Mysore MUDA case | ಸಿಎಂಗೆ ಸಂಕಷ್ಟ: ಇಡಿ ತನಿಖಾ ವರದಿಯ ಅಂಶಗಳೇ ಹೇಳುತ್ತಿವೆ ಭವಿಷ್ಯ!

ಮುಡಾದಿಂದ ನಿವೇಶನ ಪಡೆದವರಲ್ಲಿ ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಲಾನುಭವಿಗಳಾಗಿದ್ದಾರೆ. ಇವರು ದುಬಾರಿ ಬೆಲೆಗೆ ನಿವೇಶನ ಮಾರಾಟ ಮಾಡಿ ಅನ್ಯಾಯದ ಮಾರ್ಗದಲ್ಲಿ ಲಾಭ ಸಂಪಾದಿಸಿದ್ದಾರೆ ಎಂಬುದನ್ನು ತನಿಖೆ ಬೊಟ್ಟು ಮಾಡಿದೆ.

Update: 2024-12-05 04:55 GMT

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಹಲವು ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಿದೆ. ಈ ಸಂಬಂಧ ಲೋಕಾಯುಕ್ತ ಎಡಿಜಿಪಿಗೆ ಬರೆದಿರುವ ಪತ್ರದಲ್ಲಿ ಇಡಿ ತನ್ನ ತನಿಖೆಯ ಮಾಹಿತಿ ಹಂಚಿಕೊಂಡಿರುವ ಪತ್ರ ʼದ ಫೆಡರಲ್ ಕರ್ನಾಟಕʼಕ್ಕೆ ಲಭ್ಯವಾಗಿದೆ.

ಡಿ.5 ರಂದು ಮುಡಾ ಪ್ರಕರಣ ಸಂಬಂಧ ಸಿಎಂ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುವ ಹಿಂದಿನ ದಿನವೇ ಮಹತ್ವದ ಸಾಕ್ಷ್ಯಗಳನ್ನು ಒದಗಿಸಿರುವುದು ಕುತೂಹಲ ಮೂಡಿಸಿದೆ. ಲೋಕಾಯುಕ್ತರಿಗೆ ಇಡಿ ಬರೆದಿರುವ ಪತ್ರ ಇದೀಗ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ.

ಕಾನೂನು ಬಾಹಿರವಾಗಿ 50:50 ಅನುಪಾತದಡಿ ಪರಿಹಾರದ ನಿವೇಶನ ಹಂಚಲಾಗಿದೆ. 1059 ನಿವೇಶನಗಳ ನಿಯಮಬಾಹಿರ ಹಂಚಿಕೆಯಿಂದ 700 ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮ ನಡೆದಿದೆ. ಮುಡಾದಿಂದ ನಿವೇಶನ ಪಡೆದವರಲ್ಲಿ ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಲಾನುಭವಿಗಳಾಗಿದ್ದಾರೆ. ಇವರು ದುಬಾರಿ ಬೆಲೆಗೆ ನಿವೇಶನ ಮಾರಾಟ ಮಾಡಿ ಅನ್ಯಾಯದ ಮಾರ್ಗದಲ್ಲಿ ಲಾಭ ಸಂಪಾದಿಸಿದ್ದಾರೆ ಎಂಬುದನ್ನು ತನಿಖೆ ಬೊಟ್ಟು ಮಾಡಿದೆ.  

ಇಡಿ ಬರೆದಿರುವ ಪತ್ರದಲ್ಲಿ ಏನಿದೆ?

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ , ಜಮೀನು ಮಾಲೀಕ ಎನ್ನಲಾದ ಜೆ. ದೇವರಾಜು ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೋಲೀಸರು ಸೆ.27 ರಂದು ಐಪಿಸಿ ಸೆಕ್ಷನ್ 120B, 166 ,403, 406, 420, 426, 465, 468, 340 ಹಾಗೂ 351, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 9 ಮತ್ತು 13, ಕರ್ನಾಟಕ ಬೇನಾಮಿ ವಹಿವಾಟು ಮತ್ತು ಅಕ್ರಮ ನಿಷೇಧ ಕಾಯ್ದೆಯ ಸೆಕ್ಷನ್ 3, 53 ಮತ್ತು 54, ರಡಿ ಪ್ರಕರಣ ದಾಖಲಿಸಿದೆ. ಅಕ್ರಮ ಹಣ ವಹಿವಾಟು ಕಾಯ್ದೆ(PMLA) 2002 ಅಡಿ ಜಾರಿ ನಿರ್ದೇಶನಾಲಯವು ECIR ದಾಖಲಿಸಿ ತನಿಖೆ ನಡೆಸುತ್ತಿದೆ.

ತನಿಖಾ ಸಂದರ್ಭದಲ್ಲಿ ಎರಡು ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಸಿಎಂ ಅವರ ಪತ್ನಿ ಪಾರ್ವತಿಯವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ಇಡಿ ಪತ್ರದಲ್ಲಿ ತಿಳಿಸಿದೆ.

ಮೂಲ ಮಾಲೀಕ ದೇವರಾಜು ಅಲ್ಲ

ಕೆಸರೆ ಗ್ರಾಮದ ಸರ್ವೆ ನಂ.464 ರ 3 ಎಕರೆ 16 ಗುಂಟೆ ಭೂಮಿ ಸ್ವಾಧೀನಕ್ಕೆ ಮುಡಾ 18-9-1992 ರಂದು ಪ್ರಾಥಮಿಕ ಅಧಿಸೂಚನೆ ಪ್ರಕಟಿಸಿತ್ತು. ಅಂತಿಮ ಅಧಿಸೂಚನೆಯನ್ನು 20-08-1997 ರಂದು ಪ್ರಕಟಿಸಿತ್ತು. ಈ ಎರಡೂ ಅಧಿಸೂಚನೆಗಳಲ್ಲಿ ಜಮೀನು ಮಾಲೀಕ ನಿಂಗ ಅಲಿಯಾಸ್ ಜವ್ರಾ ಎಂದು ನಮೂದಿಸಿರುವುದನ್ನು ಇಡಿ ಪತ್ತೆ ಮಾಡಿದೆ.

ಜಮೀನನ್ನು ಮುಡಾ 3,24,700ರೂ. ಪಾವತಿಸಿ ಸ್ವಾಧೀನಪಡಿಸಿಕೊಂಡಿತ್ತು. ಜಮೀನು ಮಾಲೀಕ ನಿಂಗಾ ನಿಧನದ ನಂತರ ಪ್ರಕರಣದ ನಾಲ್ಕನೇ ಆರೋಪಿ ಜೆ.ದೇವರಾಜು ಮೂಲ ಮಾಲೀಕ ನಿಂಗಾ ಹೆಸರಿನಲ್ಲೇ ಡಿನೋಟಿಫಿಕೇಶನ್‌ಗಾಗಿ ಅಂದಿನ ನಗರಾಭಿವೃದ್ಧಿ ಸಚಿವ ಬಚ್ಚೇಗೌಡರಿಗೆ ವಿನಂತಿ ಮಾಡಿದ್ದರು. ಆದರೆ, ಈ ಸಂಬಂಧ ಮುಡಾಗೆ ಯಾವುದೇ ಅಧಿಕೃತ ಕೋರಿಕೆ ಸಲ್ಲಿಸಿರಲಿಲ್ಲ. ಇನ್ನು ನಿಂಗಾ ಅವರೊಂದಿಗಿನ ತಮ್ಮ ಸಂಬಂಧ ಹೇಳುವ ಯಾವುದೇ ದಾಖಲೆ ಒದಗಿಸಿರಲಿಲ್ಲ.

ಹೀಗಿದ್ದರೂ, 24-7-1997 ರಂದು ಮುಡಾ ಸಭೆಯು ಕೆಸರೆ ಗ್ರಾಮದ ಸರ್ವೆ ನಂ.462 ಮತ್ತು 464 ರ ಭೂಮಿಯನ್ನು ಬಡಾವಣೆಯ (ಕೋಣಿಯ ಬಗಡಳ್ಳಿ) ಅಂಚಿನಲ್ಲಿರುವ ಕಾರಣ ಡಿ-ನೋಟಿಫೈ ಮಾಡಲು ಒಪ್ಪಿಗೆ ಸೂಚಿಸಿತ್ತು. ಇಡಿ ಅಧಿಕಾರಿಗಳು ಕಳೆದ ಅಕ್ಟೋಬರ್ 18 ಹಾಗೂ 19 ರಂದು ಮುಡಾ ಕಚೇರಿಯಲ್ಲಿ ಶೋಧ ನಡೆಸಿದ ವೇಳೆ ಡಿ-ನೋಟಿಫಿಕೇಶನ್ ಗೆ ಕೈಗೊಳ್ಳಲಾದ ಟಿಪ್ಪಣಿ ಹಾಳೆಗಳು, ಇತರೆ ದಾಖಲೆಗಳು ಸಿಕ್ಕಿರಲಿಲ್ಲ. 

ಆರೋಪಿ ಜೆ ದೇವರಾಜು ರಾಜ್ಯ ಸರ್ಕಾರದ ಉದ್ಯೋಗಿಯಾಗಿದ್ದು, ಜಮೀನಿನ ಮೇಲೆ ಅವಲಂಬಿತರಾಗಿರಲಿಲ್ಲ. ಆದರೆ, ಜಮೀನೇ ತನಗೆ ಆಧಾರ ಎಂದು ಸುಳ್ಳು ಹೇಳಿ ಡಿನೋಟಿಫಿಕೇಶನ್‌ಗೆ ಅರ್ಜಿ ಸಲ್ಲಿಸಿದ್ದರೆಂಬ ಸಂಗತಿಯೂ ತನಿಖೆಯಿಂದ ಬಯಲಾಗಿದೆ. ಕಳೆದ ನ.8 ರಂದು ದೇವರಾಜು ವಿಚಾರಣೆ ನಡೆಸಿದಾಗ "ತಾನು ಯಾವುದೇ ಕೃಷಿ ಚಟುವಟಿಕೆ ಮಾಡುತ್ತಿರಲಿಲ್ಲ. 2003 ರಲ್ಲಿ ಮಾತ್ರ ಭೂಮಿಗೆ ಭೇಟಿ ನೀಡಿದ್ದಾಗಿ" ಒಪ್ಪಿಕೊಂಡಿದ್ದಾರೆ. 2003 ರಲ್ಲಿ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿರಲಿಲ್ಲ ಎಂದೂ ತಿಳಿಸಿದ್ದಾರೆ. ಆದರೆ, ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿ 2001ರಿಂದಲೇ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದನ್ನು ಉಪಗ್ರಹ ಚಿತ್ರಗಳು ಸಾಬೀತುಪಡಿಸಿವೆ. ಹೀಗಾಗಿ ನಿಂಗಾ ಜಮೀನಿನ ಮೂಲ ಮಾಲೀಕನೇ ಹೊರತು ದೇವರಾಜು ಅಲ್ಲ ಎಂಬುದು ಸ್ಪಷ್ಟವಾಗಿದೆ.  

ಪರಿಹಾರ ಕೋರದ ದೇವರಾಜು

ಮುಡಾದಿಂದ ಭೂಸ್ವಾಧೀನ ನಡೆದು, ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಜಮೀನು ಮಾಲೀಕ ಎಂದು ಹೇಳಿಕೊಂಡಿರುವ ದೇವರಾಜು ಯಾವುದೇ ಆಕ್ಷೇಪಣೆ ಅಥವಾ ಪರಿಹಾರಕ್ಕಾಗಿ ಮನವಿ ಸಲ್ಲಿಸಿರಲಿಲ್ಲ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಹೀಗಿದ್ದರೂ ಮುಡಾ ಸಭೆಯಲ್ಲಿ ಯಾವುದೇ ಚರ್ಚೆ, ದಾಖಲೆ ಆಧರಿಸದೇ ಡಿನೋಟಿಫಿಕೇಶನ್ ಪ್ರಕ್ರಿಯೆ ನಡೆಸಲಾಗಿತ್ತು. ಜಮೀನು ಡಿನೋಟಿಫಿಕೇಶನ್ ಆದಾಗ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಮುಡಾ ಸದಸ್ಯರೂ ಆಗಿದ್ದರು. ಡಿ ನೋಟಿಫಿಕೇಶನ್ ಕುರಿತು ಚರ್ಚಿಸುವ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ ಎಂದು ಇಡಿ ತಿಳಿಸಿದೆ. 

ಡಿನೋಟಿಫಿಕೇಶನ್‌ ಬಳಿಕ ಸರ್ವೆ ನಂ.464ರಲ್ಲಿನ 3 ಎಕರೆ 16 ಗುಂಟೆ ಭೂಮಿಯನ್ನು ಕೃಷಿ ಭೂಮಿ ಎಂದು 25.08.2004 ರಂದು ರೂ.5,95,000 ವೈಡ್ ಸೇಲ್ ಡೀಡ್ ಮಾಡಿಸಿ, ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಲಾಗಿತ್ತು.

ನಗರಾಭಿವೃದ್ಧಿ ಕಾರ್ಯದರ್ಶಿಯಿಂದಲೂ ಲೋಪ

ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿನ ಜಮೀನು ಡಿ ನೋಟಿಫಿಕೇಶನ್‌ಗೆ ಸಂಬಂಧಿಸಿ ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಕಾರ್ಯವೈಖರಿಯೂ ಸರಿಯಾಗಿರಲಿಲ್ಲ ಎಂದು ಇಡಿ ತಿಳಿಸಿದೆ. ಭೂ ಸ್ವಾಧೀನ, ಡಿನೋಟಿಫಿಕೇಶನ್‌ ಸಂದರ್ಭದ ಅಧಿಸೂಚನೆಯಲ್ಲಿ ಜೆ ದೇವರಾಜು ಅವರನ್ನು ಜಮೀನು ಮಾಲೀಕ ಎಂದು ನಮೂದಿಸಿರಲಿಲ್ಲ. ಜೊತೆಗೆ ಮಲ್ಲಿಕಾರ್ಜುನ ಸ್ವಾಮಿಯವರ ಹಕ್ಕುದಾರಿಕೆ ಖಚಿತಪಡಿಸಿರಲಿಲ್ಲ ಎಂದು ತಿಳಿಸಿದೆ.

ಇನ್ನು ಮುಡಾ ಬಡಾವಣೆ ಅಭಿವೃದ್ಧಿ ಕೆಲಸವನ್ನು ಎಲ್‌ ಅಂಡ್‌ ಟಿಗೆ ವಹಿಸಿತ್ತು. ಕಾಮಗಾರಿಗಾಗಿ 2001 ರಿಂದ 2004 ರವರೆಗೆ 16 ಕಂತುಗಳಲ್ಲಿ ಹಣ ಪಾವತಿ ಮಾಡಿರುವ ದಾಖಲೆಗಳು ಇಡಿಗೆ ದೊರೆತಿವೆ. ಮುಡಾ 2003 ರಲ್ಲೇ ಈ ಭೂಮಿಯಲ್ಲಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಂಜೂರು ಮಾಡಿತ್ತು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ವಿವಾದಿತ ಜಮೀನಿನಲ್ಲಿ ಒಟ್ಟು 25 ಪ್ಲಾಟ್‌ಗಳನ್ನು ವಿಂಗಡಿಸಿದ್ದು, ಅದರಲ್ಲಿ 20 ನಿವೇಶನಗಳು ನೋಂದಣಿಯಾಗಿವೆ. ಉಳಿದ 5 ನಿವೇಶನಗಳು ಮುಡಾದ ವಶದಲ್ಲಿದ್ದ ವಾಣಿಜ್ಯ ನಿವೇಶನಗಳಾಗಿವೆ ಎಂದು ತಿಳಿಸಿದೆ.

ನೆಪ ಮಾತ್ರದ ವ್ಯವಹಾರ

ಮುಡಾದಿಂದ ಭೂಮಿ ಸ್ವಾಧೀನವಾಗಿ ಬಡಾವಣೆ ನಿರ್ಮಿಸಿದ್ದರೂ ಜೆ ದೇವರಾಜು ಕೃಷಿ ಭೂಮಿ ಎಂದು ಹೇಳಿ ಮಾರಾಟ ಮಾಡಿರುವುದು ಕಂಡುಬಂದಿದೆ.

ಇನ್ನು ದೇವರಾಜನಿಂದ ಭೂಮಿ ಖರೀದಿಸಿದ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಕೂಡ ಮುಡಾಗೆ ಯಾವುದೇ ಆಕ್ಷೇಪ ಸಲ್ಲಿಸಿರಲಿಲ್ಲ. ಜೆ ದೇವರಾಜು (ಅವರು 10 ವರ್ಷಗಳಿಗೂ ಹೆಚ್ಚು ಕಾಲ ಭೂಮಿ ಮಾಲೀಕ ಎಂದು ಹೇಳಿಕೊಳ್ಳುತ್ತಾರೆ) ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ (2004 ರಲ್ಲಿ ಭೂಮಿಯನ್ನು ಖರೀದಿಸಿದವರು) ಇಬ್ಬರೂ ಭೂಮಿ ಮೇಲಿನ ತಮ್ಮ ಮಾಲೀಕತ್ವ ಚಲಾಯಿಸಿರಲಿಲ್ಲ. ಮಾರಾಟಗಾರ ಮತ್ತು ಖರೀದಿದಾರರಿಂದ ಯಾವುದೇ ಪ್ರಾತಿನಿಧ್ಯ ಅಥವಾ ಪರಿಹಾರಕ್ಕಾಗಿ ಪರಿಹಾರ ಕೇಳಿರಲಿಲ್ಲ. ಜಮೀನು ಮಾರಾಟವು ಕೇವಲ ಕಾಗದದ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ನೆಪಮಾತ್ರದ ವ್ಯವಹಾರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಇಡಿ ತಿಳಿಸಿದೆ.

ತಹಶೀಲ್ದಾರ್‌ರಿಂದ ಸುಳ್ಳು ವರದಿ 

ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ 1.12.2004 ರಂದು ಕೃಷಿಯೇತರ ಉದ್ದೇಶಕ್ಕಾಗಿ ಭೂಮಿಯನ್ನು ಪರಿವರ್ತಿಸಲು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ 4-03-2005 ರಂದು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದರು. ಇಲ್ಲಿ ಮುಡಾದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಸ್ಥಳದಲ್ಲಿ ಯಾವುದೇ ಅನಧಿಕೃತ ನಿರ್ಮಾಣಗಳು ನಡೆದಿಲ್ಲ ಎಂದು ವರದಿಯಲ್ಲಿ ಹೇಳಿದ್ದರು.

ಉಪಗ್ರಹ ಚಿತ್ರಗಳಲ್ಲಿ ವ್ಯಾಪಕವಾದ ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ್ಯ ದಾಖಲಾಗಿರುವುದರಿಂದ ತಹಶೀಲ್ದಾರ್‌ ವರದಿ ಸುಳ್ಳು ಎಂಬ ನಿರ್ಣಯಕ್ಕೆ ಇಡಿ ಬಂದಿತ್ತು. ಸರ್ವೆ ನಂ.464 ರಲ್ಲಿ ಅನೇಕ ರಸ್ತೆಗಳಿವೆ. ಆದರೆ, ಸ್ಥಳ ಪರಿಶೀಲನೆ ನಡೆಸಿದ್ದ ಅಂದಿನ ತಹಶೀಲ್ದಾರ್ ಮಾಲ್ಗೆ ಶಂಕರ್ ಅವರು ಮುಡಾದಿಂದ ಕೈಗೊಂಡಿರುವ ವ್ಯಾಪಕ ಅಭಿವೃದ್ಧಿ ಕಾಮಗಾರಿಯನ್ನು ತಮ್ಮ ವರದಿಯಲ್ಲಿ ನಮೂದಿಸಿರಲಿಲ್ಲ ಎಂದು ಇಡಿ ತಿಳಿಸಿದೆ.

ತಹಶೀಲ್ದಾರ್ ಅವರು 5-03-2005 ರಂದು ಜಿಲ್ಲಾಧಿಕಾರಿಗೆ ನೀಡಿದ ವರದಿಯಲ್ಲಿ ಮುಡಾದಿಂದ ಭೂ ಬಳಕೆಯ ಕುರಿತು ಅರ್ಜಿದಾರರು ಯಾವುದೇ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಉಲ್ಲೇಖಿಸಿದ್ದರು. ಅಂದರೆ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿಯವರು ಭೂ ಬಳಕೆಯ ಪ್ರಮಾಣಪತ್ರ ಪಡೆಯಲು ಮುಡಾಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ ಎಂಬುದನ್ನು ಖಾತ್ರಿಪಡಿಸಿದೆ.

ಅಂದಿನ ಮೈಸೂರು ಜಿಲ್ಲಾಧಿಕಾರಿ ಜಿ ಕುಮಾರ್ ನಾಯ್ಕ್ ಅವರು ಕೂಡ 17-06-2005 ರಂದು ಕೈಗೊಂಡ ಸ್ಥಳ ಪರಿಶೀಲನೆಯಲ್ಲಿ ಮುಡಾ ಭೂಮಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿರಲಿಲ್ಲ ಎಂದಿದೆ.

ಕಂದಾಯ ಇಲಾಖೆ ಲೋಪ

ಕೃಷಿಯೇತರ ಉದ್ದೇಶಕ್ಕಾಗಿ ಭೂಮಿಯನ್ನು ಪರಿವರ್ತಿಸಲು ಕೈಗೊಂಡ ಸಂಪೂರ್ಣ ಪ್ರಕ್ರಿಯೆಯು ಕೇವಲ ನೆಪಪಾತ್ರವಾಗಿದೆ. ಇದು ನೆಲದ ಕಾನೂನನ್ನು ಆಧರಿಸಿಲ್ಲ. ಇಡೀ ಕಂದಾಯ ಇಲಾಖೆ ಕೈಗೊಂಡ ಕಾರ್ಯವಿಧಾನಗಳಲ್ಲೇ ಲೋಪ ಕಂಡುಬರುತ್ತದೆ. ಗ್ರಾಮ ಲೆಕ್ಕಾಧಿಕಾರಿ, ಭೂಮಾಪಕರು, ಕಂದಾಯ ನಿರೀಕ್ಷಕರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮುಡಾ ಕೈಗೊಂಡಿರುವ ಯಾವುದೇ ಕಾಮಗಾರಿ ಬಗ್ಗೆ ಉಲ್ಲೇಖಿಸಿಲ್ಲ. ಆದರೆ, ಉಪಗ್ರಹ ಚಿತ್ರಗಳು ಮತ್ತು ದಾಖಲೆಗಳಿಂದ ತಿಳಿದುಬಂದಂತೆ ಅವರೆಲ್ಲ ನೆಲದ ಮೇಲಿನ ಸತ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದ  ವರದಿ ನೀಡಿದ್ದಾರೆ. ಇದು ಅಕ್ರಮವನ್ನು ಪುಷ್ಟೀಕರಿಸುವಂತಿದೆ ಎಂದು ಇಡಿ ಹೇಳಿದೆ.

ಇನ್ನು ನಷ್ಟ ಪರಿಹಾರ ಕೋರಿ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಸಲ್ಲಿಸಿರುವ ಮನವಿಯಲ್ಲಿ ಯಾವುದೇ ಸಹಿ ಇಲ್ಲ. ಆದ್ದರಿಂದ ಈ ಎಲ್ಲಾ ಪ್ರಕ್ರಿಯೆಗಳು ಪ್ರಭಾವಕ್ಕೆ ಒಳಗಾಗಿವೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ. ಭೂಪರಿವರ್ತನೆ ಪ್ರಕ್ರಿಯೆ ಸಂದರ್ಭದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು.

ಮುಡಾ ಸ್ವಾಧೀನದ ಜಮೀನು ದಾನ! 

ಕೆಸರೆಯ ಸರ್ವೆ ನಂ.464 ರಲ್ಲಿ 3 ಎಕರೆ 16 ಗುಂಟೆ ಅಳತೆಯ ಈ ಭೂಮಿಯನ್ನು ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ತಮ್ಮ ಸಹೋದರಿ ಬಿ.ಎಂ.ಪಾರ್ವತಿ ಅವರಿಗೆ20.10.2010 ರಂದು ದಾನಪತ್ರ ನೀಡಿದ್ದರು. ಆದರೆ, ಅಂದು ಭೂಮಿ ಮುಡಾ ಸ್ವಾಧೀನದಲ್ಲಿತ್ತು. ಆಗಲೂ ಕೂಡ ಪಾರ್ವತಿಯವರಾಗಲಿ, ಮಲ್ಲಿಕಾರ್ಜುನ ಸ್ವಾಮಿ ಅವರಾಗಲಿ ಯಾವುದೇ ಆಕ್ಷೇಪಣೆ ಅಥವಾ ಪ್ರಾತಿನಿಧ್ಯ ಸಲ್ಲಿಸಲಿಲ್ಲ. ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂಬುದನ್ನು ಇಡಿ ಗಮನಿಸಿದೆ.

ಡಿ-ನೋಟಿಫಿಕೇಶನ್, ಭೂಮಿಯ ಖರೀದಿ ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯ ಪ್ರಕ್ರಿಯೆ ಸೇರಿದಂತೆ ಎಲ್ಲ ಹಂತಗಳು ಪ್ರಭಾವಕ್ಕೆ ಒಳಗಾಗಿರುವುದು ಕಂಡುಬಂದಿದೆ. ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಉಡುಗೊರೆ ಮೂಲಕ ಸಂಪಾದಿಸಿದ ಕಳಂಕಿತ ಆಸ್ತಿ ಎಂದು ಇಡಿ ಹೇಳಿದೆ.

10 ವರ್ಷಗಳ ಬಳಿಕ ಪರಿಹಾರಕ್ಕೆ ಮನವಿ

14/06/2014 ರಂದು ಅಂದರೆ ಸೇಲ್ ಡೀಡ್ ನೋಂದಣಿಯಾದ ಸುಮಾರು 10 ವರ್ಷಗಳ ನಂತರ ಬಿಎಂ ಪಾರ್ವತಿ ಅವರು ಪರಿಹಾರಕ್ಕಾಗಿ ವಿನಂತಿ ಸಲ್ಲಿಸಿದ್ದರು. ಜಮೀನು ಮುಡಾ ಸ್ವಾಧೀನದಲ್ಲಿದೆ ಎಂಬ ವಾಸ್ತವದ ಹೊರತಾಗಿಯೂ ಪರಿಹಾರಕ್ಕೆ ಮನವಿ ಮಾಡಿದ್ದರು.

ಆದರೆ, ಜೆ ದೇವರಾಜು, ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಬಿ.ಎಂ.ಪಾರ್ವತಿ ಅವರು ಈ ಹಿಂದೆ ಯಾವುದೇ ಹಕ್ಕುದಾರಿಕೆ, ಪ್ರಾತಿನಿಧ್ಯ ಹಾಗೂ ಆಕ್ಷೇಪಣೆ ಸಲ್ಲಿಸಿರಲಿಲ್ಲ ಎಂಬುದು ಗಮನಾರ್ಹವಾಗಿದೆ. ಬಿ.ಎಂ. ಪಾರ್ವತಿಯವರ ಪರಿಹಾರದ ಹಕ್ಕು ಕೇಳುವ ವೇಳೆಗೆ (13-05-2013) ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.

ಇನ್ನು ಬಿಎಂ ಪಾರ್ವತಿ ಅವರು ಪರಿಹಾರಕ್ಕಾಗಿ 14/06/2014 ರಂದು ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ವಾಕ್ಯವೊಂದನ್ನು ಅಳಿಸಲು ವೈಟ್ನರ್ ಹಾಕಲಾಗಿದೆ, ಇದು ಸಾಕ್ಷ್ಯವನ್ನು ‌ತಿರುಚಿರುವ ಶಂಕೆಗೆ ಆಸೊದ ನೀಡಿದೆ.

ಆಗಿನ ಮುಡಾದ ವಿಶೇಷ ಭೂಸ್ವಾಧೀನಾಧಿಕಾರಿಯು ಪಾರ್ವತಿಯವರಿಗೆ 60:40 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಂಜೂರು ಮಾಡಲು ಪ್ರಸ್ತಾಪಿಸಿ ಪತ್ರ ನೀಡಿದ್ದರು. ಬದಲಿಗೆ 100% ಸಮಾನ ಭೂಮಿಯನ್ನು ಬಿ ಎಂ ಪಾರ್ವತಿ ಅವರು ಪರಿಹಾರವಾಗಿ ಕೇಳಿದ್ದರೇ ವಿನಃ ವಿಶೇಷ ಭೂಸ್ವಾಧೀನಾಧಿಕಾರಿ ಪ್ರಸ್ತಾವನೆಗೆ ಯಾವುದೇ ಉತ್ತರ ಸಲ್ಲಿಸಿರಲಿಲ್ಲ.

ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಮುಡಾ ನಿವೇಶನ ಹಂಚಿಕೆ ಮಾಡುವ ಕಾರ್ಯವಿಧಾನವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಿಗೆ ಸೈಟ್ಗಳ ಹಂಚಿಕೆ) ನಿಯಮಗಳು 2009 ರ ಅಡಿ ಒಳಗೊಂಡಿದೆ.

ಇನ್ನು ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್‌, ಬಳಸಿದ ಭೂಮಿಗೆ ಪರಿಹಾರದ ರೂಪದಲ್ಲಿ ನಿವೇಶನ ಹಂಚಿಕೆಗೆ ನಿಯಮ ಪಾಲಿಸಿಲ್ಲ. 20-11-2020ರ ಮಂಡಳಿಯ ನಿರ್ಣಯವು ಹೇಳಿದ ನಿಯಮಕ್ಕೆ ತದ್ವಿರುದ್ಧವಾಗಿ ಅಂದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಕಲಂ 13 (2) (ಎ)ರಲ್ಲಿ ನಮೂದಿಸಿರುವ ಮುಡಾ ಆಯುಕ್ತರ ಕರ್ತವ್ಯಗಳಿಗೆ ವಿರುದ್ಧವಾಗಿ ಕ್ರಮ ಕೈಗೊಂಡಿದ್ದರು ಎಂದು ಇಡಿ ದಾಖಲಿಸಿದೆ. 

ಬಿಎಂ ಪಾರ್ವತಿ ಅವರಿಗೆ ನಿವೇಶನಗಳ ಹಂಚಿಕೆಯಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ನಂ.3 (ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಿಗೆ ನಿವೇಶನಗಳ ಹಂಚಿಕೆ) ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸ್ವಂತ ವಿವೇಚನೆಯಿಂದ ನಿವೇಶನ ಹಂಚಿರುವುದನ್ನು ಸ್ವತಃ ನಟೇಶ್‌ ಒಪ್ಪಿಕೊಂಡಿದ್ದಾರೆ. ಆದರೆ, ವಿವೇಚನಾಧಿಕಾರ ಬಳಸಲು ಅಧಿಕಾರ ಇರಲಿಲ್ಲ. ಪ್ರಭಾವಿ ವ್ಯಕ್ತಿ ಎಂಬ ಕಾರಣಕ್ಕೆ ಈ ನಿಯಮ ಉಲ್ಲಂಘಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

ಶಾಸಕ ಯತೀಂದ್ರ ಪ್ರಭಾವ ಹೆಚ್ಚು

ಶಾಸಕ ಯತೀಂದ್ರ ಪರಿಹಾರದ ಪ್ರಕ್ರಿಯೆಯ ಉದ್ದಕ್ಕೂ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ಯತೀಂದ್ರ ಆಪ್ತ ಸಹಾಯಕ ಎಸ್.ಜಿ.ದಿನೇಶ್  ಕುಮಾರ್‌ ಅರ್ಜಿದಾರರ ಪರ (ಬಿಎಂ ಪಾರ್ವತಿ) ವ್ಯವಹರಿಸಿದ್ದಾರೆ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದನ್ನು ಎಸ್.ಜಿ.ದಿನೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ದಿನೇಶ್ ಕುಮಾರ್ ಅವರು ಬಿ.ಎಂ.ಪಾರ್ವತಿಯವರಿಂದ ಯಾವುದೇ ಅನುಮತಿಯಿಲ್ಲದಿದ್ದರೂ ಖಾತಾ ಪತ್ರಕ್ಕೆ ಸಹಿ ಹಾಕಿದ್ದರು ಎಂಬುದನ್ನು ಪರಿಹಾರದ ಪ್ರಕರಣದಲ್ಲಿ ಕೇಸ್ ವರ್ಕರ್ ಆಗಿದ್ದ ಎನ್ ರವಿ ಹೇಳಿಕೆ ನೀಡಿದ್ದಾರೆ.

ಇದಲ್ಲದೇ ದಿನೇಶ್‌ ಕುಮಾರ್‌ ಅವರು ಮುಡಾ ಕೆಲಸಕ್ಕೆ ಸಂಬಂಧಿಸಿ ಮುಡಾ ಆಯುಕ್ತರಿಗೆ ಪಿಎ ಅವರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದರಿಂದ ಪ್ರಭಾವದ ಮಟ್ಟವನ್ನು ಗಮನಿಸಬಹುದು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಳುಹಿಸಬೇಕಾದ ಕರಡು ಪತ್ರಕ್ಕೆ ಮುಡಾ ಆಯುಕ್ತರ ಪಿಎ ಅವರೇ ಸಹಿ ಹಾಕಿದ್ದರು ಎಂಬ ಮಾಹಿತಿಯನ್ನು ವಾಟ್ಸಾಪ್‌ನಿಂದ ರಿಟ್ರೀವ್‌ ಮಾಡಲಾಗಿದೆ.

ನಿವೇಶನ ಪಡೆಯಲು ಬಿ ಎಂ ಪಾರ್ವತಿ ಅವರು ನೀಡಿದ ನಷ್ಟ ಪರಿಹಾರ ಬಾಂಡ್‌ನಲ್ಲೂ ವ್ಯತ್ಯಾಸವಿದೆ. ಸ್ಟಾಂಪ್ ಪೇಪರ್ ಅನ್ನು 24.11.2021 ರಂದು ಖರೀದಿಸಲಾಗಿದೆ. ಆದರೆ ನಷ್ಟ ಪರಿಹಾರ ಬಾಂಡ್‌ಗೆ 23.11.2021 ರಂದೇ ಸಹಿ ಮಾಡಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಇದರಿಂದ ತಿಳಿಯುತ್ತದೆ ಎಂದು ಇಡಿ ಹೇಳಿದೆ.

ದೇವನೂರು ಬಡಾವಣೆಯಲ್ಲಿ ಸುಮಾರು 352 ನಿವೇಶನಗಳು ಲಭ್ಯವಿದ್ದರೂ, ಬಿ ಎಂ ಪಾರ್ವತಿ ಅವರಿಗೆ ವಿಜಯನಗರ ಬಡಾವಣೆಯಲ್ಲಿ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಪಾರ್ವತಿಯವರಿಗೆ ವಾಣಿಜ್ಯ ನಿವೇಶನಗಳನ್ನೂ ಪರಿಹಾರ ರೂಪದಲ್ಲಿ ಮಂಜೂರು ಮಾಡಲಾಗಿದೆ. ನಿಯಮದ ಪ್ರಕಾರ ವಾಣಿಜ್ಯ ನಿವೇಶನಗಳನ್ನು ಹರಾಜು ಆಧಾರದ ಮೇಲೆ ಹಂಚಿಕೆ ಮಾಡಬೇಕು.

ಬಿ ಎಂ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ಸ್ವಯಂಪ್ರೇರಿತ ಭೂಮಿಯನ್ನು ಒಪ್ಪಿಸುವ ಪ್ರೋತ್ಸಾಹ ಯೋಜನೆ) ನಿಯಮಗಳು, 1991 ರ ಅಡಿಯಲ್ಲಿ ಹಂಚಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಆ ನಿಯಮದಡಿ 50:50ಅನುಪಾತಕ್ಕೆ ಅವಕಾಶ ಇಲ್ಲ. ಇನ್ನು 01.10.2024 ರಂದು ನಿವೇಶನ ಹಿಂತಿರುಗಿಸಿರುವುದನ್ನು ಸಹ ಇದೇ ನಿಯಮದಲ್ಲಿ ಕೈಗೊಳ್ಳಲಾಗಿದೆ. ನಿವೇಶನಗಳ ಮೂಲ ಹಂಚಿಕೆಯನ್ನು ಅಕ್ರಮವಾಗಿ ಮಾಡಲಾಗಿದೆ ಎಂದು ಈ ಪ್ರಕ್ರಿಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂಬುದು ತಿಳಿದುಬಂದಿದೆ.

ಸಂಬಂಧಿಕರು, ನಕಲಿ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ

50:50 ಯೋಜನೆಯ ಅಡಿಯಲ್ಲಿ ನಿವೇಶನ ಹಂಚಿಕೆಯನ್ನು ನಿಲ್ಲಿಸಲು ಅಕ್ಟೋಬರ್ 2023 ರಲ್ಲಿ ಆದೇಶಿಸಲಾಗಿದೆ. ಆದಾಗ್ಯೂ, 252 ನಿವೇಶನಗಳನ್ನು ಮಾರ್ಚ್ 2024 ರ ನಂತರ ಯಾವುದೇ ಅನುಮೋದನೆಯಿಲ್ಲದೆ ಹಂಚಲಾಗಿದೆ.

ಆಗಿನ ಅಧ್ಯಕ್ಷರಾದ ಕೆ ಮರಿಗೌಡ ಮೌಖಿಕ ಸೂಚನೆಯ ಮೇರೆಗೆ ಹಂಚಿಕೆಯನ್ನು ಮರು ಪ್ರಾರಂಭಿಸಲಾಯಿತು. ಈ ವೇಳೆ ಖಾಸಗಿ ವ್ಯಕ್ತಿಗಳು, ರಿಯಲ್ ಎಸ್ಟೇಟ್ ಏಜೆಂಟರು ಮುಡಾ ಅಧಿಕಾರಿಗಳೊಂದಿಗೆ ನಂಟು ಹೊಂದಿರುವ ಸಾಕ್ಷ್ಯಗಳು ಬಹಿರಂಗವಾಗಿವೆ. ವಿತ್ತೀಯ ಕೊರತೆ ಮತ್ತು ಇತರ ಪರಿಗಣನೆಗಳಿಗಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕೆಲವು ಖಾಸಗಿ ವ್ಯಕ್ತಿಗಳು ಪ್ರಮುಖ ಮುಡಾ ಅಧಿಕಾರಿಗಳ ಸಂಬಂಧಿಗಳೂ ಆಗಿದ್ದರು. ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಮುಖ ಉದ್ಯೋಗಿಗಳ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದ್ದು, ನಿವೇಶನ ಹಂಚಿಕೆ ಮಾಡುವ ಸಲುವಾಗಿ ಜಿಟಿ ದಿನೇಶ್ ಕುಮಾರ್ ಮುಡಾ ಆಯುಕ್ತರಿಗೆ ಹಣ ಪಾವತಿಸಿದ್ದರು ಎಂಬುದು ತಿಳಿದುಬಂದಿದೆ.

ಮುಡಾದ ಹಿಂದಿನ ಅಧ್ಯಕ್ಷ ಕೆ.ಮರಿಗೌಡ ತಮ್ಮ ಪತ್ನಿ ಹೆಸರಿನಲ್ಲಿ ನಿವೇಶನ ಪಡೆದಿದ್ದಾರೆ. ಭೂಮಿಗೆ ಸಂಬಂಧವಿಲ್ಲದ ನಕಲಿ ವ್ಯಕ್ತಿಗಳ ಹೆಸರಿನಲ್ಲಿಯೂ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಒಟ್ಟಾರೆ ನಿವೇಶನ ಹಂಚಿಕೆಯಲ್ಲಿ ಕಾನೂನು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಅಕ್ರಮವಾಗಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ದಾಖಲೆ ತಿದ್ದುವಿಕೆ, ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ, ಪ್ರಭಾವ, ನಕಲಿ ಸಹಿ, ಸಾಕ್ಷ್ಯಗಳ ತಿರುಚುವಿಕೆ ಇತ್ಯಾದಿ ಅಂಶಗಳನ್ನು ಇಡಿ ದಾಖಲಿಸಿದೆ. ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಅವರು ಆ ಅವಧಿಯಲ್ಲಿ ಶಾಸಕರಾಗಿದ್ದರು. ನಿವೇಶನ ಹಂಚಿಕೆಯ ಅವಧಿಯಲ್ಲಿ ಮುಡಾ ಸದಸ್ಯರಾಗಿದ್ದರು. ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಈ ವೇಳೆ ಮುಡಾ ಕಚೇರಿಯಲ್ಲಿ ಸಿದ್ದರಾಮಯ್ಯ ಅನಗತ್ಯ ಪ್ರಭಾವ ಬೀರಿದ್ದರು ಎಂದು ಇಡಿ ಪತ್ರದಲ್ಲಿ ಹೇಳಿದೆ.

Tags:    

Similar News