ಇಂದು ರೈತ ಹುತಾತ್ಮ ದಿನ | ಕಾಂಗ್ರೆಸ್-ಬಿಜೆಪಿ ಆಟ, ರೈತ ನಾಯಕರ ಮೇಲಾಟ; ಹಳ್ಳ ಹಿಡಿಯುತ್ತಿದೆ ‘ಮಹದಾಯಿ’ ಹೋರಾಟ

ಕಾಂಗ್ರೆಸ್- ಬಿಜೆಪಿ ನಾಯಕರು ಹೋರಾಟದಿಂದ ದೂರ ಉಳಿದಿದ್ದಾರೆ. ರೈತರಲ್ಲೂ ಬಣ ರಾಜಕಾರಣ ಹೆಮ್ಮರವಾಗಿ ಬೆಳೆದಿದೆ. ಇದೆಲ್ಲದರ ಪರಿಣಾಮ ಒಂದಿಡೀ ಹೋರಾಟ ಹಳ್ಳ ಹಿಡಿಯುತ್ತ ಸಾಗುವ ಅನುಮಾನ ಮೂಡಿದೆ.;

Update: 2025-07-21 02:00 GMT

ಜುಲೈ 21(ಇಂದು) ರೈತ ಹುತಾತ್ಮ ದಿನ. ಇದಕ್ಕಾಗಿ ಬಂಡಾಯದ ನಾಡು ಗದಗ ಜಿಲ್ಲೆಯ ನರಗುಂದ ಹಾಗೂ ಧಾರವಾಡ ನವಲಗುಂದದಲ್ಲಿ ಸಿದ್ಧತೆಗಳು ನಡೆದಿವೆ. ನಾಡಿನ ಮೂಲ ಮೂಲೆಗಳಿಂದ ರೈತ ನಾಯಕರ ದಂಡೇ ನರಗುಂದದತ್ತ ಧಾವಿಸುತ್ತಿದೆ. ಆದರೆ, 2024ರಲ್ಲಿ ಶುರುವಾದ ಮಹದಾಯಿ ಹೋರಾಟ ದಡ ಸೇರಿಲ್ಲ ಎಂಬುದು ದಿಟ.

ಹೋರಾಟವನ್ನೇ ಅಸ್ತ್ರ ಮಾಡಿಕೊಂಡ ಸಿ.ಸಿ. ಪಾಟೀಲರು ಶಾಸಕರಾದರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಎಚ್.ಕೆ ಪಾಟೀಲರು ರಾಜಕೀಯ ಮೈಲೇಜ್ ತೆಗೆದುಕೊಂಡರು. ಆದರೀಗ ಪರಿಸ್ಥಿತಿ ತಿರುವು-ಮುರುವು.ಕಾಂಗ್ರೆಸ್- ಬಿಜೆಪಿ ನಾಯಕರು ಹೋರಾಟದಿಂದ ದೂರ ಉಳಿದಿದ್ದಾರೆ. ರೈತರಲ್ಲೂ ಬಣ ರಾಜಕಾರಣ ಹೆಮ್ಮರವಾಗಿ ಬೆಳೆದಿದೆ. ಇದೆಲ್ಲದರ ಪರಿಣಾಮ ಒಂದಿಡೀ ಹೋರಾಟ ಹಳ್ಳ ಹಿಡಿಯುತ್ತ ಸಾಗುವ ಅನುಮಾನ ಮೂಡಿದೆ.

ಎಂಬತ್ತರದ ದಶಕದಿಂದ...

ಅದು 1980 ಜು.21ರ ಸಮಯ. ಕಂದಾಯ, ಪೊಲೀಸ್ ಹಾಗೂ ಸರ್ಕಾರದ ವಿರುದ್ಧವೇ ರೈತರು ರೊಚ್ಚಿಗೆದ್ದಿದ್ದರಿಂದ ರಾಜ್ಯ ರಾಜಕಾರಣವೇ ಬುಡಮೇಲಾಯಿತು. ದೇಶದ ಭೂಪಟದಲ್ಲಿ ರೈತರ ಚಳವಳಿಗೆ ಪ್ರೇರಣೆಯಾಗಿ ರಾಜ್ಯಾದ್ಯಂತ ರೈತ ಸಂಘಗಳು ಉದಯಗೊಂಡವು. ಈಗ ಇದೇ ಜು.21ರಂದು 45ನೇ ವರ್ಷದ ರೈತ ಹುತಾತ್ಮ ದಿನಾಚರಣೆ ನಡೆಯುತ್ತಿದೆ. ಈ ಬಾರಿಯ ರೈತ ಹುತಾತ್ಮ ದಿನಾಚರಣೆಗೆ ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜತೆಗೆ ಖಾಸಗಿ ಜಾಗದಲ್ಲಿ ಹುತಾತ್ಮ ರೈತನ ಅಡಿಗಲ್ಲು ಸಮಾರಂಭಕ್ಕೆ ಸಕಲ ಸಿದ್ಧತೆಯೂ ಮಾಡಿಕೊಳ್ಳಲಾಗಿದೆ. 

ಏತನ್ಮಧ್ಯೆ ಜು. 21ರೊಳಗೆ ಸ್ಮಾರಕ ಬಳಿಯಿರುವ ಶೆಡ್ ತೆರವುಗೊಳಿಸುವಂತೆ ಜಿಲ್ಲಾ ನ್ಯಾಯಾಲಯದಿಂದ ಆದೇಶ ಬಂದಿದೆ. ಕೆಲ ರಾಜಕೀಯ ನಾಯಕರು ಹೋರಾಟವನ್ನೇ ಹೈಜಾಕ್ ಮಾಡಲು ಕಸರತ್ತು ನಡೆಸುತ್ತಿದ್ದು, ಈ ಬಾರಿಯ ನರಗುಂದ ರೈತ ಬಂಡಾಯ  ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ.

ಹರಿಯದ ನೀರಿಗೆ ಕಂದಾಯದಿಂದ ಬಂಡಾಯ ಆರಂಭ

ರೈತರ ಜಮೀನುಗಳಿಗೆ ನೀರು ಹರಿಯದಿದ್ದರೂ 1980ರ ದಶಕದಲ್ಲಿ ಅಂದಿನ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಡ್ಡಾಯವಾಗಿ ನೀರಾವರಿ ಅಭಿವೃದ್ಧಿ ಕರ ಪಾವತಿಸುವಂತೆ ಆದೇಶಿಸಿತ್ತು. ಈ ಅವೈಜ್ಞಾನಿಕ ರೈತವಿರೋಧಿ ಆದೇಶ ರದ್ದತಿಗೆ ಆಗ್ರಹಿಸಿ ತಾಲೂಕಿನ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಅಂದಿನ ತಹಶೀಲ್ದಾರ್ ಎಸ್.ಎಫ್. ವರೂರ ಎಂಬುವರು ಕಚೇರಿ ಬಂದ್ ಮಾಡಲು ನಿರಾಕರಿಸಿದ್ದರಿಂದ ಮಾತಿಗೆ ಮಾತು ಬೆಳೆದು ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ರೈತರ ಮೇಲೆ ಲಾಠಿ ಪ್ರಹಾರ ಪ್ರಯೋಗಿಸಿದ್ದಲ್ಲದೇ ಆಕಸ್ಮಿಕವಾಗಿ ಹಾರಿಸಿದ ಗುಂಡು ತಾಲೂಕಿನ ಚಿಕ್ಕನರಗುಂದ ಗ್ರಾಮದ 24 ವರ್ಷದ ವೀರಪ್ಪ ಕಡ್ಲಿಕೊಪ್ಪ ಎಂಬ ರೈತನ ಎದೆಗೆ ತಾಗಿ ಸ್ಥಳದಲ್ಲೇ ಮೃತಪಟ್ಟರು.

ನವಲಗುಂದ ತಾಲೂಕಿನ ಅಳಗವಾಡಿಯಲ್ಲಿ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಆಗ ಪ್ರತಿಭಟನೆ ಮತ್ತಷ್ಟು ತೀವ್ರ ಕಾವು ಪಡೆಯುತ್ತಿದ್ದಂತೆ ಪೋಲಿಸರು ಅಶ್ರುವಾಯು ಪ್ರಯೋಗಿಸಿದರು. ಅದಕ್ಕೆ ಪ್ರತಿಯಾಗಿ ರೈತರು ಕೂಡ ಕಲ್ಲು ತೂರಾಟ, ಮೇಳಿ ಕಾಳಗ (ಕೃಷಿ ಪರಿಕರ) ಹಿಡಿದು ಸಿಕ್ಕ-ಸಿಕ್ಕವರನ್ನು ಥಳಿಸಿದರು. ಘಟನೆಯಲ್ಲಿ ತಹಶೀಲ್ದಾರ್ ಎಸ್.ಎಫ್. ವರೂರ್ ಅವರ ಕಿವಿ ತುಂಡಾಗಿ ನೇತಾಡತೊಡಗಿತ್ತು. ಪಿಎಸ್‌ಐ ಸಿಕಂದರ್ ಪಟೇಲ ಸೇರಿ ಕೆಲವು ಪೊಲೀಸ್ ಸಿಬ್ಬಂದಿ ಕೂಡ ಹುತಾತ್ಮರಾಗಿ ಕಾಂಗ್ರೆಸ್ ಸರ್ಕಾರದ ಅವನತಿಗೆ ಕಾರಣವಾಯಿತು.

ಅಂದಿನಿಂದ ಪ್ರತಿವರ್ಷ ಜು. 21ರಂದು ರೈತ ಹುತಾತ್ಮ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ಅಸಲಿ ಮಾಲೀಕ ಯಾರು...?

1980ರಲ್ಲಿ ನಿರ್ಮಿಸಿರುವ ಹುತಾತ್ಮ ರೈತನ ಸ್ಮಾರಕ ಬಳಿಯಿರುವ ಮಹದಾಯಿ ಹೋರಾಟ ಶೆಡ್ ತೆರವುಗೊಳಿಸಿಕೊಡುವಂತೆ ಹೇಮಾವತಿ ಗೋವಿಂದಪ್ರಸಾದ ಪಾಂಡೆ ಎಂಬುವರು 2021ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಇದೇ ಜು.21 ರೊಳಗಾಗಿ ಪೊಲೀಸರ ರಕ್ಷಣೆಯೊಂದಿಗೆ ಶೆಡ್ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ಸೂಚಿಸಿದೆ. ಹುತಾತ್ಮ ರೈತನ ಸಣ್ಣ ಸ್ಮಾರಕ ನಿರ್ಮಿಸಿಕೊಡುವಂತೆ ಹಲವಾರು ರೈತಪರ, ಕನ್ನಡಪರ ಸಂಘಟನೆಗಳು ಸುಮಾರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿವೆ. ಹೇಮಾವತಿ ಎಂಬುವರು ತಮ್ಮ ಸ್ವಂತ ನಿವೇಶನವನ್ನು ಯಾವುದೇ ಖಾಸಗಿ ವ್ಯಕ್ತಿಗಳ ಹೋರಾಟಕ್ಕೆ ಬಳಸಿಕೊಳ್ಳದಂತೆ ಪಟ್ಟು ಹಿಡಿದಿದ್ದಾರೆ.

ಇನ್ನುಳಿದ 5 ಗುಂಟೆ ನಿವೇಶನಕ್ಕೆ ಮಾಲೀಕರಾಗಿರುವ ನಾಲ್ವರ ಪೈಕಿ ಇಬ್ಬರು ಸ್ಮಾರಕ ನಿರ್ಮಾಣಕ್ಕೆ ತಮ್ಮ ಅರ್ಧ ಗುಂಟೆ ಜಮೀನು ನೀಡಲು ಮುಂದಾದರೆ ಇನ್ನಿಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಮಾತ್ರ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಸ್ವಯಂಪ್ರೇರಿತ ನಿವೇಶನ ನೀಡುವವರ ಮನವೊಲಿಸಿ ಸಾಕಷ್ಟು ಸಮಸ್ಯೆಗಳ ನಡುವೆ ಜು.21 ರಂದು ಅಡಿಗಲ್ಲು ಸಮಾರಂಭ ನೆರವೇರಿಸಿ ಈ ಭಾಗದ ರೈತರ ಬಹುದಿನಗಳ ಬೇಡಿಕೆಯ ಅನುಕಂಪ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ.

ಕಳಸಾ-ಬಂಡೂರಿ ನಾಲೆ ಜೋಡಣೆಗಾಗಿ ಕಳೆದ 10 ವರ್ಷಗಳಿಂದ ಮಹದಾಯಿ ಹೋರಾಟಗಾರರ ವೇದಿಕೆ ನಿರ್ಮಿಸಿರುವ ಜಾಗ ಖಾಸಗಿ ಸ್ವತ್ತಾಗಿದ್ದು, ಅಲ್ಲಿ ಹಾಕಿರುವ ಶೆಡ್ ತೆರವಿಗೆ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ.

ಜುಲೈ 21ರಂದು ರೈತ ಹುತಾತ್ಮ ದಿನದ ಸಿದ್ಧತೆಯ ನಡುವೆ ಈ ತೀರ್ಪು ಬಂದಿರುವುದು ವೇದಿಕೆ (ಶೆಡ್)ಯು ಈಗ ಕೇಂದ್ರ ಬಿಂದುವಾಗಿದೆ.

ಹುತಾತ್ಮರ ಸ್ಮಾರಕಕ್ಕೆ ಎಚ್ಕೆ ಅಡಿಗಲ್ಲು ಇಂದು

ರೈತ ಬಂಡಾಯದಲ್ಲಿ ಮಡಿದ ಚಿಕ್ಕನರಗುಂದದ ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ಅವರ ಸ್ಮರಣಾರ್ಥ ಜುಲೈ 21ರಂದು ಪಟ್ಟಣದಲ್ಲಿ ಸ್ಮಾರಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ. ನರಗುಂದ ರೈತ ಬಂಡಾಯ ನಡೆದು 45 ವರ್ಷ ಗತಿಸುತ್ತ ಬಂದಿದೆ. ಆದರೆ ಹುತಾತ್ಮ ರೈತ ಸ್ಮರಣಾರ್ಥ ಇದುವರೆಗೆ ಸ್ಮಾರಕ ಭವನ ನಿರ್ಮಾಣವಾಗಿಲ್ಲ. ಇದಕ್ಕಾಗಿ ನಿವೇಶನ ಹಾಗೂ ಅನುದಾನ ಒದಗಿಸುವಂತೆ 2024ರ ಅಕ್ಟೋಬರ್ 11ರಂದು ಮಹದಾಯಿಗಾಗಿ ಮಹಾವೇದಿಕೆ ವತಿಯಿಂದ ಸಂಚಾಲಕ ಶಂಕರಪ್ಪ ಅಂಬಲಿ ನೇತೃತ್ವದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಹೋರಾಟಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲ ನಿವೇಶನ ಒದಗಿಸಿ ವೀರಗಲ್ಲು ಹಾಗೂ ಸ್ಮಾರಕ ಭವನ ನಿರ್ಮಿಸಿಕೊಡುವ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈಬಿಡಲಾಗಿತ್ತು. ಕೊಟ್ಟ ಮಾತಿನಂತೆ ಸಚಿವರು ಈಗ ಭೂಮಿಪೂಜೆ ನೆರವೇರಿಸಲಿದ್ದಾರೆ.

ಇಬ್ಬರು ರೈತರಿಂದ ನಿವೇಶನದ ಒಪ್ಪಿಗೆ ಪತ್ರ

ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತನ ವೀರಗಲ್ಲು ನಿರ್ಮಾಣಕ್ಕೆ ಸ್ವಂತ ನಿವೇಶನ ದಾನ ನೀಡುತ್ತೇವೆ ಎಂದು ದೇಸಾಯಿಗೌಡ ಪಾಟೀಲ, ಸಲೀಂ ಮೇಗಲಮನಿ ಅವರು ಮುಂದೆ ಬಂದಿದ್ದಾರೆ.

ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ರೈತರು, ಹೋರಾಟಗಾರರು, ರಾಜಕಾರಣಿಗಳು ಆಗಮಿಸಿ ಮಾಲಾರ್ಪಣೆ ಸಲ್ಲಿಸುವುದು ವಾಡಿಕೆ. ಅರ್ಭಾಣ ಗ್ರಾಮದ ಸರ್ವೇ ನಂ. 155ರ ಸೈಟ್ ದೇಸಾಯಿಗೌಡ ಪಾಟೀಲ, ಸಲೀಂಸಾಬ್ ಮೇಗಲಮನಿ, ಶಂಕರಗೌಡ ವೀರನಗೌಡ್ರ ಹಾಗೂ ಮಲ್ಲಯ್ಯ ಕುಲಕರ್ಣಿ ಅವರ ಹೆಸರಿನಲ್ಲಿ ಜಂಟಿಯಾಗಿ ದಾಖಲಿರುವ 5,625 ಚದರ ಅಡಿ ನಿವೇಶನದಲ್ಲಿ ದೇಸಾಯಿಗೌಡ ಪಾಟೀಲ, ಸಲೀಂಸಾಬ್ ಮೇಗಲಮನಿ ತಮ್ಮ ಹಿಸ್ಸಾದಲ್ಲಿ ಬರುವ 550 ಚದರ ಅಡಿ ಜಾಗದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ನಿರ್ಮಾಣಕ್ಕೆ ನಮ್ಮಿಬ್ಬರ ಸಂಪೂರ್ಣ ಒಪ್ಪಿಗೆ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ನರಗುಂದ ತಹಸೀಲ್ದಾರ್‌ಗೆ ಒಪ್ಪಿಗೆಯ ಕರಾರು ಪತ್ರ ಹಸ್ತಾಂತರಿಸಿದ್ದಾರೆ.

ಹೋರಾಟದ ವೇದಿಕೆಗೆ ರಕ್ಷಣೆ ಒದಗಿಸಲಿ

ನರಗುಂದ ಪಟ್ಟಣದ ಮಹದಾಯಿ, ಕಳಸಾ-ಬಂಡೂರಿ ಹೋರಾಟ ವೇದಿಕೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮಹದಾಯಿ ಹೋರಾಟಗಾರರು ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ವರ್ಷ ನಾವು ಹೋರಾಟ ನಡೆಸುತ್ತಿರುವ ಜಾಗದ ಮಾಲೀಕರು ಹೋರಾಟದ ವೇದಿಕೆ ತೆರವುಗೊಳಿಸುವಂತೆ ಸೂಚಿಸಿದ್ದರು. ನಾವು ಅವರಿಗೆ ಗೌರವಪೂರ್ವಕವಾಗಿ ಮಹದಾಯಿ ಯೋಜನೆ ಯಶಸ್ವಿಯಾದ ಕೂಡಲೇ ವೇದಿಕೆ ತೆರವುಗೊಳಿಸುವುದಾಗಿ ತಿಳಿಸಿದ್ದೇವೆ. ಈ ನಡುವೆ ಜಾಗದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ, ವೇದಿಕೆ ತೆರವಿಗೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಹೋರಾಟದ ಸ್ಥಳಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ರೈತಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಮನವಿ ಮಾಡಿದ್ದಾರೆ.

ಧರಣಿ ಸ್ಥಳದ ಶೆಡ್ ತೆರವುಗೊಳಿಸಲು ಆಗ್ರಹ

ಮಹದಾಯಿ ಹೋರಾಟ ವೇದಿಕೆಯನ್ನು ಕಳೆದ 10 ವರ್ಷಗಳಿಂದ ನಮ್ಮ ಸ್ವಂತ ನಿವೇಶನದಲ್ಲಿ ನಿರ್ಮಿಸಿಕೊಂಡು ರೈತರು ಧರಣಿ ನಡೆಸುತ್ತಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ನಮ್ಮ ನಿವೇಶನ ಖಾಲಿ ಮಾಡಿಸಿಕೊಡುವಂತೆ ಹೇಮಲತಾ ಗೋವಿಂದಪ್ರಸಾದ ಪಾಂಡೆ ಎಂಬುವವರು ಅಗತ್ಯದ ದಾಖಲಾತಿಗಳೊಂದಿಗೆ ನರಗುಂದ ತಹಸೀಲ್ದಾರ್‌ಗೆ ಕೋರಿದ್ದಾರೆ.

ನರಗುಂದದ ಕೋರ್ಟ್ ಸರ್ಕಲ್‌ನಲ್ಲಿರುವ ಅರ್ಭಾಣ ಗ್ರಾಮದ ಸರ್ವೇ ನಂ-155ರ ನಿವೇಶನದಲ್ಲಿ ಕೆಲ ರೈತರು ಅನೇಕ ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ದಬ್ಬಾಳಿಕೆ ಮಾಡುತ್ತಾರೆ. ಇದರ ವಿರುದ್ಧ 2021ರಲ್ಲಿ ಜಿಲ್ಲಾ ಪ್ರಧಾನ ಹಿರಿಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಹೇಮಲತಾ ಅವರಿಗೆ ಸೇರಿದ ಜಾಗ ಬಿಟ್ಟುಕೊಡುವಂತೆ 2023ರಲ್ಲಿ ಕೋರ್ಟ್ ಆದೇಶ ನೀಡಿದೆ. ಆದರೆ, ಕೆಲವರು ಮತ್ತೆ ದಬ್ಬಾಳಿಕೆ ಮಾಡಲು ಬಂದಿದ್ದರು. ಈ ಕುರಿತು ಮತ್ತೆ ನ್ಯಾಯಾಲಯ ಮೊರೆ ಹೋಗಿದ್ದೆವು. ಅಂತಿಮವಾಗಿ ಜುಲೈ 7ರಂದು ತೀರ್ಪು ನೀಡಿರುವ ನ್ಯಾಯಾಲಯವು ಜು.21ರ ಒಳಗಾಗಿ ನಿವೇಶನದಲ್ಲಿರುವ ಶೆಡ್ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ ಎಂದಿದ್ದಾರೆ.

 ರೈತ ಹುತಾತ್ಮ ದಿನದಂದು ‘ನವಲಗುಂದ ಚಲೋ’

ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಜು. 21ರಂದು ಕರ್ನಾಟಕ ರಾಜ್ಯ ರೈತ ಸಂ ಮತ್ತು ಹಸಿರು ಸೇನೆ ವತಿಯಿಂದ ‘ನವಲಗುಂದ ಚಲೋ’ ಸಂಯುಕ್ತ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ನವಲಗುಂದದ ಹುತಾತ್ಮ ಸ್ತಂಭಕ್ಕೆ ಗೌರವ ಸಲ್ಲಿಸಿದ ನಂತರ ಬಾಗಲಕೋಟೆಗೆ ತೆರಳಿ ಬಹಿರಂಗ ಸಮಾವೇಶ ನಡೆಸಲಾಗುವುದು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ರೈತ ಸಂದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ವೋದಯ ಕರ್ನಾಟಕ ಪಕ್ಷದ ಚಾಮರಸ ಮಾಲಿಪಾಟೀಲ, ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಇತರರು ಭಾಗವಹಿಸಲಿದ್ದಾರೆ. ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಅನುಷ್ಠಾನ, ಬೆಳೆ ಹಾನಿ ಪರಿಹಾರ ಬಿಡುಗಡೆ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತರ ಕಾಯಮಾತಿ, ರೈತರ ಬೆಳೆಸಾಲ, ಮಹಿಳೆಯರ ಸ್ವ ಸಹಾಯ ಸಂಘಗಳ ಸಾಲ ಮನ್ನಾ, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಕೇಂದ್ರ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಸರ್ಕಾರಗಳು ರಾಜಕೀಯ ಬಿಟ್ಟು ಕಾನೂನು ತೊಡಕು ಸರಿಪಡಿಸಬೇಕು. ರೈತ ಪರ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಪಂಚ ಗ್ಯಾರಂಟಿ ಎನ್ನುತ್ತ ರೈತರನ್ನು ಮರೆತಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಈರಣ್ಣ ಬಳಿಗೇರ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ನರಗುಂದ ರೈತ ಬಂಡಾಯ ನಡೆದು ಸುದೀರ್ಘ 45 ವರ್ಷ ಗತಿಸುತ್ತ ಬಂದಿದೆ. ಆದರೆ ಹುತಾತ್ಮ ರೈತ ಸ್ಮರಣಾರ್ಥ ಇದುವರೆಗೆ ವೀರಗಲ್ಲು ಸ್ಮಾರಕ ಭವನ ನಿರ್ಮಾಣವಾಗದಿರುವುದು ಖೇದಕರ ಸಂಗತಿ. ಹುತಾತ್ಮ ರೈತನ ಸ್ಮಾರಕ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ಒದಗಿಸಿಕೊಡುವಂತೆ 2024ರ ಅಕ್ಟೋಬರ್ 11 ರಂದು ಮಹದಾಯಿಗಾಗಿ ಮಹಾವೇದಿಕೆ ವತಿಯಿಂದ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಕೊಟ್ಟ ಭರವಸೆಯನ್ನು ಜುಲೈ 21 ರಂದು ಈಡೇರಿಸುತ್ತಿದ್ದಾರೆ ಎಂದು ಮಹದಾಯಿಗಾಗಿ ಮಹಾ ವೇದಿಕೆ ಸಂಚಾಲಕ ಶಂಕರಪ್ಪ ಅಂಬಲಿ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ರೈತರ ಮನವಿ ಅತ್ಯಂತ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೊಳ್ಳುವಂತೆ ಸೂಚಿಸಲಾಗಿತ್ತು.

ಹುತಾತ್ಮ ರೈತನ ಸ್ಮಾರಕ ನಿರ್ಮಾಣಕ್ಕೆ ಪ್ರಾರಂಭದಲ್ಲಿ ನಾಲ್ವರು ರೈತರು ನಿವೇಶನ ನೀಡಲು ಸಹಮತಿ ವ್ಯಕ್ತಪಡಿಸಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ದೇಸಾಯಿಗೌಡ ಪಾಟೀಲ ಹಾಗೂ ಸಲೀಂಸಾಬ ಮೇಗಲಮನಿ ಅವರು 155 ಚದರ ಅಡಿ ನಿವೇಶನ ನೀಡಲು ಮುಂದಾಗಿದ್ದಾರೆ. ಲಭ್ಯ ಜಾಗೆಯಲ್ಲಿ ಸಚಿವರು ಭೂಮಿಪೂಜೆ ನೆರವೇರಿಸಿ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. 45 ವರ್ಷಗಳ ಸುದೀರ್ಘ ಹೋರಾಟದ ಪರಿಶ್ರಮವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

Tags:    

Similar News