ಚಾಮುಂಡಿ ದೇಗುಲಕ್ಕೆ ಜಾತ್ಯತೀತ ಪಟ್ಟಿ ಅಂಟಿಸುವ ಅಗತ್ಯವಿಲ್ಲ; ಡಿಕೆಶಿ ಹೇಳಿಕೆಗೆ ರಾಜವಂಶಸ್ಥ ಯದುವೀರ್ ಆಕ್ರೋಶ
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೂಡ ಡಿಸಿಎಂ ಹೇಳಿಕೆಯನ್ನು ಖಂಡಿಸಿದ್ದು, ಶಿವಕುಮಾರ್ ಅವರ ಬೇಜವಾಬ್ದಾರಿ ಹೇಳಿಕೆ ಆಘಾತಕಾರಿ ಎಂದು ಕಿಡಿಕಾರಿದ್ದಾರೆ.;
'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಮತ್ತೊಂದು ಹೊಸ ವಿವಾದ ಹುಟ್ಟುಹಾಕಿದೆ. ಡಿ.ಕೆ.ಶಿವಕುಮಾರ್ ಹೇಳಿಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೂಡ ಡಿಸಿಎಂ ಹೇಳಿಕೆಯನ್ನು ಖಂಡಿಸಿದ್ದು, ಶಿವಕುಮಾರ್ ಅವರ ಬೇಜವಾಬ್ದಾರಿ ಹೇಳಿಕೆ ಆಘಾತಕಾರಿ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಚಾಮುಂಡಿ ದೇವಸ್ಥಾನದ ಮೇಲೆ ಜಾತ್ಯತೀತ ಪಟ್ಟಿ ಅಂಟಿಸುವ ಅವಶ್ಯಕತೆ ಇಲ್ಲ. ಸಹಜವಾಗಿಯೇ ದೇವಾಲಯವು ಬಹುತ್ವದ ತತ್ವದ ಮೇಲೆ ನಿಂತಿದೆ. ಆದರೆ, ಚಾಮುಂಡಿ ದೇವಾಲಯ ಒಂದು ಶಕ್ತಿಪೀಠ, ಹಿಂದೂ ಧರ್ಮಕ್ಕೆ ಸೇರಿರುವುದರಿಂದ ಕೋಟ್ಯಂತರ ಭಕ್ತರು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ. ಹೀಗಿರುವಾಗ ಉಪಮುಖ್ಯಮಂತ್ರಿ ಹೇಳಿಕೆ ಖಂಡನೀಯ" ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ
ʼರಾಜ್ಯ ಸರ್ಕಾರವು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಬೆಟ್ಟವನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದೆ. ಬೆಂಗಳೂರಿನ ಆಂಜನೇಯ ದೇವಸ್ಥಾನ ಸೇರಿದಂತೆ ಅನೇಕ ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲಾಗುತ್ತಿದೆ. ಇದು ಹಿಂದೂ ಧರ್ಮಕ್ಕೆ ಧಕ್ಕೆ ತರುವ ಕಾರ್ಯʼ ಎಂದು ಯದುವೀರ್ ಒಡೆಯರ್ ಆರೋಪಿಸಿದರು.
ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿವೆ. ಅವನ್ನು ಮರೆಮಾಚಲು ಇಂತಹ ಹೇಳಿಕೆ ನೀಡಲಾಗುತ್ತಿದೆ. ಮೈಸೂರಿನಲ್ಲಿ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾದಾಗ ಟಿಪ್ಪು ವಿಚಾರ ಮುಂದಿಟ್ಟರು. ಸಿಎಜಿ ವರದಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ತೆರೆದಿಡುತ್ತಿದ್ದಂತೆ ಧರ್ಮಸ್ಥಳ ವಿಚಾರ ಮುನ್ನೆಲೆಗೆ ತಂದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಒತ್ತಾಯ
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಆಗಿದೆ. ಅದನ್ನು ಪ್ರವಾಸೋದ್ಯಮ ಸ್ಥಳವಾಗಿಯಷ್ಟೇ ಅಲ್ಲ, ಧಾರ್ಮಿಕ ಕೇಂದ್ರವಾಗಿಯೂ ನೋಡಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯ ಪ್ರಗತಿ ಬಗ್ಗೆ ಸರ್ಕಾರ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಜನರ ಭಾವನೆಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.