ಸರ್ಕಾರಿ ನೌಕರರಿಗೆ ಬೆದರಿಕೆ ಪ್ರಕರಣ : 'ಕೆಜಿ' ಕೋಡ್‌ ವರ್ಡ್‌ ಮೂಲಕ ಹಣ ವಸೂಲಿ

ಆರೋಪಿ ನಿಂಗಪ್ಪ13 ವ್ಯಾಲೆಟ್‍ಗಳಲ್ಲಿ ಸುಮಾರು 4.92 ಕೋಟಿ ರೂಪಾಯಿಗಳಷ್ಟು ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.;

Update: 2025-07-03 15:57 GMT

ಅಬಕಾರಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ  ಇಲಾಖೆಯ ನೌಕರರು ಮತ್ತು ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು 'ಕೆಜಿ' (ಕೆಜಿ) ಕೋಡ್‌ ವರ್ಡ್‌ ಮೂಲಕ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 

ಪ್ರಕರಣದ ತನಿಖೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರಿಗೆ ಹಗರಣದ ಒಂದೊಂದೇ ಸತ್ಯಗಳು ಬಹಿರಂಗವಾಗುತ್ತಿದ್ದು,  ಪ್ರಮುಖ ಆರೋಪಿ ನಿಂಗಪ್ಪ ಅಲಿಯಾಸ್ ನಿಂಗಪ್ಪ ಸಾವಂತ ಮತ್ತವರ ತಂಡವು ಹಣ ವಸೂಲಿಗೆ ಬಳಕೆ ಮಾಡುತ್ತಿದ್ದ ಕೋಡ್‌ವರ್ಡ್‌ ಅನ್ನು ಬಹಿರಂಗಗೊಂಡಿದೆ. ಕೆಜಿ ಕೋರ್ಡ್‌ ಮೂಲಕ ಹಣ ವಸೂಲಿ ಮಾಡಲಾಗುತ್ತಿದ್ದು, ಲಕ್ಷಾಂತರ ರು. ವಸೂಲಿ ಮಾಡಿರುವ ಆರೋಪಿಯು ಯಾವ ಅಧಿಕಾರಿಯಿಂದ ಎಷ್ಟು ಹಣ ವಸೂಲಿ ಮಾಡಲಾಗಿದೆ ಎಂಬುದನ್ನು ಕಲೆ ಹಾಕುತ್ತಿದೆ. 

ಈ ನಡುವೆ, ಹಗರಣದಲ್ಲಿ ಭಾಗಿಯಾಗಿರುವ ಎಸ್‌ಪಿಯಾಗಿದ್ದ ಶ್ರೀನಾಥ್‌ ಜೋಶಿ ಐಪಿಎಸ್‌ ಆಗಿರುವ ಕಾರಣ ಲೋಕಾಯುಕ್ತ ಪೊಲೀಸರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಲ್ಲದೇ, ಯುಪಿಎಸ್‌ಸಿಗೂ ಮಾಹಿತಿ ರವಾನಿಸಲಾಗಿದೆ. ನಿಂಗಪ್ಪ ಮತ್ತು ಶ್ರೀನಾಥ ಜೋಶಿ ವಿರುದ್ಧ  ಹೊರಗಡೆಯಿಂದ ಯಾವುದೇ ದೂರು ಅರ್ಜಿಯು ಸ್ವೀಕೃತವಾಗಿಲ್ಲ. ಆದರೆ, ಲೋಕಾಯುಕ್ತರು ತಮ್ಮ ಗಮನಕ್ಕೆ ಬಂದ ಕೂಡಲೇ ದೂರು ದಾಖಲಿಸಿ ಮೇಲ್ಕಂಡ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ. 

4.92 ಕೋಟಿ ರೂಪಾಯಿ ಕ್ರಿಪ್ಟೋದಲ್ಲಿ ಹೂಡಿಕೆ

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ವ್ಯಾಪ್ತಿಯ ಇತರೆ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿ 'ನನಗೆ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಪರಿಚಯ ಇದೆ' ಎಂದು ಹೇಳಿಕೊಂಡು ಅವರುಗಳೊಂದಿಗೆ ಆತ್ಮೀಯತೆ ಬೆಳೆಸಿ ಹಣಕ್ಕೆ ಬೇಡಿಕೆಯಿಟ್ಟು ಸುಲಿಗೆ ಮಾಡುತ್ತಿದ್ದ. ಬೆಂಗಳೂರು ಲೋಕಾಯುಕ್ತ ಕಚೇರಿಗೆ ಆಗಾಗ್ಗೆ ಭೇಟಿ ನೀಡಿ, ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ಜತೆ ನಿಕಟ ಸಂಪರ್ಕದಲ್ಲಿದ್ದ. ಈ ಇಬ್ಬರು ಸೇರಿ ಸರ್ಕಾರಿ ಅಧಿಕಾರಿಗಳಿಗೆ ಅಕ್ರಮವಾಗಿ ಆಸ್ತಿ ಹೊಂದಿರುವ ಬಗ್ಗೆ ಬೆದರಿಸಿ, ಅವರಿಂದ ಲಂಚದ ಹಣವನ್ನು ಕೋಡ್ ವರ್ಡ್ ‘ಕೆಜಿ’ ಮುಖಾಂತರ ವಸೂಲು ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. 

ಇದಲ್ಲದೇ, ಅಕ್ರಮವಾಗಿ ಸಂಗ್ರಹಿಸಿದ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದು, ನಿಂಗಪ್ಪನ ಮೊಬೈಲ್ ಪರಿಶೀಲನೆಯಲ್ಲಿಗೊತ್ತಾಗಿದೆ. ಈ ವೇಳೆ ಸುಮಾರು 24 ಕ್ರಿಪ್ಟೋ ವ್ಯಾಲೆಟ್‍ಗಳಿದ್ದು, ಅವುಗಳಲ್ಲಿ 13 ವ್ಯಾಲೆಟ್‍ಗಳಲ್ಲಿ ಸುಮಾರು 4.92 ಕೋಟಿ ರೂಪಾಯಿಗಳಷ್ಟು ಹಣ ಹೂಡಿಕೆ ಮಾಡಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. 

ನ್ಯಾಯಾಲಯದಿಂದ ತಡೆ

ಐಪಿಎಸ್‌ ಅಧಿಕಾರಿ ಶ್ರೀನಾಥ ಜೋಶಿ ಆರೋಪಿ ನಿಂಗಪ್ಪ ಸಂಪರ್ಕದಲ್ಲಿ ಇರುವುದು ತನಿಖೆ ಸಮಯದಲ್ಲಿ ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು, ಅವರ ಮನೆಯನ್ನು ಶೋಧನೆ ಮಾಡಲಾಗಿದೆ. ಅಲ್ಲದೇ, ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ, ಹೈಕೋರ್ಟ್‌ನಿಂದ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ನಡುವೆ, ಆರೋಪಿ ನಿಂಗಪ್ಪನು ಸಹ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ತನಿಖೆಗೆ ಹಿನ್ನಡೆಯಾಗಿದೆ.

ಶ್ರೀನಾಥ ಜೋಶಿ ಆರೋಪಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಇವರು ಅಖಿಲ ಭಾರತೀಯ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದು, ಇವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನು ಜರುಗಿಸಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ. 


Tags:    

Similar News