ಎಂಆರ್‌ಪಿಎಲ್‌ನಲ್ಲಿ ವಿಷಾನಿಲ ದುರಂತ: ಇಬ್ಬರು ಕಾರ್ಮಿಕರ ಸಾವು

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನ ದೀಪ್‌ ಚಂದ್ರ(33) ಹಾಗೂ ಕೇರಳದ ಬಿಜಿಲ್‌ ಪ್ರಸಾದ್(33) ಮೃತಪಟ್ಟವರು. ಅವರನ್ನು ರಕ್ಷಿಸಲು ಯತ್ನಿಸಿದ ಗದಗದ ವಿನಾಯಕ ಅಸ್ವಸ್ಥಗೊಂಡಿದ್ದು ಅವರ ಸ್ಥಿತಿ ಸ್ಥಿರವಾಗಿದೆ.;

Update: 2025-07-12 09:38 GMT

ಮಂಗಳೂರಿನ ಎಂಆರ್‌ಪಿಎಲ್‌ ಘಟಕ 

ಮಂಗಳೂರು ರಿಫೈನರಿ ಅಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್) ಘಟಕದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಎಂಆರ್‌ಪಿಎಲ್‌ನ ತೈಲ ಸಂಗ್ರಹ ಟ್ಯಾಂಕ್ (Oil Movement Area) ವಿಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಶನಿವಾರ ಬೆಳಿಗ್ಗೆ, ಇಬ್ಬರು ಫೀಲ್ಡ್ ಆಪರೇಟರ್‌ಗಳಾದ ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನ ದೀಪ್ ಚಂದ್ರ ಭರ್ತಿಯಾ (33) ಮತ್ತು ಕೇರಳದ ಬಿಜಿಲ್‌ ಪ್ರಸಾದ್ (33) ಅವರು ತೈಲ ಸಂಗ್ರಹ ಟ್ಯಾಂಕ್‌ನ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಅನಿಲದ ಸೋರಿಕೆ ಸಂಭವಿಸಿದೆ. ಅನಿಲಕ್ಕೆ ಸಿಲುಕಿ ಇಬ್ಬರೂ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ರಕ್ಷಿಸಲು ಪ್ರಯತ್ನಿಸಿದ ಮತ್ತೊಬ್ಬ ಸಹೋದ್ಯೋಗಿ, ಗದಗ ಮೂಲದ ವಿನಾಯಕ ಅವರು ಕೂಡ ಅನಿಲದ ಪರಿಣಾಮಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದಾರೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಮೃತಪಟ್ಟ ಕಾರ್ಮಿಕರು ಕರ್ನಾಟಕದ ಹೊರಗಿನವರು ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡದ ಹೆಚ್ಚುವರಿ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ದುರಂತದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. 

Tags:    

Similar News