ಯಾದಗಿರಿಯಲ್ಲಿ ವಿದ್ಯುತ್ ತಂತಿ ತಗುಲಿ ಒಂದೇ ಗ್ರಾಮದ ಮೂವರು ರೈತರು ದುರ್ಮರಣ
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯುತ್ ತಂತಿ ತಗುಲಿ ಮೂವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಗ್ರಾಮದಲ್ಲಿ ತೀವ್ರ ಶೋಕವನ್ನುಂಟು ಮಾಡಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
ಸದಬ ಗ್ರಾಮದವರಾದ ಈರಪ್ಪ (40), ದೇವು (30), ಮತ್ತು ಸುರೇಶ್ (22) ಮೃತ ದುರ್ದೈವಿಗಳು. ಇವರು ಅಗತೀರ್ಥ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ನೀರಾವರಿಗಾಗಿ ಅಳವಡಿಸಿದ್ದ ಮೋಟಾರ್ ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ. ತೀವ್ರ ವಿದ್ಯುತ್ ಆಘಾತದಿಂದ ಮೂವರು ರೈತರೂ ಪ್ರಾಣ ಕಳೆದುಕೊಂಡಿದ್ದಾರೆ.
ವಿಷಯ ತಿಳಿದ ಸ್ಥಳೀಯರು ಮತ್ತು ಕುಟುಂಬಸ್ಥರು ನೆರವಿಗೆ ಧಾವಿಸಿದರೂ, ಅಷ್ಟರಲ್ಲಾಗಲೇ ಪ್ರಾಣ ಹೋಗಿತ್ತು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಬಸ್ಥರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿ. ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.