. 70ರಷ್ಟು ಹಿಂದಿ ಭಾಷಿಕರು ರಾಜ್ಯ ತೊರೆದರೆ, ಇಲ್ಲಿನ ಸ್ಥಳೀಯರ ಬಳಿ ಟೊಮೆಟೊ ಖರೀದಿಸಲೂ 10 ರೂಪಾಯಿಗಳೂ ಇರುವುದಿಲ್ಲ" ಎಂದು ಸರ್ಕಾರ್ ಹೇಳಿರುವುದಾಗಿ ರಂಜಿತ್ ದೂರಿದ್ದಾರೆ.

ಕನ್ನಡಿಗರ ಆಹಾರ ಪದ್ಧತಿ ಬಗ್ಗೆ ಗೇಲಿ

ನಿಂದನೆ ಮುಂದುವರೆಸಿದ್ದ ಸರ್ಕಾರ್, ಕನ್ನಡಿಗರ ಆಹಾರ ಪದ್ಧತಿಯನ್ನೂ ಸಹ ಗೇಲಿ ಮಾಡಿದ್ದಾನೆ. ರಂಜಿತ್ ಜೊತೆ ಮಾತನಾಡುವಾಗ, "ರಾಗಿ ಮುದ್ದೆ, ಸಾಂಬಾರ್, ಇಡ್ಲಿ ಮತ್ತು ದೋಸೆ ಬಿಟ್ಟು ನಿಮಗೆ ಏನು ಗೊತ್ತಿದೆ? ವಾರಕ್ಕೊಮ್ಮೆ ಚಿಕನ್ ತಿನ್ನುವ ಜನಗಳು" ಎಂದು ಜರೆದಿದ್ದ. "ನಾವು ಬಂಗಾಳಿ ಜನರು, ಭಾಯ್. ನಾವು ತಿನ್ನುವ ರೀತಿಯನ್ನು ನೀವು ಕನ್ನಡದ ಜನರು ಊಹಿಸಲೂ ಸಾಧ್ಯವಿಲ್ಲ," ಎಂದು ಸರ್ಕಾರ್ ಹೇಳಿರುವುದಾಗಿ ರಂಜಿತ್ ದೂರಿನಲ್ಲಿ ತಿಳಿಸಿದ್ದಾರೆ.

ಸರ್ಕಾರ್ ತನ್ನ ಕರೆಯನ್ನು ರೆಕಾರ್ಡ್ ಮಾಡಲು ಮತ್ತು ಟವರ್ ಲೊಕೇಶನ್ ಪಡೆಯುವಂತೆ ಸವಾಲು ಹಾಕಿದ್ದ. ವಿಳಾಸ ಕೇಳಿದಾಗಲೆಲ್ಲಾ "ಬೊಮ್ಮನಹಳ್ಳಿ, ಬೇಗೂರು" ಎಂದು ಮಾತ್ರ ಹೇಳಿ ಯಾಮಾರಿಸಿದ್ದ ಎಂದು ರಂಜಿತ್ ದೂರಿದ್ದಾರೆ. ರಂಜಿತ್ ನಾಲ್ಕು ಬಾರಿ ಕರೆ ಮಾಡಿದಾಗಲೂ ಸರ್ಕಾರ್ ನಿಂದಿಸಿದ್ದ.

ರಂಜಿತ್, ಈ ಸಂಭಾಷಣೆಯ ದಾಖಲೆಯನ್ನು ಕನ್ನಡಪರ ಸಂಘಟನೆಗಳ ಸದಸ್ಯರಿಗೆ ಕಳುಹಿಸಿ, ಅವರ ಸಹಾಯದಿಂದ ಸರ್ಕಾರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಸರ್ಕಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196 (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 352 (ಶಾಂತಿಭಂಗಕ್ಕೆ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ನಂತರ ಸರ್ಕಾರ್‌ನನ್ನು ಬಂಧಿಸಲಾಯಿತು. ವಿಚಾರಣೆ ವೇಳೆ, ಸರ್ಕಾರ್ ತನಗೆ ಕನ್ನಡ ಮಾತನಾಡಲು ಬರುತ್ತದೆ ಎಂದಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಸಿಟ್ಟಿನಲ್ಲಿ ಹೀಗೆ ಮಾತನಾಡಿದೆ ಎಂದು ಹೇಳಿಕೊಂಡಿದ್ದಾರೆ.

Similar News