ಎಸ್‌ಐಟಿ ರಚಿಸಿದ್ದರಿಂದ ಸತ್ಯ ಹೊರಗೆ, ಸರ್ಕಾರಕ್ಕೆ ನಾನು ಅಭಾರಿ: ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ
ಬೆಂಗಳೂರು ಅಥವ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಆಭಾರಿ ಎಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ
ಧರ್ಮಸ್ಥಳ ಕುರಿತಾದ ಹಲವು ಆರೋಪಗಳ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಿದ್ದಕ್ಕೆ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಇದರಿಂದ ಸತ್ಯ ಹೊರಗೆ ಬರುತ್ತಿದೆ ಎಂದು ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಂಗಳೂರು ಅಥವಾ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಆಭಾರಿ. ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ, ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ ಎಂದರು.
ತಪ್ಪು ಮಾಡದ ಕಾರಣ ಆತ್ಮವಿಶ್ವಾಸ ಹೆಚ್ಚು
ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಎಂದು ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಎಂದು ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿದಿದೆ. ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಎಂದು ಹೇಳಿದ್ದಾರೆ. ಈ ಶತ್ರುತ್ವ ಯಾಕೆ ಎಂದು ಕೇಳುತ್ತಾರೆ, ನನಗೂ ಈ ದ್ವೇಷ ಯಾಕೆ ಬೇಕು. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ ಎಂದು ಹೇಳಿದರು.
ಸೇವೆ ಪ್ರಚಾರದ ವಸ್ತುವಲ್ಲ
ಶತ್ರುತ್ವ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತು ಅಂತ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ, ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ ನಿಮಿತ್ತ ಮಾತ್ರ, ಆದರೆ ಮುಂದುವರೆಸಿಕೊಂಡು ಹೋಗಿದ್ದು ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದ್ರು, ಇವರು ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ತಿಳಿಸಿದರು.
ಕೋವಿಡ್ ಸಂದರ್ಭ ಹಾಗೂ ಈಗ ಅನೇಕ ಪುಸ್ತಕಗಳನ್ನು ನಾನು ಓದುತ್ತಿದ್ದೇನೆ. ಸಿದ್ದಗಂಗಾ ಶ್ರೀಗಳ ಹಲವು ಪುಸ್ತಕ ನಾನು ಓದಿದ್ದೇನೆ. ನಮ್ಮನ್ನ ಹೊಗಳಿದ್ದೀರಿ, ಆದರೆ ನಮ್ಮ ಸೇವೆ, ಧರ್ಮ ನಮಗೆ ಮುಖ್ಯ. ಸಿದ್ದಗಂಗಾ ಶ್ರೀಗಳು 108 ವರ್ಷ ಬದುಕಿದವರು ಹೇಳಿದ ಮಾತಿದು ಎಂದರು.