HPPL PROJECT | 10 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಸಿದ ಕಂಪೆನಿ

ಬಂದರು ಕಂಪೆನಿಯ ಮಾತೃ ಸಂಸ್ಥೆ ರಾಜಕೀಯ ಪಕ್ಷಗಳಿಗೆ ಕೋಟ್ಯಾಂತರ ರೂ.ಗಳ ದೇಣಿಗೆ ನೀಡಿರುವ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳೀಯರಲ್ಲಿ ರಾಜಕಾರಣಿಗಳ ಮೇಲಿನ ಅನುಮಾನಗಳು ದಟ್ಟವಾಗತೊಡಗಿದೆ.;

Update: 2024-03-19 13:04 GMT

ರಾಜಕೀಯ ಪಕ್ಷಗಳಿಗೆ ಕಂಪನಿಗಳು ಕೋಟಿ ಕೋಟಿಗಳ ಲೆಕ್ಕದಲ್ಲಿ ಚುನಾವಣಾ ಬಾಂಡ್ ನೀಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಹೊನ್ನಾವರದಲ್ಲಿ ಸ್ಥಳೀಯ ಮೀನುಗಾರರ ವಿರೋಧದ ನಡುವೆಯೂ ಬಂದರು ನಿರ್ಮಾಣ ಮಾಡುತ್ತಿರುವ ಹೊನ್ನಾವರ ಖಾಸಗಿ ಬಂದರು ಲಿಮಿಟೆಡ್ (HPPL) ಸಂಸ್ಥೆಯ ಮಾತೃ ಸಂಸ್ಥೆಯಾದ ಜಿವಿಪಿಆರ್ ಇಂಜಿನಿಯರ್ಸ್ (GVPR Engineers Limited) ಕಂಪೆನಿಯು ರಾಜಕೀಯ ಪಕ್ಷಗಳ ತಲಾ ಒಂದೊಂದು ಕೋಟಿಗಳ 10 ಚುನಾವಣಾ ಬಾಂಡುಗಳನ್ನು ಖರೀದಿಸಿರುವ ಅಂಶ ಬೆಳಕಿಗೆ ಬಂದಿದೆ.


 


HPPL ಸಂಸ್ಥೆ GVPR ಇಂಜಿನಿಯರ್ಸ್ ಲಿಮಿಟೆಡ್‌ ನ ಅಧೀನದಲ್ಲಿರುವ ಕಂಪೆನಿ ಅನ್ನುವುದಕ್ಕೆ ಸಾಕ್ಷಿ

ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಚುನಾವಣಾ ಬಾಂಡ್ ಗಳ ವಿವರದಲ್ಲಿ ಜಿವಿಪಿಆರ್ ಇಂಜಿನಿಯರ್ಸ್ 2023 ರ ಅಕ್ಟೋಬರ್ 7 ರಂದು ಒಂದೊಂದು ಕೋಟಿಯ ತಲಾ ಐದು ಬಾಂಡ್ ಗಳನ್ನು ಖರೀದಿಸಿದೆ. ನಂತರ 2024 ರ ಜನವರಿ 10 ರಲ್ಲಿ ಮತ್ತೆ ತಲಾ ಐದು ಬಾಂಡ್‌  ಖರೀದಿಸಿದೆ. ಜಿವಿಪಿಆರ್‌ ಇಂಜಿನಿಯರ್ಸ್‌ ಚುನಾವಣಾ ಬಾಂಡ್‌ ಖರೀದಿಸಿದ ಅವಧಿಯಲ್ಲಿಯೇ ಬಂದರು ಕಂಪನಿ ವಿರುದ್ಧ ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ನಡೆಸಲಾಗಿತ್ತು.

ಇದನ್ನೂ ಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ

ಆದರೆ, ಯಾವ ಪಕ್ಷಕ್ಕಾಗಿ ಈ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣಾ ಬಾಂಡುಗಳ ಅಲ್ಫಾ ನ್ಯೂಮರಿಕ್‌ ಸಂಖ್ಯೆಗಳ ವಿವರಗಳನ್ನು ಬಹಿರಂಗಪಡಿಸುವಂತೆ ಎಸ್‌ಬಿಐಗೆ ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದು, ಈ ಸಂಖ್ಯೆ ಬಹಿರಂಗವಾದರೆ, ಯಾವ ಸಂಸ್ಥೆ ಯಾವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

ಜಿಪಿವಿಆರ್‌ ಇಂಜಿನಿಯರ್ಸ್‌ ಕಂಪೆನಿ ಚುನಾವಣಾ ಬಾಂಡ್‌ ಖರೀದಿಸಿರುವ ವಿವರ | ಕೃಪೆ: ECI

ಏನಿದು HPPL ಯೋಜನೆ?

ಸಾಗರ್ ಮಾಲಾ ಅಭಿವೃದ್ಧಿ ಯೋಜನೆಯ ಭಾಗವಾಗಿ ಹೈದರಾಬಾದ್ ಮೂಲಕ ಖಾಸಗಿ ಕಂಪನಿ ಹೊನ್ನಾವರದ ಶರಾವತಿ ನದಿ ಅಳಿವೆಯ ಸುತ್ತಮುತ್ತ ಬೃಹತ್ ಬಂದರು ನಿರ್ಮಾಣ ಕೈಗೆತ್ತಿಕೊಂಡಿದೆ. ಈ ಖಾಸಗಿ ಬಂದರು ಯೋಜನೆ ಕಾಸರಕೋಡು ಪಂಚಾಯ್ತಿ ವ್ಯಾಪ್ತಿಯ ಕಾಸರಕೋಡು, ಟೋಂಕಾ 1, ಟೋಂಕಾ 2, ಪಾವಿನಕುರ್ವೆ, ಮಲ್ಲುಕುರ್ವೆ ಮತ್ತು ಹೊನ್ನಾವರ ಗ್ರಾಮೀಣ ಎಂಬ ಐದು ಮೀನುಗಾರಿಕಾ ಗ್ರಾಮಗಳ 44 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ವಿಸ್ತರಿಸಿದೆ.

2010ರಲ್ಲಿಯೇ ಬಂದರು ನಿರ್ಮಾಣದ ಕುರಿತು ಕರ್ನಾಟಕ ಸರ್ಕಾರ ಮತ್ತು ಖಾಸಗಿ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿತ್ತು. ಆಗಿನಿಂದಲೂ ಸ್ಥಳೀಯ ಮೀನುಗಾರರು ಈ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದಾರೆ. ಸರ್ಕಾರ ಮತ್ತು ಕಂಪನಿಯ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮೀನುಗಾರರ ಎತ್ತಂಗಡಿಗೆ ಬಲಪ್ರಯೋಗ, ದಬ್ಬಾಳಿಕೆ, ಸುಳ್ಳು ಕೇಸು, ಮುಂತಾದ ಅಪ್ರಜಾಸತ್ತಾತ್ಮಕ ವರಸೆಗಳನ್ನು ಚಲಾಯಿಸುತ್ತಲೇ ಇದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: HPPL PROJECT | ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ಸರಣಿಗೆ ಕೊನೆ ಇಲ್ಲ!

ಇದೀಗ, ಬಂದರು ಕಂಪೆನಿಯ ಮಾತೃ ಸಂಸ್ಥೆಯು ರಾಜಕೀಯ ಪಕ್ಷಗಳಿಗೆ ಕೋಟ್ಯಾಂತರ ರೂ.ಗಳ ದೇಣಿಗೆ ನಡೆದಿರುವ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳೀಯರಲ್ಲಿ ರಾಜಕಾರಣಿಗಳ ಮೇಲೆ ಆಕ್ರೋಶ ಹೆಚ್ಚಾಗಿದೆ. ಕಂಪೆನಿಯ ಕುಮ್ಮಕ್ಕಿನಿಂದಲೇ ಆಡಳಿತ ತಮ್ಮ ವಿರುದ್ಧ ದಬ್ಬಾಳಿಕೆ ಮಾಡುತ್ತಿದೆ ಎಂಬ ಅಭಿಪ್ರಾಯಕ್ಕೆ ಚುನಾವಣಾ ಬಾಂಡ್‌ ಇನ್ನಷ್ಟು ಇಂಬು ನೀಡಿದೆ. 

ಕಾಂಗ್ರೆಸ್ ಅನುಮಾನಸ್ಪದ ಮೌನ!

ಹಾಲಿ ಮೀನುಗಾರಿಕಾ ಸಚಿವರಾಗಿರುವ ಮಂಕಾಳ್ ವೈದ್ಯ ಅವರು ಈ ಹಿಂದೆ ಬಂದರು ಯೋಜನೆ ವಿರುದ್ಧ ದನಿಯೆತ್ತುತ್ತಾ ಬಂದಿದ್ದರಾದರೂ, ಇತ್ತೀಚಿನ ಅವರ ನಿಗೂಢ ನಡೆಗಳು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ ಎಂದು ಬಂದರು ನಿರ್ಮಾಣ ವಿರೋಧಿ ಹೋರಾಟಗಾರರೊಬ್ಬರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನಾಯಕರು ಬಂದರು ಯೋಜನೆ ವಿರೋಧಿ ಹೋರಾಟ ಮಾಡುತ್ತಿದ್ದ ನಮ್ಮೊಂದಿಗೆ ನಿಲುತ್ತಿದ್ದರು. 2021 ಅಥವಾ 22 ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಅವರು, ಸ್ಥಳೀಯ ಮೀನುಗಾರರ ಪರವಾಗಿ ನಿಲ್ಲುವುದಾಗಿ ಹೇಳಿದ್ದರು. ಈಗಿನ ಸಚಿವ ಮಂಕಾಳ್ ವೈದ್ಯ ಅವರೂ ಹೋರಾಟಗಾರರ ಪರ ನಿಲ್ಲುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ ಮೇಲೆ ಮೀನುಗಾರರ ಮೇಲೆ ಬಂದರು ನೌಕರರಿಂದ ದೌರ್ಜನ್ಯ ಆದರೂ ಸರ್ಕಾರ ಮಧ್ಯಪ್ರವೇಶಿಸುತ್ತಿಲ್ಲ, ಬದಲಾಗಿ ಹೋರಾಟಗಾರರ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ದೂರಿದ್ದಾರೆ.

ಜಿಪಿವಿಆರ್‌ ಇಂಜಿನಿಯರ್ಸ್‌ ಕಂಪೆನಿ ಚುನಾವಣಾ ಬಾಂಡ್‌ ಖರೀದಿಸಿರುವ ವಿವರ | ಕೃಪೆ: ECI

ಮಾಜಿ ಶಾಸಕರಾಗಿದ್ದಾಗ ʼವಾಣಿಜ್ಯ ಬಂದರು ನಿರ್ಮಾಣ ಕೈಬಿಡಬೇಕು ಇಲ್ಲದಿದ್ದರೆ ಮೀನುಗಾರರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದುʼ ಎಂದು ಹೇಳುತ್ತಿದ್ದ ಮಂಕಾಳ್ ವೈದ್ಯ ಅವರು, ಇತ್ತೀಚೆಗೆ (2023 ಅಕ್ಟೋಬರ್) ಬಂದರು ಯೋಜನೆ ಬಗ್ಗೆ ಮೃದುವಾಗಿ ಮಾತನಾಡಿದ್ದರು. “ಎಚ್ಪಿಪಿಎಲ್ ಆರಂಭದಲ್ಲಿ ಉತ್ತಮವಾಗಿ ಯೋಜಿಸಿದ್ದರೆ, ಸಮಸ್ಯೆ ಸಂಭವಿಸುತ್ತಿರಲಿಲ್ಲ. ನಾನು ಪರಿಶೀಲಿಸಿ, ಸಮಸ್ಯೆ ಬಗೆಹರಿಯುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಮಂಕಾಳ್ ವೈದ್ಯ ಹೇಳಿದ್ದರು. ವಾಣಿಜ್ಯ ಬಂದರು ನಿರ್ಮಾಣ ಕೈಬಿಡದೆ ಸಮಸ್ಯೆ ಹೇಗೆ ಬಗೆ ಹರಿಯುತ್ತದೆ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿಯೇ ಹೋರಾಟಗಾರರ ನಡುವೆ ಉಳಿದಿದೆ.

ಇದನ್ನೂ ಓದಿ: HPPL PROJECT | ಹೊನ್ನಾವರ ಒಣಮೀನು ಉದ್ಯಮಕ್ಕೆ ಬೆಂಕಿ ಇಟ್ಟ ಬಂದರು

ಕಾಂಗ್ರೆಸ್ ಬಂದರು ಕಂಪೆನಿಯಿಂದ ಚುನಾವಣಾ ಬಾಂಡ್ ಪಡೆದಿರುವ ಬಗ್ಗೆ ಹಲವು ಹೋರಾಟಗಾರರು ಗುಮಾನಿ ವ್ಯಕ್ತಪಡಿಸಿದ್ದು, ʼದಿ ಫೆಡೆರಲ್ ಕರ್ನಾಟಕʼ ಜೊತೆ ಮಾತನಾಡಿದ ರಾಜೇಶ್ ತಾಂಡೇಲಾ ಅವರು ಕೂಡಾ ಇದೇ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.

“ಬಂದರು ಯೋಜನೆ ವಿರುದ್ಧ ಹೋರಾಟ ಮಾಡಿದವರ ಮೇಲೆ ಕಾಂಗ್ರೆಸ್ ಅವಧಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಮಹಿಳೆಯರನ್ನು ಜುಟ್ಟು ಹಿಡಿದುಕೊಂಡು ಎಳೆದಾಡಲಾಗಿದೆ. ಪೊಲೀಸರು ದೈಹಿಕ, ಮಾನಸಿಕ ದೌರ್ಜನ್ಯ ಮಾಡಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೇ ನಡೆದಿರುವುದರಿಂದ ಯಾರನ್ನೂ ನಂಬಲಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ಬಂದರು ಪರವಾಗಿ ಬಿಜೆಪಿ ಬ್ಯಾಟಿಂಗ್

2010 ರಲ್ಲಿ ಹೊನ್ನಾವರ ಬಂದರು ಯೋಜನೆಗೆ ಆಗಿನ ಬಿಎಸ್ ಯಡಿಯೂರಪ್ಪ ಅವರ ಸರ್ಕಾರವೇ ಗ್ರೀನ್ ಸಿಗ್ನಲ್ ನೀಡಿತ್ತು. ನಂತರ ಬಿಜೆಪಿ ಜನಪ್ರತಿನಿಧಿಗಳು ಬಂದರು ಪರವಾಗಿಯೇ ದನಿಯೆತ್ತುತ್ತಾ ಬಂದಿದ್ದರು.

ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರೂ ಬಂದರಿನ ಪರವಾಗಿದ್ದರು. ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ ಫಂಡ್ ನೀಡಲಾಗಿದೆ ಎಂಬ ಆರೋಪಗಳೂ ಸ್ಥಳೀಯವಾಗಿ ಕೇಳಿ ಬಂದಿದೆ.

ಅನಂತಕುಮಾರ್ ಹೆಗಡೆ ಅವರು ಮೀನುಗಾರರ ಹೋರಾಟದ ವಿರುದ್ಧವೇ ಹೇಳಿಕೆ ನೀಡಿದ್ದರು. ಹೋರಾಟಗಾರರನ್ನು ಮಣಿಸುತ್ತೇವೆ, ಬಂದರು ನಿರ್ಮಾಣ ಮಾಡಿಯೇ ತೀರುತ್ತೇವೆ, ಮೀನುಗಾರರನ್ನು ಹೊರ ದಬ್ಬುತ್ತೇವೆ ಎಂದಿದ್ದರು. ನಂತರ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿಯ ಎಲ್ಲರೂ ಬಂದರು ಪರವಾಗಿಯೇ ಇದ್ದರು.

ಇದನ್ನೂ ಓದಿ: HPPL Project | ಆಲಿವ್‌ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ

ʼದಿ ಫೆಡೆರಲ್ ಕರ್ನಾಟಕʼ ಜೊತೆ ಮಾತನಾಡಿದ ಸ್ಟೇಟ್ ನ್ಯಾಷನಲ್ ಫಿಶರ್ ಮೆನ್ಸ್ ಅಸೋಸಿಯೇಶನ್ಸ್ ಸ್ಟೇಟ್ ಸೆಕ್ರೆಟರಿ ಚಂದ್ರಕಾಂತ್ ಕೊಚ್ರೇಕಾರ್ ಅವರು, ʼಬಂದರು ನಿರ್ಮಾಣದ ಕಂಪೆನಿ ಚುನಾವಣಾ ಬಾಂಡ್ ಖರೀದಿಸಿರುವುದು ಗೊತ್ತಾಗಿದೆ. ಆದರೆ, ಯಾವ ಪಕ್ಷಕ್ಕೆ ಹಣ ಹೋಗಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಬದಲಾರದ ಕಾಲಘಟ್ಟದಲ್ಲಿ ಯಾರನ್ನೂ ನಂಬುವಂತಹ ಪರಿಸ್ಥಿತಿ ಇಲ್ಲ. ಈ ಹಿಂದೆ ಕಾಂಗ್ರೆಸ್ ನವರು ಮೀನುಗಾರರ ಪರ ದನಿಯೆತ್ತುವುದಾಗಿ ಹೇಳಿದ್ದರು. ಬಿಜೆಪಿಯವರು ಬಂದರು ಪರವಾಗಿದ್ದರು. ಆದರೆ, ಈಗ ಸಚಿವ ಮಂಕಾಳ್ ವೈದ್ಯರ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಶುರುವಾಗಿದೆ. ಚುನಾವಣಾ ಬಾಂಡ್ ಅನ್ನುವುದು ಲಂಚದ ಇನ್ನೊಂದು ರೂಪವೇ ಆಗಿದೆ. ರಾಜಕೀಯ ಪಕ್ಷಗಳು ಕಂಪೆನಿಗಳಿಂದ ಬಾಂಡ್ ಮುಖಾಂತರ ಲಂಚ ಪಡೆದು ಜನವಿರೋಧಿ ಕ್ರಮಗಳನ್ನು ತರುವುದು ಸರಿಯಲ್ಲʼ ಎಂದಿದ್ದಾರೆ.

ʼಬಂದರು ವಿರೋಧಿ ಹೋರಾಟಕ್ಕೆ ಸಂಬಂಧಿಸಿದಂತೆ ಬಿ. ಜೆ. ಪಿ. ಸರ್ಕಾರದ ಅವಧಿಯಲ್ಲಿ ಕಾಸರಕೋಡಿನ ಮೀನುಗಾರರ ಮೇಲೆ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೂ ಸಹ ಕೆಲವು ಪ್ರಕರಣ ದಾಖಲಾಗಿದೆ. ಬಂದರು ವಿರೋಧಿ ಹೋರಾಟದಲ್ಲಿ ಈ ಹಿಂದೆ ಈಗಿನ ಸಚಿವ ಮಂಕಾಳು ವೈದ್ಯ ಸಹ ಭಾಗವಹಿಸಿದ್ದರು.ಮೀನುಗಾರರ ಹೋರಾಟವನ್ನು ಬೆಂಬಲಿಸಿದ್ದರು. ಆದರೆ ಅವರು ಸಚಿವರಾದ ನಂತರ ಅವರು ಕಾಸರಕೋಡ ಬಂದರು ವಿಚಾರದಲ್ಲಿ ತಮ್ಮ ನಿಲುವನ್ನು ಬಹಿರಂಗವಾಗಿ ಈವರೆಗೆ ಸ್ಪಷ್ಟ ಪಡಿಸಿಲ್ಲವಾದರೂ ಮೀನುಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದುʼ ಎಂದು ಚಂದ್ರಕಾಂತ್ ಹೇಳಿದ್ದಾರೆ.

ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ

ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಮೀನುಗಾರರು ಇದೀಗ ಬೇಸತ್ತಿದ್ದು, ಚುನಾವಣೆ ಬಹಿಷ್ಕರಿಸಲು ಚಿಂತನೆ ನಡೆಸುತ್ತಿದ್ದಾರೆ. ದಿನನಿತ್ಯ ದುಡಿಯ ಬೇಕಾದವರು ಹೋರಾಟ, ಕೋರ್ಟು, ಕೇಸು ಎಂದು ಅಲೆದಾಡಲು ಸಮಯವಿಲ್ಲ, ಆದರೂ ಜನ ಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಜನ ಪ್ರತಿನಿಧಿಗಳೊಂದಿಗೆ, ಸಚಿವರೊಂದಿಗೆ ಮತ್ತೊಮ್ಮೆ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ, ಸಕರಾತ್ಮಕ ಸ್ಪಂದನೆ ಸಿಗದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಹೋರಾಟದ ಪ್ರಮುಖರು ಹೇಳಿದ್ದಾರೆ.

Tags:    

Similar News