ಮುನಿರತ್ನ ಪ್ರಕರಣ | ಸಾಕ್ಷಿ ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ: ದೂರು ದಾಖಲು

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ಸಾಕ್ಷ್ಯ ಹೇಳದಂತೆ ಆತನ ಬೆಂಬಲಿಗರು ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.;

Update: 2024-09-22 10:19 GMT

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ಸಾಕ್ಷ್ಯ ಹೇಳದಂತೆ ಆತನ ಚೇಲಾಗಳು ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದರೆ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇವೆ. ನಿಮ್ಮ ವಂಶವನ್ನೇ ಸರ್ವನಾಶ ಮಾಡುತ್ತೇವೆಂದು ಸಾಕ್ಷಿಗಳ ಮನೆಗೆ ನುಗ್ಗಿ, ಬಿಜೆಪಿ ಕಾರ್ಯಕರ್ತೆ ಸುನಂದಮ್ಮ ಮತ್ತು ಮುನಿರತ್ನ ಚೇಲಾಗಳ ಗುಂಪು ಬೆದರಿಕೆ ಹಾಕಿದೆ ಎಂದು ಪ್ರಕರಣದ ಸಂತ್ರಸ್ತೆಯ ಪುತ್ರ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಲಂಚ ಬೇಡಿಕೆ: ಸಿಬ್ಬಂದಿ ಆಡಿಯೋ ವೈರಲ್

ಈ ನಡುವೆ, ಘನ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚಲುವರಾಜು ಅವರಿಗೆ ಬೆದರಿಕೆ, ಜಾತಿ ನಿಂದನೆ ಮಾಡಿರುವ ಆರೋಪವನ್ನೂ ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಲಕ್ಷ ಲಕ್ಷ ಹಣ ಲಂಚ ನೀಡುವಂತೆ ಶಾಸಕರ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿರುವ ಆಡಿಯೋ ವೈರಲ್ ಆಗಿದೆ.

ದೇವರಾಜ ಅರಸು ನಿಗಮದ ಸಾರಥಿ ಯೋಜನೆಯಡಿ ವಾಹನ ನೀಡಲು 1 ಲಕ್ಷ ರೂ. ಲಂಚ ನೀಡುವಂತೆ ಶಾಸಕ ಮುನಿರತ್ನ ಕಚೇರಿ ಸಿಬ್ಬಂದಿ ಉಷಾ ಎಂಬುವರು ಕೇಳಿದ್ದಾರೆ ಎಂದು ಯೋಜನೆಯ ಫಲಾನುಭವಿಯೊಬ್ಬರು ಕಾಂಗ್ರೆಸ್ ಮುಖಂಡರೊಬ್ಬರ ಮುಂದೆ ಅಳಲು ತೋಡಿಕೊಂಡಿದ್ದಾರೆ.

3 ಲಕ್ಷ ರೂ. ಮೌಲ್ಯದ ವಾಹನ ನೀಡಲು 1 ಲಕ್ಷ ರೂ. ಲಂಚ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಲೇ 20 ಸಾವಿರ ರೂ. ಕೊಟ್ಟಿದ್ದೇನೆ. ವಾಹನ ಕೊಡಬೇಕೆಂದರೆ ಇನ್ನೂ 80 ಸಾವಿರ ಕೊಡಿ ಎಂದು ಮುನಿರತ್ನ ಕಚೇರಿ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ ಎಂದು ಫಲಾನುಭವಿ ಮತ್ತು ಕಾಂಗ್ರೆಸ್ ಮುಖಂಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

Tags:    

Similar News