WOMEN'S DAY SPECIAL | ಆಗಲ್ಲ ಅಂತ ಮನೇಲಿ ಕೂತ್ರೆ ಹೊಟ್ಟೆ ತುಂಬುತ್ತಾ?
ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಪೌರಕಾರ್ಮಿಕ ಮಹಿಳೆ ಜ್ಯೋತಿ ಅವರೊಂದಿಗೆ ದ ಫೆಡರಲ್ ಕರ್ನಾಟಕ ನಡೆಸಿದ ಸಂವಾದ ಇಲ್ಲಿದೆ.;
ಮನೆಯಲ್ಲಿ ನಾನೊಬ್ಬಳೇ ದುಡಿಯಬೇಕು, ಮೂರು ಮಕ್ಕಳನ್ನು ಸಾಕಬೇಕು. ಗಂಡ ಪೇಂಟಿಂಗ್ ಕೆಲಸ ಮಾಡುತ್ತಾರೆ. ಕೆಲಸ ಸಿಕ್ಕಿದ್ರೆ ಆಯ್ತು, ಇಲ್ಲಾ ಅಂದ್ರೆ ಮನೆಯಲ್ಲೇ ಇರ್ತಾರೆ. ನಮ್ಮ ಕಷ್ಟ ಯಾರಿಗೆ ಹೇಳೋಣ ಹೇಳಿ, ಹೇಳಿದ್ರೂ ಏನು ಮಾಡ್ತಾರೆ, ನಮ್ಮ ಕಷ್ಟ ನಮಗೆ. ಮೈಗೆ ಹುಷಾರು ಇಲ್ಲಾ, ಆಗಲ್ಲ ಅಂತ ಮನೇಲಿ ಕೂತ್ರೆ ಹೊಟ್ಟೆ ತುಂಬುತ್ತಾ ಹೇಳಿ?.. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದ.ಫೆಡರಲ್ ಕರ್ನಾಟಕದೊಂದಿಗೆ ಪೌರ ಕಾರ್ಮಿಕ ಮಹಿಳೆ ಜ್ಯೋತಿ ತಮ್ಮ ದಿನಚರಿಯನ್ನು ಬಿಚ್ಚಿಟ್ಟಿದ್ದು ಹೀಗೆ…
ಬೆಳಿಗ್ಗೆ ಆರೂವರೆ ಗಂಟೆಗೆ ಬನಶಂಕರರಿ ಮೆಟ್ರೋ ನಿಲ್ದಾಣದ ಬಳಿ ಇರುವ ಬಯೋಮೆಟ್ರಿಕ್‌ಗೆ ಬೆರಳೊತ್ತಿ ಹಾಜರಾತಿಯನ್ನು ಹಾಕಬೇಕು. ಸರಿಯಾದ ಸಮಯಕ್ಕೆ ಹಾಜರಿ ಇಲ್ಲ ಅಂದ್ರೆ ಸಂಬಳ ಕಟ್. ನನಗೆ ಮೂರು ಜನ ಮಕ್ಕಳು. ಮೂರು ಮಕ್ಕಳು ಶಾಲೆಗೆ ಹೋಗುವರು. ಅವರಿಗಾಗಿಯೇ ಬೆಳಿಗ್ಗೆ ಬೇಗ ಎದ್ದು ಗಂಡ, ಮಕ್ಕಳಿಗೆ ತಿಂಡಿ ರೆಡಿ ಮಾಡಬೇಕು. ಮಧ್ಯಾಹ್ನ ಊಟಕ್ಕೂ ಅಡುಗೆ ರೆಡಿ ಮಾಡಿ ಇಡಬೇಕು. ಹಾಗಾಗಿ ಬೆಳಗ್ಗೆ 4.30 ಗೆ ಏಳಬೇಕಾಗುತ್ತದೆ. ಮನೆಯ ಎಲ್ಲಾ ಕೆಲಸಗಳನ್ನು ಮಾಡಿ, ಮಕ್ಕಳಿಗೆ ತಿಂಡಿ, ಊಟ ರೆಡಿ ಮಾಡುವಷ್ಟರಲ್ಲಿ ಗಡಿಯಾರದ ಮುಳ್ಳು ಸಾಗಿದ್ದೇ ಗೊತ್ತಾಗಲ್ಲ...
ಅವಸರದಲ್ಲಿ ಕೈಗೆ ಸಿಕ್ಕ ಸೀರೆಯನ್ನು ಮೈಗೆ ಸುತ್ತಿಕೊಂಡು, ತಲೆ ಬಾಚ್ಕೊಂಡು, ಚಪ್ಪಲಿ ಹಾಕಿ ಕುಮಾರಸ್ವಾಮಿ ಲೇಔಟ್ ನಿಂದ ಬನಶಂಕರಿಗೆ ಸುಮಾರು 1.30.ಕಿ.ಮೀ ದೂರದಿಂದ ಓಡೋಡಿ ಬಂದು ಸರಿಯಾದ ಸಮಯಕ್ಕೆ ಬಯೋಮೆಟ್ರಿಕ್‌ಗೆ ಬೆರಳೊತ್ತಿ ನಿಟ್ಟುಸಿರು ಬಿಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್‌ಗೆ ಬೆರಳು ಇಟ್ಟು ತಳ್ಳುಗಾಡಿಯನ್ನು ಓಡಿಸಿಕೊಂಡು, ಜೊತೆಗಾರರೊಂದಿಗೆ ಒಂದಿಷ್ಟು ಮನೆ, ಸಂಸಾರ, ತಾಪತ್ರಯಗಳ ಬಗ್ಗೆ ಮಾತನಾಡುತ್ತಾ, ಒಂದು ಲೋಟ ಕಾಫಿಯೊಂದಿಗೆ ದಿನದ ಕೆಲಸ ಆರಂಭವಾಗುತ್ತದೆ. ರಸ್ತೆ ಮೇಲೆ ಎಲ್ಲೆಂದರಲ್ಲಿ ಚೆಲ್ಲಾಡಿದ ಕಸಗಳನ್ನು ಗಾಡಿಗೆ ಹಾಕಬೇಕು. ಉಗುಳು, ಅಡಿಕೆ, ಪಾನ್ ಬೀಡಾದ ಕೊಳಕು, ಉಚ್ಛೆ ಕಕ್ಕಸು ಏನೇ ಇದ್ರೂ ನಮ್ಮ ದೃಷ್ಟಿಯಲ್ಲಿ ಅದು ಕಸ. ಕಸ ಅಂದುಕೊಂಡೇ ನಾವು ಸ್ಪಚ್ಛ ಮಾಡಬೇಕು.
ನಮ್ಮ ಮೇಸ್ತ್ರಿ ಎಲ್ಲೆಲ್ಲಿ ಯಾವ ಯಾವ ಕೆಲಸ ಮಾಡಬೇಕು ಎಂಬುವುದನ್ನು ವಿವರಿಸುತ್ತಾರೆ. ಅವರ ಸಲಹೆಯಂತೆ ಕೆಲಸ ಮಾಡಬೇಕು. ಕೆಲವೊಮ್ಮೆ ರಸ್ತೆ ಬದಿ ಸ್ವಚ್ಛತೆ ಇದ್ರೆ, ಕೆಲವೊಮ್ಮೆ ಮನೆ ಮನೆ ಕೆಲಸ ಗಾಡಿಗೆ ತುಂಬುವ ಕೆಲಸ, ಇನ್ನು ಕೆಲ ದಿನ ಜನರು ಒಂದು ರಸ್ತೆಗಳಲ್ಲಿ ಗುಡ್ಡೆ ಹಾಕಿರುವ ಕಸವನ್ನು ಗಾಡಿಗೆ ತುಂಬಿ ಸ್ವಚ್ಛಗೊಳಿಸಬೇಕಾಗುತ್ತದೆ.
ಊಟನೇ ಸೇರುತ್ತಿರಲಿಲ್ಲ...
ಇಷ್ಟು ಕೆಲಸ ಒಂದು ಹಂತಕ್ಕೆ ಬರುವಷ್ಟರಲ್ಲಿ 11 ಗಂಟೆಯಾಗಿರುತ್ತದೆ. ಮತ್ತೆ ತಿಂಡಿ ತಿಂದು ಉಳಿದ ಕೆಲಸಗಳನ್ನು ಮುಂದುವರೆಸಬೇಕು. ಬೇರೆ ರಸ್ತೆಗಳನ್ನು ಸ್ಪಚ್ಛಗೊಳಿಸಬೇಕು. ಬೆಳಗ್ಗೆ 6.30 ಕೆಲಸ ಆರಂಭಿಸಿದ್ರೆ ಮುಗಿಯೋದು ಮಧ್ಯಾಹ್ನ 2 ಗಂಟೆಗೆ. ಕೆಲಸ ಸೇರುವ ಹೊಸತರಲ್ಲಿ ನನಗೆ ಈ ಕಸಗಳ ಕೆಟ್ಟ ವಾಸನೆಗೆ ವಾಂತಿ ಬಂದಂತೆ ಆಗುತ್ತಿತ್ತು. ಮನೆಯಲ್ಲಿ ಊಟ ಕೂಡ ಸೇರುತ್ತಿರಲಿಲ್ಲ. ಸತ್ತ ಇಲಿ, ಹೆಗ್ಗಣ, ನಾಯಿ, ಬೆಕ್ಕುಗಳು ಕಣ್ಣಮುಂದೆ ಬಂದು ಊಟ ಸೇರುತ್ತಿರಲಿಲ್ಲ. ಆದರೆ ಈಗ ಈ ಕೆಲಸವನ್ನು ಹಂದಿನೆಂಟು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಹಾಗಾಗಿ ಇದೆಲ್ಲಾ ಈಗ ರೂಢಿ ಆಗಿ ಹೋಗಿದೆ ಎನ್ನುತ್ತಾರೆ ಜ್ಯೋತಿ.
ಸರ್ಕಾರದವರು ಮುಖಕ್ಕೆ ಮಾಸ್ಕ, ಕೈಗೆ ಗ್ಲೌಸ್ ಕೊಡ್ತಾರೆ. ಕಾಲಿಗೆ ದೊಡ್ಡ ಬೂಟು ಕೊಡ್ತಾರೆ. ಆದ್ರೆ ಆ ದಪ್ಪ ಗ್ಲೌಸ್ ಹಾಕಿಕೊಂಡರೆ ಮೊದಲೇ ಬಿಸಿಲು ಸೆಖೆ ಜಾಸ್ತಿಯಾಗಿದೆ. ಗ್ಲೌಸ್‌ಗಳಿಂದ ಮತ್ತಷ್ಟು ಸೆಖೆ ಉಂಟಾಗುತ್ತದೆ. ಕಸನೂ ಸರಿಯಾಗಿ ಗುಡಿಸೋಕೆ ಆಗೋಲ್ಲ. ಬೆರಳೂ ಅಲ್ಲಾಡಿಸಲೂ ಆಗೋದಿಲ್ಲ. ಹಾಗಾಗಿ ಗ್ಲೌಸ್ ಹಾಕದೆ ಕೆಲಸ ಮಾಡುತ್ತೇವೆ. ಅಂತೂ ಇಂತೂ ದಿನದ ಕೆಲಸ ಮುಗಿಸಿ ಮನೆಗೆ ಹೋಗಿ ತಲುಪುವಷ್ಟರಲ್ಲಿ ಮೂರು ಗಂಟೆ ಆಗುತ್ತೆ. ಸ್ಪಲ್ಪ ರೆಸ್ಟ್ ಮಾಡೋಣ ಅಂದ್ರೆ ಮತ್ತೆ ಮನೆಯ ಮಾಮೂಲಿ ಕೆಲಸಗಳು ಇದ್ದಿದ್ದೆ. ಪಾತ್ರೆ ತೊಳೆಯುವುದು, ಮಕ್ಕಳ ಬಟ್ಟೆ ಸ್ವಚ್ಛಗೊಳಿಸುವುದು, ಮನೆ ಸ್ವಚ್ಛಗೊಳಿಸುವಲ್ಲಿ ಮತ್ತೆ ರಾತ್ರಿ ಅಡುಗೆ. ಹೀಗೆ ಅದು ಇದು ಅಂತ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮಲಗೊದ್ರೊಳಗೆ ಮತ್ತೆ ನಾಳೆ ಬೆಳಗ್ಗೆ ಅದೇ ರೊಟೀನ್.
ಸಂಬಳದಲ್ಲಿ ಸಂಸಾರ ಹೇಗೆ ಸಾಗಿಸಲಿ?
ಇತ್ತೀಚೆಗೆ ಎಲ್ಲಾ ವಸ್ತುಗಳು ಕೂಡ ದುಬಾರಿಯಾಗಿವೆ. ಮನೆಯಲ್ಲಿ ಜನ ಎಷ್ಟು ದುಡಿದ್ರೂ ಸಾಲಲ್ಲ. ಅಂತದ್ರಲ್ಲಿ ನಮಗೆ ಬರುವ ಸ್ಪಲ್ಪ ಸಂಬಳದಲ್ಲಿ ಒಬ್ಬಳೇ ಸಂಸಾರವನ್ನು ಹೇಗೆ ಸಾಗಿಸಲಿ ಹೇಳಿ? ಮನೆ, ಮಕ್ಕಳು, ಮಕ್ಕಳಿಗೆ ಶಿಕ್ಷಣ ಕೊಡಬೇಕು. ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು. ಕಷ್ಟ ಅಂತ ಹೇಳಿದ್ರೆ ಯಾರು ಏನು ಮಾಡ್ತಾರೆ, ನಮ್ಮ ಕಷ್ಟ ನಮಗೆ. ಸರ್ಕಾರ ಇದನ್ನೆಲ್ಲ ನೋಡಿಕೊಂಡು ನಮ್ಮ ಸಂಬಳವನ್ನು ತುಸು ಹೆಚ್ಚಿಸಿದ್ರೆ ಅದರಿಂದ ತಕ್ಕಮಟ್ಟಿಗೆ ಕಷ್ಟವನ್ನು ದೂರ ಮಾಡಬಹುದು ಎನ್ನುತ್ತಾರೆ 35 ವರ್ಷದ ಜ್ಯೋತಿ.
ನಾವು ಮನುಷ್ಯರಂತೆ ನೋಡೋಣ
ನೇಸರ ಮೂಡುವ ಮುನ್ನವೇ ಜಗದ ಮುಂದೆ ಹಾಜರಿರುವ ನಮ್ಮ ನಗರವನ್ನು ಸ್ಪಚ್ಛವಾಗಿ ಸುಂದರವಾಗುವಂತೆ ಕಾಣುವಂತೆ ಮಾಡುವ ಪೌರಕಾರ್ಮಿಕ ಮಹಿಳೆಯರು ತಮ್ಮ ಜೀವನದಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳಲ್ಲನ್ನೇ ನೋಡಿರುತ್ತಾರೆ. ಬೀದಿ ಕಸ, ಮನೆ ಕಸ, ಹೊಟೇಲ್ ಕಸ ಹೀಗೆ ಕಸವನ್ನು ಬಳಿಯುವ ಪೌರ ಕಾರ್ಮಿಕ ಮಹಿಳೆಯರ ಪರಿಸ್ಥಿತಿ ಸರಳವಾಗಿರುವುದಿಲ್ಲ. ಅವರೂ ಸಮಾಜದದಲ್ಲಿ ನಮ್ಮಂತೆ ಬದುಕುವವರು ಎಂದು ಎಲ್ಲರಲ್ಲೂ ಅರಿವಾಗಬೇಕಾಗಿದೆ. ಆಳುವವರು ಕೂಡ ಅವರ ಅರ್ಹತೆಗೆ ತಕ್ಕಂತೆ ವೇತನ ಸೌಲಭ್ಯವನ್ನು ನೀಡಬೇಕು. ಇದು ಜ್ಯೋತಿ ಅವರ ನಿರೀಕ್ಷೆ. ಮಹಿಳಾ ದಿನದ ಹೊತ್ತಲ್ಲಿ ಅವರು ಮತ್ತು ಅವರಂಥ ಊರು ಬೆಳಗಿಸುವ ಹೆಣ್ಣು ಮಕ್ಕಳ ನಿರೀಕ್ಷೆಗಳು ನಿಜವಾಗಲಿ.. ಮಹಿಳಾ ದಿನಾಚರಣೆಗೆ ಅರ್ಥ ಬರಲಿ.. !