Guarantee Schemes | ಉಚಿತ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ; ಸಿಎಂ

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಹಣವನ್ನು ಶೀಘ್ರವೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.;

Update: 2025-02-17 14:33 GMT
ಸಿದ್ದರಾಮಯ್ಯ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ರೈತ ಸಂಘಟನೆಗಳೊಂದಿಗೆ ಬಜೆಟ್‌ ಪೂರ್ವ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಐದು ತಿಂಗಳಿಂದ ಹಾಗೂ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳಿಂದ ಹಣ ಜಮೆ ಆಗದಿರುವ ಕುರಿತು ದೂರುಗಳು ಬಂದಿವೆ. ಈ ಕುರಿತು ಪರಿಶೀಲಿಸಿ, ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಯಾವುದೇ ಸಂದರ್ಭದಲ್ಲೂ ಉಚಿತ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧ

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗೆ ನಾವು ಸಿದ್ಧರಾಗಿದ್ದು, ಹೈಕೋರ್ಟ್‌ ಸೂಚನೆ ಮೇರೆಗೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು. 

ಜಲ್ ಜೀವನ್ ಮಿಷನ್ ಯೋಜನೆಯಡಿ ಈವರೆಗೂ ಕೇಂದ್ರದ ಪಾಲು ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಹಾಗಾಗಿ ನಮ್ಮ ವೇಗಕ್ಕೆ ಅನುಗುಣವಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ಪಾಲನ್ನು ಅವರು ಕೊಡುತ್ತಿಲ್ಲ. ಕೇಂದ್ರ ಸಚಿವ ವಿ.ಸೋಮಣ್ಣ ಅವರು ಲೋಕಸಭೆಯಲ್ಲಿ ಸುಳ್ಳು ಲೆಕ್ಕ ನೀಡಿದ ಹಿನ್ನೆಲೆಯಲ್ಲಿ ವಾಸ್ತವಾಂಶ ತಿಳಿಸಬೇಕಾಯಿತು ಎಂದು ಹೇಳಿದರು. 

ನಾಯಕತ್ವ ಬದಲಾವಣೆ: ವರಿಷ್ಠರಿಗೆ ಬಿಟ್ಟಿದ್ದು

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಅವರು, ಈ ಕುರಿತು ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡಲಿದೆ. ಇನ್ನು ಬೆಲೆಯೇರಿಕೆ ಹೆಚ್ಚಾಗಿರುವುದರಿಂದ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ಬೆಲೆ ಏರಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಮಾಡುತ್ತವೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಕುರಿತು ಹೆಚ್ಚು ಒತ್ತು ನೀಡುತ್ತಿದೆ. ರಾಜ್ಯ ಸರ್ಕಾರ ಬೆಲೆಯೇರಿಕೆ ತಗ್ಗಿಸಲು ಸಾಧ್ಯವಾದಷ್ಟೂ ಪ್ರಯತ್ನ ಮಾಡಲಿದೆ ಎಂದರು.

ಕೇಂದ್ರ ಸರ್ಕಾರದಿಂದ ಮೆಟ್ರೋ ದರ ನಿಗದಿ 

ಮೆಟ್ರೋ ರೈಲಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ನೇಮಕ ಮಾಡಿರುವ ಸಮಿತಿ. ಮೆಟ್ರೋ ಸ್ವಾಯತ್ತ ಸಂಸ್ಥೆಯಾದರೂ ಸಮಿತಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಇಬ್ಬರು ರಾಜ್ಯ ಸರ್ಕಾರದ ಪ್ರತಿನಿಧಿಗಳಿರುತ್ತಾರೆ. ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ನೀಡುತ್ತದೆ. ಬೆಲೆ ನಿಗದಿ ಮಾಡುವುದು ಸಮಿತಿ. ಅಧ್ಯಕ್ಷರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರ. ಪ್ರಸ್ತುತ ತಮಿಳುನಾಡು ರಾಜ್ಯದ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

Tags:    

Similar News