ತೂಕದಲ್ಲಿ ಮೋಸ | ಮಂಡ್ಯದ ಮೂರು ಆಭರಣ ಮಳಿಗೆಗಳಿಗೆ ಬೀಗ

ಮಹಾಲಕ್ಷ್ಮಿ ಬ್ಯಾಂಕ‌ರ್ ಅಂಡ್ ಜ್ಯುವೆಲರ್ಸ್, ಮಹೇಂದ್ರ ಜ್ಯುವೆಲರ್ಸ್ ಹಾಗೂ ಲಕ್ಷ್ಮಿ ಜ್ಯುವೆಲರ್ಸ್ ಮಾಲೀಕರಿಗೆ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ, ನೋಟಿಸ್ ಜಾರಿ ಮಾಡಿದ್ದಾರೆ.

Update: 2024-10-25 11:36 GMT
ಸಾಂದರ್ಭಿಕ ಚಿತ್ರ

ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಮೂರು ಆಭರಣ ಮಳಿಗೆಗಳಿಂದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಗುರುವಾರ ವಶಪಡಿಸಿಕೊಂಡ ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಮಳಿಗೆಗಳಿಗೆ ಬೀಗ ಜಡಿದಿದೆ.

ಮಹಾಲಕ್ಷ್ಮಿ ಬ್ಯಾಂಕ‌ರ್ ಅಂಡ್ ಜ್ಯುವೆಲರ್ಸ್, ಮಹೇಂದ್ರ ಜ್ಯುವೆಲರ್ಸ್ ಹಾಗೂ ಲಕ್ಷ್ಮಿ ಜ್ಯುವೆಲರ್ಸ್ ಮಾಲೀಕರಿಗೆ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ, ನೋಟಿಸ್ ಜಾರಿ ಮಾಡಿದ್ದಾರೆ.

'ಈ ಮಳಿಗೆಗಳಲ್ಲಿದ್ದ ತೂಕದ ಯಂತ್ರಗಳಲ್ಲಿ ಒಂದರಿಂದ ಒಂದೂವರೆ ಗ್ರಾಂನಷ್ಟು ವ್ಯತ್ಯಾಸ ಬರುತ್ತಿತ್ತು. ಅಂದರೆ, ಒಂದು ಗ್ರಾಂ ಚಿನ್ನದ ಮಾರುಕಟ್ಟೆ ಮೌಲ್ಯ ಪ್ರಸ್ತುತ ಏಳು ಸಾವಿರವಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಮೋಸವಾಗುತ್ತಿತ್ತು. ಪರವಾನಗಿ ಪಡೆಯದ ಮತ್ತು ನವೀಕರಣ ಮಾಡಿಸಿಕೊಳ್ಳದ ಕಾರಣಗಳೂ ಸೇರಿದಂತೆ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ನಿಯಮಿತವಾಗಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ' ಎಂದು ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದ್ದಾರೆ. 

ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಳ್ಳಿ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ಕಾರ್ಯಾಚರಣೆ ನಡೆಸಿದಾಗ 6 ಕ್ವಿಂಟಲ್ ಅಕ್ಕಿ ಹಾಗೂ 6.5 ಕ್ವಿಂಟಲ್ ರಾಗಿ ತೂಕದಲ್ಲಿ ವ್ಯತ್ಯಾಸ ಕಂಡು ಬಂತು. ಕಾರ್ಯದರ್ಶಿ ವಿರುದ್ಧ ಸ್ಥಳೀಯರಿಂದ ದೂರುಗಳಿದ್ದು, ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.

ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ಎಂ, ದೊಡ್ಡಲಿಂಗಣ್ಣರವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್ ವಿಜಯಲಕ್ಷ್ಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:    

Similar News