20 ನಿಮಿಷಕ್ಕೊಂದು ರೈಲು? : ಹಳದಿ ಮೆಟ್ರೋ ಆರಂಭವಾದರೂ ಪ್ರಯಾಣಿಕರಿಗೆ ಕಾಯುವಿಕೆ ಅನಿವಾರ್ಯ
ಚಾಲಕರಿಲ್ಲದ ಮೆಟ್ರೋ ರೈಲುಗಳ ಲಭ್ಯತೆ ಸೀಮಿತವಾಗಿರುವ ಕಾರಣ ಆರಂಭದಲ್ಲಿ ಮೂರು ರೈಲು ಸೆಟ್‌ಗಳು 20 ನಿಮಿಷಗಳ ಮಧ್ಯಂತರದಲ್ಲಿ ಸಂಚರಿಸಲಿವೆ. ಇದು ಮೆಟ್ರೋದಲ್ಲಿ ಜನದಟ್ಟಣೆಗೆ ಕಾರಣವಾಗಲಿದೆ;
ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ಬಳಿಕ ಬಹುನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವು ಸ್ವಾತಂತ್ರ್ಯೋತ್ಸವದಂದು (ಆಗಸ್ಟ್ 15) ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಇದು ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಆದರೆ, ಹಸಿರು ಮತ್ತು ನೇರಳೆ ಮಾರ್ಗಗಳಂತೆ ಕೆಲವೇ ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುವುದಿಲ್ಲ. ಬದಲಿಗೆ, ಆರಂಭದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ರೈಲು ಸಂಚಾರ ಮಾಡಲಿರುವುದರಿಂದ, ಪ್ರಯಾಣಿಕರಿಗೆ ರೈಲಿಗಾಗಿ ಕಾಯುವುದು ಅನಿವಾರ್ಯವಾಗಲಿದೆ.
ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇತ್ತೀಚೆಗೆ ಲಾಲ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಬಿಎಂಆರ್ಸಿಎಲ್ ಆಗಸ್ಟ್ 15ರೊಳಗೆ ಮಾರ್ಗವನ್ನು ಆರಂಭಿಸುವ ಭರವಸೆ ನೀಡಿದೆ. ಸುರಕ್ಷತಾ ಮಾನ್ಯತೆ ಈಗಾಗಲೇ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈ ಮಾರ್ಗದ ಪ್ರಯಾಣಿಕರಿಗೆ ಸಣ್ಣ ಭರವಸೆ ಮೂಡಿದೆ. ಆದರೆ, ಇದರ ಹಿಂದಿರುವ ತಾಂತ್ರಿಕ ಸಮಸ್ಯೆಗಳನ್ನು ನೋಡಿದರೆ ಸಂಚಾರ ಅರಂಭವಾದರೂ ಪ್ರಯಾಣ ಸುಲಭವಲ್ಲ ಎಂಬ ಚರ್ಚೆಗಳು ಆರಂಭಗೊಂಡಿವೆ.
ಸವಾಲಾಗಲಿದೆ 20 ನಿಮಿಷಕ್ಕೊಮ್ಮೆ ರೈಲು ಸಂಚಾರ
ಆರ್‌ವಿ ರಸ್ತೆಯಿಂದ (ರಾಷ್ಟ್ರೀಯ ವಿದ್ಯಾಲಯ ರಸ್ತೆ) ಬೊಮ್ಮಸಂದ್ರದವರೆಗಿನ 19.15 ಕಿ.ಮೀ. ಉದ್ದದ ಈ ಹಳದಿ ಮಾರ್ಗವು, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಲ್ಕ್‌ಬೋರ್ಡ್ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೂ, ಆರಂಭದಲ್ಲಿ ಚಾಲಕ ರಹಿತ (ಲೋಕೊಪೈಲೆಟ್) ಮೆಟ್ರೋ ರೈಲುಗಳ ಲಭ್ಯತೆ ಸೀಮಿತವಾಗಿರುವುದರಿಂದ (ಕೇವಲ ಮೂರು ರೈಲು ಸೆಟ್‌ಗಳು), 20 ನಿಮಿಷಗಳಿಗೊಮ್ಮೆ ಮಾತ್ರ ರೈಲುಗಳು ಸಂಚರಿಸಬಹದು ಎನ್ನಲಾಗಿದೆ.
ಪ್ರಸ್ತುತ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್‌ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಮಾರ್ಗವಾಗಿ ಸಂಚರಿಸುವ ನಾಗರಿಕರು ಖಾಸಗಿ ವಾಹನಗಳು ಮತ್ತು ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಮೆಟ್ರೋ ಆರಂಭವಾದರೂ, 20 ನಿಮಿಷಗಳಿಗೊಮ್ಮೆ ರೈಲು ಸಂಚಾರದಿಂದ ಪೀಕ್ ಅವರ್‌ಗಳಲ್ಲಿ ಜನದಟ್ಟಣೆ ಅಧಿಕವಾಗುವ ಸಾಧ್ಯತೆ ಇದೆ. ಇದು ಪ್ರಯಾಣಿಕರಿಗೆ ಇನ್ನೊಂದು ರೀತಿಯ ತಲೆನೋವನ್ನುಂಟು ಮಾಡಬಹುದು. ಬಿಎಂಆರ್ಸಿಎಲ್ ಅಂದಾಜಿನ ಪ್ರಕಾರ, ಹಳದಿ ಮಾರ್ಗ ಪ್ರಾರಂಭವಾದರೆ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಪ್ರಮಾಣದ ಪ್ರಯಾಣಿಕರನ್ನು ಕೇವಲ ಮೂರು ರೈಲುಗಳೊಂದಿಗೆ ನಿರ್ವಹಿಸುವುದು ಆರಂಭದಲ್ಲಿ ಸವಾಲಾಗಲಿದೆ.
ವಿಳಂಬಕ್ಕೆ ಕಾರಣಗಳು ಮತ್ತು ಭವಿಷ್ಯದ ಆಶ್ವಾಸನೆ
ಹಳದಿ ಮಾರ್ಗ ವಾಸ್ತವವಾಗಿ 2021ರಲ್ಲಿಯೇ ಪೂರ್ಣಗೊಂಡು ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ, ಕಾಮಗಾರಿ ವಿಳಂಬ ಮತ್ತು ಮುಖ್ಯವಾಗಿ ರೋಲಿಂಗ್ ಸ್ಟಾಕ್ (ರೈಲು ಬೋಗಿಗಳ) ಪೂರೈಕೆಯಲ್ಲಿನ ತಡದಿಂದಾಗಿ ಬರೋಬ್ಬರಿ ನಾಲ್ಕು ವರ್ಷ ವಿಳಂಬವಾಗಿದೆ. ಚೀನಾದ ಸಿಆರ್‌ಆರ್‌ಸಿ (CRRC) ಕಂಪನಿಯಿಂದ ಬರಬೇಕಿದ್ದ ಚಾಲಕರಹಿತ ರೈಲುಗಳ ಪೂರೈಕೆಯಲ್ಲಿ ವಿಳಂಬವಾಯಿತು. 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯ ಕಾರಣಕ್ಕೆ ರೈಲು ಉತ್ಪಾದನೆಗೆ ತಡೆ ಉಂಟಾಗಿ, ನಂತರ ಸೀತಾಗರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಪ್ರಸ್ತುತ ಮೂರು ಚಾಲಕರಹಿತ ರೈಲುಗಳು ಮಾತ್ರ ಬಂದಿವೆ.
ಭರವಸೆ
ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇತ್ತೀಚೆಗೆ ಲಾಲ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ ಬಳಿಕ BMRCL ಆಗಸ್ಟ್ 15ರೊಳಗೆ ಮಾರ್ಗವನ್ನು ಆರಂಭಿಸುವ ಭರವಸೆ ನೀಡಿದೆ. ಸುರಕ್ಷತಾ ಮಾನ್ಯತೆ ಈಗಾಗಲೇ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಎಂಆರ್ಸಿಎಲ್ ಭರವಸೆ ನೀಡಿರುವಂತೆ, ಮುಂದಿನ ದಿನಗಳಲ್ಲಿ ಕೋಲ್ಕತ್ತಾದಲ್ಲಿ ಸಿದ್ಧಗೊಳ್ಳುತ್ತಿರುವ 14 ರೈಲುಗಳು ಹಳದಿ ಮಾರ್ಗಕ್ಕೆ ನಿಯೋಜನೆಯಾಗಲಿವೆ. ರೈಲುಗಳ ಸಂಖ್ಯೆ ಹೆಚ್ಚಾದಂತೆ, ಹಸಿರು ಮತ್ತು ನೇರಳೆ ಮಾರ್ಗಗಳಂತೆ ಕೆಲವೇ ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಓಡಾಟ ಆರಂಭಿಸಲಾಗುವುದು ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. ಅಲ್ಲಿಯವರೆಗೆ, ಹಳದಿ ಮಾರ್ಗದ ಪ್ರಯಾಣಿಕರು ರೈಲಿಗಾಗಿ ಕೊಂಚ ಹೆಚ್ಚು ಸಮಯ ಕಾಯುವುದು ಅನಿವಾರ್ಯವಾಗಿದೆ.