Mysore MUDA Scam | ಮುಡಾ ಹಗರಣ ಹೊರಗೆಡವಿದ್ದಕ್ಕೆ ಮೈಸೂರು ಡಿಸಿಗೆ ವರ್ಗಾವಣೆ ಶಿಕ್ಷೆ?

ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿರುವ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರ ಹೆಸರೂ ಇದ್ದು, ಮುಡಾ ಲೇಔಟ್‌ ಅಕ್ರಮದ ಕುರಿತು ದಿಟ್ಟ ತನಿಖೆ ನಡೆಸಿ ಸತ್ಯಾಂಶ ಹೊರತಂದಿದ್ದ ಅಧಿಕಾರಿಯನ್ನು ಹೀಗೆ ದಿಢೀರನೇ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.;

Update: 2024-07-05 11:29 GMT

Mysore MUDA Scam | ರಾಜ್ಯ ಸರ್ಕಾರ ಶುಕ್ರವಾರ ವರ್ಗಾವಣೆ ಮಾಡಿರುವ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರ ಹೆಸರೂ ಇದ್ದು, ಮುಡಾ ಲೇಔಟ್‌ ಅಕ್ರಮದ ಕುರಿತು ದಿಟ್ಟ ತನಿಖೆ ನಡೆಸಿ ಸತ್ಯಾಂಶ ಹೊರತಂದಿದ್ದ ಅಧಿಕಾರಿಯನ್ನು ಹೀಗೆ ದಿಢೀರನೇ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು, ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು ಐದು ಸಾವಿರ ಕೋಟಿಯಷ್ಟು ಬೃಹತ್‌ ಮೊತ್ತದ ಅಕ್ರಮ ನಡೆದಿದೆ ಎನ್ನಲಾಗುತ್ತಿರುವ ಈ ಹಗಗರಣದಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೇ ಕೇಳಿಬಂದಿದೆ. ಮುಖ್ಯವಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಅವರ ವಿರುದ್ಧ ಗಂಭೀರ ಆರೋಪ ಎದುರಾಗಿದ್ದು, ಪ್ರತಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿವೆ.

ಮುಡಾ ಹಗರಣ ಹೊರಗೆಡವಿದ್ದ ಡಿಸಿ ರಾಜೇಂದ್ರ

ಮುಡಾ ಆಯುಕ್ತರು ಮತ್ತು ಮೈಸೂರು ಜಿಲ್ಲಾಧಿಕಾರಿಗಳ ನಡುವೆ ಈ ಪ್ರಕರಣದ ವಿಷಯದಲ್ಲಿ ಕಳೆದ ಒಂದು ವರ್ಷದಿಂದಲೇ ಪತ್ರ ವ್ಯವಹಾರ ನಡೆಯುತ್ತಿತ್ತು. ದ್ಯಾವನೂರು ಲೇಔಟ್‌ ನಿರ್ಮಾಣ ಮತ್ತು ಅದಕ್ಕಾಗಿ ಭೂಮಿ ನೀಡಿರುವ ಜಮೀನು ಮಾಲೀಕರಿಗೆ ಪರಿಹಾರ, ಬದಲಿ ನಿವೇಶನ ವಿಷಯದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ದೂರುಗಳನ್ನು ಪರಿಗಣಿಸಿದ್ದ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು, ಪ್ರಕರಣದ ವಿಷಯದಲ್ಲಿ ಮುಡಾ ಆಯುಕ್ತರಿಗೆ ಹದಿನೈದಕ್ಕೂ ಹೆಚ್ಚು ಪತ್ರ ಬರೆದಿದ್ದರು. ಕಳೆದ ಫೆ.8 ರಿಂದ ಅವರು ಮುಡಾ ಆಯುಕ್ತರಿಗೆ ಸ್ಪಷ್ಟನೆ ಕೇಳಿ ನಿರಂತರವಾಗಿ ಪತ್ರ ಬರೆದಿದ್ದರು. ಅಲ್ಲದೆ ಅಕ್ರಮದ ಕುರಿತು ವಿವರಗಳೊಂದಿಗೆ ನಗರಾಭಿವೃದ್ಧಿ ಕಾರ್ಯದರ್ಶಿಗೂ ಪತ್ರ ಬರೆದಿದ್ದರು. 

ಹಾಗೇ, ಭಾರೀ ಅಕ್ರಮ ನಡೆದಿರುವ ಬಗ್ಗೆ ಸರ್ಕಾರಕ್ಕೆ ವಿವರ ವರದಿಯನ್ನೂ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಈ ಸರಣಿ ಪತ್ರಗಳು ಮತ್ತು ವರದಿಯ ಹಿನ್ನೆಲೆಯಲ್ಲಿಯೇ ಇದೀಗ ಪ್ರಕರಣ ಬೆಳಕಿಗೆ ಬಂದಿದೆ.

ಮುಡಾ ನಿವೇಶನಗಳ ಹಂಚಿಕೆ ಬಗ್ಗೆ ತನಿಖೆ ನಡೆಸಬೇಕಿದೆ. ತನಿಖೆ ಮುಗಿಯುವವರೆಗೂ ನಿವೇಶನ ಹಂಚಿಕೆಯನ್ನು ರದ್ದುಪಡಿಸಿ ಎಂದೂ ಜಿಲ್ಲಾಧಿಕಾರಿ ರಾಜೇಂದ್ರ ಅವರು ಮುಡಾ ಆಯುಕ್ತರಿಗೆ ಸೂಚಿಸಿದ್ದರು. ಆದರೆ, ಮುಡಾ ಆಯುಕ್ತರು ಆ ಪತ್ರಗಳಿಗೆ, ಸೂಚನೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದು ಅಕ್ರಮದ ಕುರಿತು ತನಿಖೆಗೆ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು.

ಆ ಪತ್ರ ಬೆಳಕಿಗೆ ಬಂದ ಮರುದಿನವೇ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ವಿಷಯದಲ್ಲಿ ಪಾರದರ್ಶಕವಾಗಿಲ್ಲ. ಜೊತೆಗೆ ಅಕ್ರಮವನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬದ್ಧತೆ ಕೂಡ ಸರ್ಕಾರಕ್ಕೆ ಇಲ್ಲ ಎಂಬುದಕ್ಕೆ ಈ ವರ್ಗಾವಣೆಯೇ ನಿದರ್ಶನ. ಜಿಲ್ಲಾಧಿಕಾರಿಗಳ ವರ್ಗಾವಣೆಯ ಮೂಲಕ ಪ್ರಕರಣದ ಇನ್ನಷ್ಟು ಮಾಹಿತಿ ಹೊರಬೀಳದಂತೆ ಸರ್ಕಾರ ತಡೆಯುತ್ತಿದೆ. ಮುಖ್ಯಮಂತ್ರಿಗಳು ಹೇಳಿಕೊಳ್ಳುವಂತೆ ಪ್ರಕರಣದಲ್ಲಿ ಅವರ ತಪ್ಪಿಲ್ಲದೇ ಇದ್ದಲ್ಲಿ ಜಿಲ್ಲಾಧಿಕಾರಿಯನ್ನು ಯಾಕೆ ವರ್ಗಾವಣೆ ಮಾಡಿದರು? ಪಾರದರ್ಶಕವಾಗಿ ತನಿಖೆ ಎದುರಿಸಿ ತಾವು ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವ ಅವಕಾಶ ಇರುವಾಗ ಸಿಎಂ ಸಿದ್ದರಾಮಯ್ಯ ಹೀಗೆ ಏಕಾಏಕಿ ಜಿಲ್ಲಾಧಿಕಾರಿಯನ್ನು ವರ್ಗಾವಣೆಯ ಶಿಕ್ಷೆಗೆ ಗುರಿ ಮಾಡುವ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ? ಎಂದು ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ.

ಜಿಲ್ಲಾಧಿಕಾರಿ ರಾಜೇಂದ್ರ ಅವರು ಬರೆದ ಪತ್ರದ ಪ್ರಮುಖ ಅಂಶಗಳು

  •  50:50 ಅನುಪಾತದಲ್ಲಿ ನಿವೇಶನ ನೀಡಲು ಕೈಗೊಂಡ ನಿರ್ಣಯ ನಿಯಮಬಾಹಿರವೆಂದು ರದ್ದುಪಡಿಸಿರುವುದರಿಂದ 50:50ರ ಅನುಪಾತದಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಕ್ರಯಪತ್ರಗಳ ನೋಂದಣಿಯನ್ನು ತಕ್ಷಣದಿಂದಲ್ಲೇ ಸ್ಥಗಿತಗೊಳಿಸಿ.
  • ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅನುಷ್ಠಾನಗೊಳಿಸುವ ಮುನ್ನ ಸರ್ಕಾರದ ಅನುಮೋದನೆ ಪಡೆದು ಕಾರ್ಯಗತಗೊಳಿಸಬೇಕಾಗಿದ್ದು, ಆಯುಕ್ತರು ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ.
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಂಡ ನಿಯಮಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನ್ವಯ ಮಾಡಿಕೊಳ್ಳಲು ಆಯುಕ್ತರಿಗೆ ಇರುವ ಅಧಿಕಾರದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿರುವುದಿಲ್ಲ.
  • ನ್ಯಾಯಾಲಯದ ಆದೇಶಗಳನ್ನು ಒಪ್ಪಲು ಆಗದೇ ಇದ್ದ ಸಂದರ್ಭಗಳಲ್ಲಿ ಅದನ್ನು ಪ್ರಶ್ನಿಸಲು ಅವಕಾಶಗಳಿದ್ದರೂ ಪ್ರಶ್ನೆ ಮಾಡಿಲ್ಲ.
  • ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ, ಬದಲಿ ನಿವೇಶನ ಮಂಜೂರಾತಿ, ತುಂಡು ಜಾಗ ಹಂಚಿಕೆ ಮತ್ತು ಭೂ ಪರಿಹಾರವಾಗಿ ಜಾಗಗಳನ್ನು ನೀಡಿರುತ್ತಾರೆ ಎಂಬ ಆರೋಪಕ್ಕೆ ಆಯುಕ್ತರು ಯಾವುದೇ ವಿವರಣೆಯನ್ನು ನೀಡಿಲ್ಲ.
  • ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದರ ಬಗ್ಗೆ ದೂರುದಾರರು ಹಲವಾರು ನಿದರ್ಶನಗಳನ್ನು ನೀಡಿದ್ದು, ಇದರ ಬಗ್ಗೆ ವಿವರಣೆಗಳಿರುವುದಿಲ್ಲ.
Tags:    

Similar News