Ambulance | ಸರ್ಕಾರದ ಸುಪರ್ದಿಗೆ 108 ಅಂಬ್ಯುಲೆನ್ಸ್ ಸೇವೆ; ದಿನೇಶ್‌ ಗುಂಡೂರಾವ್‌

108 ಅಂಬ್ಯುಲೆನ್ಸ್ ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯವಾದದ್ದು. ಖಾಸಗಿ ಏಜೆನ್ಸಿಯಿಂದ 108 ಅಂಬುಲೆನ್ಸ್‌ ನಿರ್ವಹಣೆಯನ್ನು ವಾಪಸ್‌ ಸರ್ಕಾರಕ್ಕೆ ಪಡೆಯಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.;

Update: 2025-05-14 13:19 GMT

108 ಆಂಬ್ಯುಲೆನ್ಸ್

ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗಳಿಗೆ ಸಾಗಿಸಲು ಪರಿಚಯಿಸಲಾದ 108 ಅಂಬ್ಯುಲೆನ್ಸ್ ಸೇವೆ ಹಾಗೂ ಅದರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಂದ ತನ್ನ ಸುಪರ್ದಿಗೆ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 108 ಅಂಬುಲೆನ್ಸ್‌ ಸೇವೆಯ ನಿರ್ವಹಣೆಯಲ್ಲಿ ಸಾಕಷ್ಟು ಲೋಪಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ʻದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

108 ಅಂಬ್ಯುಲೆನ್ಸ್‌ ಸೇವೆ ಹಾಗೂ ನಿರ್ವಹಣೆಯನ್ನು ಇಲ್ಲಿಯವರೆಗೆ ಖಾಸಗಿ ಏಜೆನ್ಸಿಗಳು ನೋಡಿಕೊಳ್ಳುತ್ತಿದ್ದವು. ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿರುವ 108ಅಂಬುಲೆನ್ಸ್‌ಗಳ ನಿರ್ವಹಣೆ ಬಗ್ಗೆ ದೂರುಗಳು ಬಂದಿದ್ದವು. ರಾಜ್ಯ ಸರ್ಕಾರ ಏಜೆನ್ಸಿಗಳಿಗೆ ಹಣ ಪಾವತಿಸಿದರೂ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅಂಬುಲೆನ್ಸ್‌ ಸೇವೆಯನ್ನು ನಿರ್ವಹಿಸಲು ತೀರ್ಮಾನಿಸಿದೆ ಎಂದು ಹೇಳಿದರು.   

108 ಅಂಬ್ಯುಲೆನ್ಸ್ ಗಳ ಮಾಲೀಕತ್ವ ಸರ್ಕಾರದ ಬಳಿಯೇ ಇತ್ತು. ಡಿಸೇಲ್, ಪೆಟ್ರೋಲ್ ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಸರ್ಕಾರವೇ ನೀಡುತ್ತಿತ್ತು. ಆದರೆ, ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜೆನ್ಸಿಗಳು ಅಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡುತ್ತಿದ್ದರು. ಈಗ ಕಮಾಂಡ್‌ ಸೆಂಟರ್‌ಗಳನ್ನು ಸರ್ಕಾರವೇ ನಡೆಸುವ ಮೂಲಕ ಏಜೆನ್ಸಿಗಳ ಬಳಿ ಇರುವ ಈ ಸೇವೆಯನ್ನು ತಾನೇ ನೋಡಿಕೊಳ್ಳಲಿದೆ. ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ಹಣ ಉಳಿತಾಯವಾಗಲಿದೆ. ಜೊತೆಗೆ ಅಂಬುಲೆನ್ಸ್‌ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Tags:    

Similar News