ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ನೀರು ಹರಿಸಲು ವಿರೋಧ
ಹೆಸರಘಟ್ಟ ಕೆರೆಯಿಂದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಮೂಲಕ ಬೆಂಗಳೂರಿನ ದಾಸರಹಳ್ಳಿ ಭಾಗಕ್ಕೆ ನೀರು ಪೂರೈಕೆ ಮಾಡಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.;
ಹೆಸರಘಟ್ಟ ಕೆರೆಯಿಂದ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ ಮೂಲಕ ಬೆಂಗಳೂರಿನ ದಾಸರಹಳ್ಳಿ ಭಾಗಕ್ಕೆ ನೀರು ಪೂರೈಕೆ ಮಾಡಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಜಲಾಶಯದಲ್ಲಿ ಸದ್ಯ 0.35 ಟಿಎಂಸಿ ಅಡಿ ನೀರು ಲಭ್ಯವಿದೆ. ಇದರಲ್ಲಿ 0.05 ಟಿಎಂಸಿ ಅಡಿ ಪ್ರಮಾಣದ ನೀರನ್ನು ಮೂರ್ನಾಲ್ಕು ತಿಂಗಳು ದಾಸರಹಳ್ಳಿ ಭಾಗಕ್ಕೆ ಪೂರೈಸಬೇಕೆಂದು ಜಲಮಂಡಳಿ ಸಿದ್ಧತೆ ನಡೆಸುತ್ತಿದೆ. ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಈ ಭಾಗಕ್ಕೆ ನೀರು ಪೂರೈಸುವುದು ಜಲಮಂಡಳಿಯ ಉದ್ದೇಶ.
'ಇದರಿಂದ ಸುತ್ತಲಿನ ಅಂತರ್ಜಲ ಮಟ್ಟ ಕುಸಿದು, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗುತ್ತದೆ. ಹೆಸರಘಟ್ಟ ಕೆರೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಯೋಜನೆ ಕೈಬಿಡಬೇಕು' ಎಂಬುದು ರೈತ ಪರ ಸಂಘಟನೆಗಳು ಒತ್ತಾಯ. ಕೈಬಿಡದಿದ್ದರೆ ಹೋರಾಟಕ್ಕೂ ಸಂಘಟನೆಗಳು ಸಜ್ಜಾಗುತ್ತಿವೆ. ಇದೇ ವಿಚಾರವಾಗಿ ರೈತ ಮುಖಂಡರೊಂದಿಗೆ ಚರ್ಚಿಸಲು ಮೇ 8ರಂದು ಜಲಮಂಡಳಿ ಸಭೆ ಕರೆದಿದೆ.
ಒಂದು ಕಾಲದಲ್ಲಿ ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. 2022 ರಲ್ಲಿ ಕೆರೆ ತುಂಬಿತ್ತು. ಕೋಡಿ ಹರಿಯಲು ಒಂದು ಅಡಿ ಬಾಕಿ ಇತ್ತು. ಆದರೆ ನಂತರ ಮಳೆ ಬೀಳಲಿಲ್ಲ. ಕೋಡಿ ಹರಿಯಲಿಲ್ಲ. 2023ರಲ್ಲಿ ಮಳೆ ಕೊರತೆಯಿಂದಾಗಿ ಕೆರೆಯಲ್ಲಿ ನೀರು ಸಂಗ್ರಹ ಪ್ರಮಾಣವೂ ಕಡಿಮೆಯಾಗಿದೆ.