ಪೊಲೀಸರಿಗೆ ಬೆದರಿಕೆಯೊಡ್ಡಿದ ಪ್ರಕರಣ: ಹರೀಶ್‌ ಪೂಂಜಾ ವಿರುದ್ಧ ಸಿಎಂ ಕಿಡಿ

Update: 2024-05-25 11:25 GMT

ಬಿಜೆಪಿ ಮುಖಂಡನ ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಂಡ ಬೆಳ್ತಗಂಡಿ ಪೊಲೀಸರ ವಿರುದ್ಧ ಠಾಣೆಗೆ ನುಗ್ಗಿ ಧಮ್ಕಿ ಹಾಕಿದ್ದಲ್ಲದೆ ಅಶ್ಲೀಲ ಭಾಷೆ ಬಳಸಿ ಪೊಲೀಸರ ತಲೆಕಡಿಯಬೇಕು ಎನ್ನುವ ಹೇಳಿಕೆ ನೀಡಿದ ಆರೋಪ ಹೊತ್ತಿರುವ  ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನಡೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ಸಿದ್ದರಾಮಯ್ಯ ಅವರು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಹರೀಶ್ ಪೂಂಜಾ ಅವರ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ʻʻಕಾನೂನು ಎಲ್ಲರಿಗೂ ಒಂದೇ. ಐಪಿಸಿ 353ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು, ಅದು ಜಾಮೀನು ರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲುವಾಸದ ಶಿಕ್ಷೆ ನೀಡುವ ಅವಕಾಶವಿದೆ. ಆದರೆ ಹರೀಶ್ ಪೂಂಜಾ ಅವರು ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವೇ?ʼʼ ಎದು ಕೇಳಿದ್ದಾರೆ.

ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ʻʻಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ?ʼʼ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನೆ ಮಾಡಿದರು.

ಪ್ರಕರಣದ ಹಿನ್ನಲೆ:

ಶಾಸಕ ಹರೀಶ್ ಪೂಂಜಾ ಬೆಂಬಲಿಗರು ಮೆಲಂತಬೆಟ್ಟುವಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಬೆಳ್ತಂಗಡಿ ತಹಶಿಲ್ದಾರ್ ದಾಳಿ ಮಾಡಿದ್ದರು‌. ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಮೇ 18 ರಂದು ದೂರು ನೀಡಿದ್ದರು. ಇದರ ಪ್ರಕರ ಶಾಸಕರ ಆಪ್ತರಾದ ಪ್ರಮೋದ್ ಉಜಿರೆ ಮತ್ತು ಶಶಿರಾಜ್ ಶೆಟ್ಟಿ ಮೇಲೆ ದೂರು ದಾಖಲಾಗಿತ್ತು‌. ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ, ರೌಡಿಶೀಟರ್ ಆಗಿದ್ದ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು‌.

ಈ ವಿಚಾರ ತಿಳಿದ ಪೂಂಜಾ ಪೊಲೀಸರ ವಿರುದ್ಧ ಕೆಂಡಮಂಡಲರಾಗಿದ್ದರು. ಅಲ್ಲದೇ ಮೇ 18 ರ ರಾತ್ರಿ ತಮ್ಮ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದರು.‌ ಈ ವೇಳೆ ಪೊಲೀಸ್ ಠಾಣೆ ನಿಮ್ಮಪ್ಪಂದಾ ಎಂದು ಹರೀಶ್ ಪೂಂಜಾ ಬೆಳ್ತಂಗಡಿ ಠಾಣೆ PSI ಮುರಳೀಧರ್ ನಾಯ್ಕ್‌ಗೆ ಅವಾಜ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈಗ ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂಧನೆ ಆರೋಪದ ಮೇಲೆ ದೂರು ದಾಖಲಾಗಿತ್ತು‌. ಮೇ 19 ರಂದು ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 353, 504ರಡಿ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಇನ್ನು ಎಫ್​ಐಆರ್​ ಖಂಡಿಸಿ ಶಾಸಕ ಹರೀಶ್ ಪೂಂಜಾ ಬೆಂಬಲಿಗರ ಜೊತೆ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿದ್ದರು. ಅಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಸ್ ಪೂಂಜಾ ಮೇಲೆ ನಿನ್ನೆ(ಮೇ 21) ಮತ್ತೊಂದು ಪ್ರಕರಣ ದಾಖಲಾಗಿತ್ತು. ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೂ ತಡೆ ಆರೋಪ ಮಾಡಿ ಐಪಿಸಿ 143, 147, 341, 504, 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿತ್ತು.

Tags:    

Similar News