ಪ್ರೌಢಶಾಲೆ ಸಹ ಶಿಕ್ಷಕರಿಗೆ ಸಿಹಿ ಸುದ್ದಿ; ಫೆಬ್ರವರಿಯಲ್ಲಿ ಬಡ್ತಿ ಪ್ರಕ್ರಿಯೆ ಪೂರ್ಣ
ಪ್ರೌಢಶಾಲಾ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿದ ಬಳಿಕ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.;
ಮುಂಬಡ್ತಿ ನಿರೀಕ್ಷೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಹಿ ಸುದ್ದಿ ನೀಡಿದೆ. ರಾಜ್ಯಮಟ್ಟದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜೇಷ್ಠತಾ ಪಟ್ಟಿ ಸಿದ್ದಪಡಿಸಿ, ಫೆಬ್ರವರಿಯೊಳಗೆ ಬಡ್ತಿ ಪ್ರಕ್ರಿಯೆ ಮುಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪ್ರೌಢಶಾಲಾ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿದ ಬಳಿಕ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುತ್ತದೆ. ಆ ನಂತರ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಸ್.ವಿ. ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಈ ಮೇಲಿನಂತೆ ಉತ್ತರಿಸಿದ್ದಾರೆ.
ಉಪನ್ಯಾಸಕರ ಹುದ್ದೆಗೂ ಪದೋನ್ನತಿ
ಪ್ರೌಢಶಾಲಾ ಸಹಶಿಕ್ಷಕರನ್ನು ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡುವುದಕ್ಕೂ ಸರ್ಕಾರ ನಿರ್ಧರಿಸಿದೆ. ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ನಂತರದ ಪದೋನ್ನತಿ ಪ್ರಕ್ರಿಯೆಗಾಗಿ ರಾಜ್ಯಮಟ್ಟದಲ್ಲಿ ಒಂದೇ ಜೇಷ್ಠತಾ ಪಟ್ಟಿ ತಯಾರಿಸಲು ಕೋರಿ 2024 ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ) ಆಯುಕ್ತರು ಹಾಗೂ ಏಪ್ರಿಲ್ ತಿಂಗಳಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2024ರ ಅಕ್ಟೋಬರ್ 16ರಂದು ನೀಡಿರುವ ಅಭಿಪ್ರಾಯದನ್ವಯ ಶಾಲಾ ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪರಿಶೀಲಿಸಿ, ಅಂತಿಮವಾಗಿ ಒಂದೇ ಜೇಷ್ಠತಾ ಪಟ್ಟಿ ಪ್ರಕಟಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಬೇಕೆಂಬ ಪ್ರೌಢಶಾಲಾ ಸಹ ಶಿಕ್ಷಕರ ಬೇಡಿಕೆ ಕುರಿತು ಸದಸ್ಯ ಆರ್.ವಿ.ಸಂಕನೂರ ಸರ್ಕಾರದ ಗಮನ ಸೆಳೆದಿದ್ದರು.
ಉಪನ್ಯಾಸಕ ಹುದ್ದೆಗೆ ಪದೋನ್ನತಿ ಕೋರಿರುವ ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ ನಿಯಮ 7-ಎ ರಡಿ ಪರಿಶೀಲಿಸಿ ಕ್ರಮವಹಿಸಲು 2024 ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಧಾರವಾಡ ಮತ್ತು ಕಲಬುರಗಿಯ ಅಪರ ಆಯುಕ್ತರು, ಗೂ ಪದವಿ ಪೂರ್ವ ವಿಭಾಗದ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.