ಟೆಕ್ಕಿ ಆತ್ಮಹತ್ಯೆ ಪ್ರಕರಣ | ನ್ಯಾಯಾಧೀಶರ ವಿರುದ್ಧ ದಾಖಲಾಗದ ಪ್ರಕರಣ, ಚರ್ಚೆಗೆ ಗ್ರಾಸವಾದ ಪೊಲೀಸರ ನಡೆ
ಉತ್ತರಪ್ರದೇಶದ ಜೌನಪುರದಲ್ಲಿರುವ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಧೀಶೆ ರೀಟಾ ಕೌಶಿಕ್ ಕಚೇರಿಯ ಪೇಶ್ಕರ್ ಮಾಧವ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದರೂ ಬೆಂಗಳೂರು ಪೊಲೀಸರು ದೂ ದಾಖಲಿಸಿಕೊಳ್ಳದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.;
ಬೆಂಗಳೂರಿನಲ್ಲಿ ಸುದೀರ್ಘ ಡೆತ್‌ನೋಟ್ ಬರೆದು ಸಾವಿಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪತ್ನಿ ಹಾಗೂ ಆಕೆಯ ಕುಟುಂಬದವರ ಮಾನಸಿಕ ಕಿರುಕುಳ, ದೌರ್ಜನ್ಯದ ಜೊತೆಗೆ ನ್ಯಾಯಾಧೀಶರ ಭ್ರಷ್ಟಾಚಾರ, ಪಕ್ಷಪಾತದ ಕುರಿತಾಗಿಯೂ 26ಪುಟಗಳ ಡೆತ್‌ನೋಟ್ ಬರೆದು, ಸುಪ್ರೀಂಕೋರ್ಟ್, ಹೈಕೋರ್ಟ್‌ಗೆ ಕಳುಹಿಸುವ ಮೂಲಕ ಪುರುಷರ ಮೇಲಿನ ದೌರ್ಜನ್ಯ ಖಂಡಿಸಿರುವುದು ಕುತೂಹಲ ಕೆರಳಿಸಿದೆ. ಇದೇ ವಿಚಾರ ಸಾಮಾಜಿಕ ಮಾಧ್ಯಮದ ಎಕ್ಸ್‌ನಲ್ಲಿ ಟ್ರೆಂಡಿಂಗ್ ಸುದ್ದಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ.
ಉತ್ತರಪ್ರದೇಶ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ವಿರುದ್ಧ ಭ್ರಷ್ಟಾಚಾರ ಹಾಗೂ ಪಕ್ಷಪಾತದ ನ್ಯಾಯವಿತರಣೆ ಆರೋಪ ಮಾಡಿದ್ದರೂ ಯಾವುದೇ ದೂರು ದಾಖಲಾಗದಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ನ್ಯಾಯಾಧೀಶೆ ರೀಟಾ ಕೌಶಿಕ್ ಕೋರ್ಟ್ ಹಾಲ್ ನ ಅಧಿಕಾರಿ ಪೇಶ್ಕರ್ ಮಾಧವ ಎಂಬ ಅಧಿಕಾರಿ ಪ್ರತಿ ಪ್ರಕರಣದಲ್ಲಿ ದೂರುದಾರ ಹಾಗೂ ಅರ್ಜಿದಾರರಿಂದ ಕನಿಷ್ಠ 50 ರು. ಪಡೆಯುತ್ತಿದ್ದಾರೆ. ಇದಲ್ಲದೇ ಪ್ರಕರಣದಲ್ಲಿ ನ್ಯಾಯಾಧೀಶೆ ೫ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ನಾನು ನಿರಾಕರಿಸಿದ್ದೆ ಎಂದು ಡೆತ್‌ನೋಟ್‌ನಲ್ಲಿ ಅತುಲ್ ಸುಭಾಷ್ ಉಲ್ಲೇಖಿಸಿದ್ದಾರೆ.
ಉತ್ತರಪ್ರದೇಶ ಜೌನಪುರದಲ್ಲಿರುವ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಧೀಶೆ ರೀಟಾ ಕೌಶಿಕ್ ಕಚೇರಿಯ ಪೇಶ್ಕರ್ ಮಾಧವ್ ವಿರುದ್ಧ ಅತುಲ್ ಸುಭಾಷ್ ಡೆತ್‌ನೋಟ್‌ನಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಆದರೆ, ಡೆತ್‌ನೋಟ್‌ನಲ್ಲಿರುವ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಮಾತ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಧೀಶರ ವಿರುದ್ಧ ಯಾವುದೇ ಕೇಸು ದಾಖಲು ಮಾಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ ಗುಣಾರೆ, ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತ್ತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನಷ್ಟೇ ತನಿಖೆ ಆರಂಭಸಬೇಕಿದೆ. ಈಗಾಗಲೇ ಮಾರತ್ತಹಳ್ಳಿ ಠಾಣೆ ಪಿಎಸ್‌ಐ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸ್ಥಳ ಮಹಜರು ನಡೆಸಿದ ಬಳಿಕ ಆರೋಪಿಗಳನ್ನು ಕರೆತಂದು ವಿಚಾರಣೆ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಉತ್ತರಪ್ರದೇಶದ ಜೌನಪುರದ ಜಡ್ಜ್ ವಿರುದ್ಧ ಅತುಲ್ ಸುಭಾಷ್ ಡೆತ್‌ನೋಟ್‌ನಲ್ಲಿ ಹೆಸರಿಸಿದ್ದರೂ, ಅವರ ಬಗ್ಗೆ ಎಫ್‌ಐಆರ್ ಆಗಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ ಗುಣಾರೆ, "ಸುಭಾಷ್ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಅದರಲ್ಲಿ ಅವರು ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲಷ್ಟೇ ದೂರಿದ್ದಾರೆ. ಆ ಕಾರಣಕ್ಕೆ ಆ ವ್ಯಕ್ತಿಗಳ ಹೆಸರುಗಳನ್ನು ಮಾತ್ರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ," ಎಂದು ತಿಳಿಸಿದ್ದಾರೆ.
ಈಗಾಗಲೇ ಮಾರತ್ತಹಳ್ಳಿ ಪೊಲೀಸರು, ಉತ್ತರ ಪ್ರದೇಶದ ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ಇಂದು ತನಿಖಾ ತಂಡ ಉತ್ತರ ಪ್ರದೇಶಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, "#justiceforatul" ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಭಿಯಾನ ಆರಂಭವಾಗಿದೆ. ಅತುಲ್ ಸುಭಾಷ್ ಆಪ್ತರು, ಹಿತೈಶಿಗಳು ಸೇರಿ ಹಲವರು ಪೋಸ್ಟ್ ಶೇರ್ ಮಾಡಿದ್ದಾರೆ. ಅತುಲ್ ಸಾವಿಗೆ ನ್ಯಾಯ ಕೊಡಿಸಿ ಎಂದು ಅಭಿಯಾನ ನಡೆಸುತ್ತಿದ್ದಾರೆ.
ಅತುಲ್ ಆತ್ಮಹತ್ಯೆ ಹಿಂದಿನ ವಿಚಾರ ಬಹಿರಂಗ
ಅತುಲ್ ಸುಭಾಷ್ ಆತ್ಮಹತ್ಯೆಗೆ ಪತನಿ ನಿಖಿತಾ ಸಿಂಘಾನಿಯಾ ದಾಖಲಿಸಿದ್ದ ದೂರುಗಳು ಹಾಗೂ ಕಿರುಕುಳವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಖಿತಾ ಸಿಂಘಾನಿಯಾ ಉತ್ತರಪ್ರದೇಶದ ವಿವಿಧ ಠಾಣೆಗಳು ಹಾಗೂ ನ್ಯಾಯಾಲಯದಲ್ಲಿ ಅತುಲ್ ವಿರುದ್ಧ 9 ಪ್ರಕರಣ ದಾಖಲಿಸಿದ್ದರು. ಕೊಲೆ, ಅಸಮರ್ಪಕ ಲೈಂಗಿಕ ಕ್ರಿಯೆ, ಹಣಕ್ಕಾಗಿ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಒಟ್ಟು ೯ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಹಲವು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದವು. ಬೆಂಗಳೂರಿನಲ್ಲಿ ವಾಸವಿದ್ದ ಅತುಲ್ ಸುಭಾಷ್ ವಿಚಾರಣೆಗಾಗಿ ಪ್ರತಿಬಾರಿ ಉತ್ತರಪ್ರದೇಶಕ್ಕೆ ಹೋಗಬೇಕಾಗಿತ್ತು. ಇನ್ನು ನಾಲ್ಕೂವರೆ ವರ್ಷದ ಮಗನನ್ನು ಪತ್ನಿಯೇ ಕರೆದುಕೊಂಡು ಹೋಗಿದ್ದರು. ಎರಡು ವರ್ಷದಿಂದ ಮಗನನ್ನು ನೋಡಲು ಬಿಡುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಅತುಲ್ ಸುಭಾಷ್ ನೊಂದಿದ್ದರು ಎನ್ನಲಾಗಿದೆ.
ಪ್ರಸಕ್ತ ವರ್ಷದಲ್ಲಿ ಅರ್ಧ ವರ್ಷ ಪೂರ್ತಿ ಕಾನೂನಿನ ಹೋರಾಟದಲ್ಲೇ ಕಳೆದಿದ್ದರು. ಜೊತೆಗೆ ವಿಚ್ಛೇಧನ ನೀಡಲು 3 ಕೋಟಿ ರೂ. ಹಣ ನೀಡುವಂತೆ ಪತ್ನಿ ನಿಖಿತಾ ಬೇಡಿಕೆ ಇಟ್ಟಿದ್ದರು ಎಂಬುದು ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಎಂಬಿಎ ಪದವೀಧರೆ, ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ
ಇನ್ನು ಹಣಕ್ಕಾಗಿ ಪೀಡಿಸುತ್ತಿರುವ ಪತ್ನಿ ನಿಖಿತಾ ಸಿಂಘಾನಿಯಾ ಎಂಬಿಎ ಪದವೀಧರೆಯಾಗಿದ್ದು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಪ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನನ್ನ ಹಾಗೂ ಕುಟುಂಬದವರ ವಿರುದ್ಧ ದಾಖಲಿಸಿದ್ದ ಕೊಲೆ ಪ್ರಕರಣವನ್ನು ಹಿಂಪಡೆದಿದ್ದರು. ಅದೇ ರೀತಿ ವಿಚ್ಛೇಧನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆರು ತಿಂಗಳ ಬಳಿಕ ವಾಪಸ್ ಪಡೆದಿದ್ದರು. ಆದರೂ ಬೇರೆ ಸೆಕ್ಷನ್‌ಗಳಡಿ ವಿಚಾರಣೆ ನಡೆಯುತ್ತಿದೆ ಎಂದು ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.