ಮೂವರು ಬಿಜೆಪಿ ಸಂಸದರು ಸಂಪರ್ಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಬಿಜೆಪಿಯ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಆದ ಬೆನ್ನಲ್ಲೇ, ಇನ್ನೂ ಮೂವರು ಬಿಜೆಪಿ ಸಂಸದರು ಕಾಂಗ್ರೆಸ್ ಸೇರುವ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ್ದಾರೆ.;
ಕಲಬುರಗಿ: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, "ಬಿಜೆಪಿಯ ಮೂವರು ಸಂಸದರು ಕಾಂಗ್ರೆಸ್ ಸೇರಲು ಬಯಸಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಕೆ ಶಿವಕುಮಾರ್, “ಸದ್ಯಕ್ಕೆ ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಮಾತ್ರವಲ್ಲದೆ ಇನ್ನೂ ಹಲವು ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನ ಪಡುತ್ತಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರನ್ನು ಪಕ್ಷಕ್ಕೆ ಸೇರಲು ಆಹ್ವಾನ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಸದಾನಂದ ಗೌಡರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ” ಎಂದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹಾಗೂ ಬಿಜೆಪಿಯ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾದ ಒಂದು ದಿನದ ಬಳಿಕ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ಹೊರ ಬಿದ್ದಿದೆ.
ಇತ್ತೀಚಿನವರೆಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕೆ ಜಯಪ್ರಕಾಶ್ ಹೆಗ್ಡೆ ಮತ್ತು ಇಬ್ಬರು ಮಾಜಿ ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ ಮತ್ತು ಎಂಪಿ ಕುಮಾರಸ್ವಾಮಿ ಅವರು ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.