ರೀಲ್ಸ್ ಹುಚ್ಚು ಬಲಿ: 14ನೇ ಮಹಡಿಯಿಂದ ಬಿದ್ದು ಯುವತಿ ದುರ್ಮರಣ

ಭುವನೇಶ್ವರಿ ನಗರದ ಲೇಔಟ್‌ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಮೃತ ಯುವತಿಯನ್ನು ಆಂಧ್ರ ಪ್ರದೇಶದ ಚಿತ್ತೂರು ಮೂಲದ ನಂದಿನಿ (21) ಎಂದು ಗುರುತಿಸಲಾಗಿದ್ದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;

Update: 2025-06-25 06:47 GMT

ಸಾಂದರ್ಭಿಕ ಚಿತ್ರ

ಸಾಮಾಜಿಕ ಮಾಧ್ಯಮಗಳಿಗಾಗಿ ರೀಲ್ಸ್  ಮಾಡುವ ಹುಚ್ಚು ಯುವತಿಯೊಬ್ಬಳ ಜೀವ ತೆಗೆದಿರುವ ದಾರುಣ ಘಟನೆ ರಾಯಸಂದ್ರದಲ್ಲಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ 14ನೇ ಮಹಡಿಯಲ್ಲಿ ವಿಡಿಯೋ ಚಿತ್ರೀಕರಿಸುವ ವೇಳೆ ಆಯತಪ್ಪಿ ಬಿದ್ದು, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಯುವತಿಯನ್ನು ಆಂಧ್ರ ಪ್ರದೇಶದ ಚಿತ್ತೂರು ಮೂಲದ ನಂದಿನಿ (21) ಎಂದು ಗುರುತಿಸಲಾಗಿದೆ. ಇವರು ಭುವನೇಶ್ವರಿ ನಗರದ ಲೇಔಟ್‌ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಟಿ ಬಳಿಕ ದುರಂತ ಘಟನೆ

ರಿಲಯನ್ಸ್‌ ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಂದಿನಿ, ಜೂನ್ 23 ರಂದು (ಸೋಮವಾರ) ಸಂಜೆ ಕೆಲಸ ಮುಗಿಸಿ ವಾಪಸ್ ಆಗಿದ್ದರು. ನಂತರ ತಮ್ಮ ಇಬ್ಬರು ಸ್ನೇಹಿತರ ಜೊತೆ ರಾಯಸಂದ್ರ ಮುಖ್ಯ ರಸ್ತೆ ಸಮೀಪವಿರುವ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ವೊಂದಕ್ಕೆ ತೆರಳಿ ರಾತ್ರಿ 9 ಗಂಟೆಯವರೆಗೂ ಮದ್ಯದ ಪಾರ್ಟಿ ಮಾಡಿದ್ದಾರೆ.

ಪಾರ್ಟಿ ಮುಗಿದ ಬಳಿಕ ನಂದಿನಿ ತಾನು ಬೇಜಾರಿನಲ್ಲಿದ್ದೇನೆ, ರೀಲ್ಸ್ ಮಾಡಬೇಕು ಎಂದು ಹಠ ಹಿಡಿದಿದ್ದಾರೆ. ಸ್ನೇಹಿತೆಯ ಮೊಬೈಲ್ ಪಡೆದು ಕಟ್ಟಡದ 14ನೇ ಮಹಡಿಗೆ ಹೋಗಿ ರೀಲ್ಸ್ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ ತಾಯಿಯ ದೂರು

ಮಗಳ ಸಾವಿನ ಸುದ್ದಿ ತಿಳಿದ ನಂದಿನಿ ತಾಯಿ ಬೆಂಗಳೂರಿಗೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ಜೊತೆಗಿದ್ದ ಇಬ್ಬರು ಯುವಕರು ಮತ್ತು ಸ್ನೇಹಿತೆಯರನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ, ಮೃತ ನಂದಿನಿ ಜೊತೆಗಿದ್ದ ಯುವತಿ ಮತ್ತು ಯುವಕರು, ನಂದಿನಿ ಮದ್ಯ ಸೇವಿಸಿದ್ದ ಕಾರಣ ರೀಲ್ಸ್ ಮಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Tags:    

Similar News